ಹೊಸದಿಲ್ಲಿ : ಐಡಿಯಾ ಸೆಲ್ಯುಲರ್ ಮತ್ತು ವೋಡಾಫೋನ್ ಇಂಡಿಯಾ ವಿಲಯನ ಇದೀಗ ಪೂರ್ಣಗೊಂಡಿದೆ. ಈ ಮೂಲಕ 40.80 ಕೋಟಿ ನೋಂದಾವಣೆದಾರರನ್ನು ಹೊಂದಿರುವ ಭಾರತದ ಅತೀ ದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆ ಸೃಷ್ಟಿಯಾಗಿದೆ.
“ವೋಡಾಫೋನ್ ಐಡಿಯಾ ಲಿಮಿಟೆಡ್’ ಎಂಬ ಹೊಸ ಹೆಸರಿನಡಿ ವಿಲಯನಗೊಂಡಿರವ ಸಂಸ್ಥೆಗೆ ಹೊಸ ಆಡಳಿತ ಮಂಡಳಿಯನ್ನು ರೂಪಿಸಲಾಗಿದೆ. ಆರು ಸ್ವತಂತ್ರ ನಿರ್ದೇಶಕರನ್ನು ಒಳಗೊಂಡಂತೆ ಒಟ್ಟು 12 ನಿರ್ದೇಶಕರು ಆಡಳಿತ ಮಂಡಳಿಯಲ್ಲಿ ಇದ್ದಾರೆ. ಕುಮಾರ ಮಂಗಲಂ ಬಿರ್ಲಾ ಅಧ್ಯಕ್ಷರಾಗಿರುತ್ತಾರೆ.
ನೂತನ ಆಡಳಿತ ಮಂಡಳಿಯು ಬಲೇಶ ಶರ್ಮಾ ಅವರನ್ನು ಸಿಇಓ ಆಗಿ ನೇಮಿಸಿರುವುದಾಗಿ ಜಂಟಿ ಪ್ರಕಟನೆ ತಿಳಿಸಿದೆ.
ದೇಶದ 9 ಟೆಲಿಕಾಂ ಸರ್ಕಲ್ ಲ್ಲಿ ಏಕಮೇವಾದ್ವಿತೀಯನಾಗಿರುವ ಹೊಸ ಸಂಸ್ಥೆಯು ಶೇ.32.2 ಮಾರುಕಟ್ಟೆ ಪಾಲನ್ನು ಹೊಂದಿದೆ. ವಿಲಯನ ಪೂರ್ಣಗೊಂಡಿರುವ ಹೊರತಾಗಿಯೂ ವೋಡಾಫೋನ್ ಮತ್ತು ಐಡಿಯಾ ಬ್ರಾಂಡ್‌ಗಳು ಮುಂದುವರಿಯಲಿವೆ ಎಂದು ನೂತನ ಕಂಪೆನಿ ತಿಳಿಸಿದೆ.
ವೋಡಾಫೋನ್ ಐಡಿಯಾ ಕಂಪೆನಿಯು ಇದೀಗ ಟೆಲಿಕಾಂ ದಿಗ್ಗಜನಾಗಿ ಅಗ್ರ ಸ್ಥಾನದಲ್ಲಿರುವ ಭಾರ್ತಿ ಏರ್‌ಟೆಲ್ ಸಂಸ್ಥೆಯನ್ನು ಕೆಳಗಿಳಿಸಿದೆ. ಈಗಿನ್ನು ವೋಡಾಫೋನ್ ಐಡಿಯಾ ಸಂಸ್ಥೆಯು, ಟೆಲಿಕಾಂ ರಂಗದ ಲ್ಲಿ ಪಾರಮ್ಯಕ್ಕಾಗಿ ಕತ್ತುಕತ್ತಿನ ಸ್ಪರ್ಧೆ ನೀಡುತ್ತಿರುವ ರಿಲಯನ್ಸ್ ಜಿಯೋ ವಿರುದ್ಧ ಹೊಸ ಶಕ್ತಿಯೊಂದಿಗೆ ಸೆಣಸಲಿದೆ.