ಕ್ರಿಕೆಟ್ ಯಾರಿಗೆ ತಾನೇ ಪರಿಚಯವಿಲ್ಲ? ಕ್ರಿಕೆಟ್ ನೋಡದೇ ಇರುವವರು ಅಥವಾ ಆಡದೇ ಇರುವವರು ವಿರಳ. ಭಾರತದಲ್ಲಿ ಟೆನಿಸ್ ಬಾಲ್ ಗಳು ಟೆನ್ನಿಸ್ ಆಡುವುದಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಆಡುವುದಕ್ಕಾಗಿಯೇ ಹೆಚ್ಚು ಬಳಕೆಯಾಗುತ್ತವೆ. ಕರ್ನಾಟಕದ ಏಕೈಕ ಕ್ರಿಕೆಟ್ ಟೆನ್ನಿಸ್ ಬಾಲ್ ಘಟಕ ಉತ್ತರಕನ್ನಡ ಜಿಲ್ಲೆಯ ಕುಮಟಾದ ಹೆಗಡೆ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿದೆ. ಇಲ್ಲಿರುವ ಸೋಹಮ್ ರಬ್ಬರ್ ಟೆಕ್, ಕಳೆದ 35 ವರ್ಷಗಳಿಂದ “ಒಲಿಂಪಿಕ್’ ಬ್ರಾಂಡ್‌ನ ಬಾಲ್‌ಗಳನ್ನು ಉತ್ಪಾದಿಸುತ್ತಿದ್ದು, ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಲ್ಲೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡು ಮನೆಮಾತಾಗಿದೆ. ಆ ಮೂಲಕ ಸ್ವದೇಶಿ ಕ್ರಾಂತಿಗೆ ಹೊಸ ಭಾಷ್ಯ ಬರೆದಿದೆ.
ಉದ್ಯಮ ಸ್ಥಾಪನೆ : ಮೂಲತಃ ಕುಮಟಾದ ಮಾನೀರ ಗ್ರಾಮದವರಾದ ಎಂ.ಜಿ.ಹೆಗಡೆ ಹಲವು ವರ್ಷ ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವ ಹಿಸಿದ್ದರು. ಗುಜರಾತಿನ ಬಾಲ್ ಉತ್ಪಾದನಾ ಕಂಪನಿಯೊಂದರಲ್ಲಿ ಕೆಲಕಾಲ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡಿದರು. ನಂತರದ ದಿನಗಳಲ್ಲಿ ಅದೇ ಸಂಸ್ಥೆಯಲ್ಲಿ ಪಾಲುದಾರರಾದರು. ಅಲ್ಲಿ ಬಾಲ್ ಉತ್ಪಾದನೆಯ ಕುರಿತು ಅನುಭವ ಪಡೆದಹೆಗಡೆ, 1985ರಲ್ಲಿ ಸಹೋದರ ನೊಂದಿಗೆ ಕುಮಟಾದಲ್ಲಿ “ಪ್ರಸಾದ ಪ್ರಾಡಕ್ಟ್’ ಎಂಬ ಹೆಸರಿನಲ್ಲಿ ಕ್ರಿಕೆಟ್ ಟೆನ್ನಿಸ್ ಬಾಲ್ ತಯಾರಿಕಾ ಘಟಕವನ್ನು ಆರಂಭಿಸಿದರು. ನಾನು ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದರೂ, ನಮ್ಮೂರಿನಲ್ಲಿಯೇ ಏನಾದರೂ ಸಾಧಿಸಬೇಕೆಂಬ ಹುಮ್ಮಸ್ಸು ಹೆಚ್ಚಾಗಿತ್ತು. ಕಚ್ಚಾವಸ್ತುಗಳೂ ಕೂಡಾ ಸ್ಥಳೀಯವಾಗಿ ಲಭ್ಯವಾಯಿತು. 1985ರಲ್ಲಿ ಕುಮಟಾಕ್ಕೆ ಬಂದು ಸಹೋದರನೊಂದಿಗೆ ಸಣ್ಣಪ್ರಮಾಣದಲ್ಲಿ ಟೆನ್ನಿಸ್ ಬಾಲ್ ಉತ್ಪಾದನಾ ಘಟಕ ಪ್ರಾರಂಭಿಸಿದೆ ಎನ್ನುತ್ತಾರೆ ಎಂ.ಜಿ. ಹೆಗಡೆ.
ಸಂಪೂರ್ಣ ಮ್ಯಾನ್‌ಮೇಡ್ ಬಾಲ್ : 1985ರಲ್ಲಿ ಪ್ರಾರಂಭವಾದ ಪ್ರಸಾದ್ ಪ್ರಾಡಕ್ಟ್ಸ್ ಹೆಸರಿನ ಘಟಕ 2014ರಿಂದ “ಸೋಹಮ್ ರಬ್ಬರ್ ಟೆಕ್’ ಎಂಬ ಹೆಸರಿನಿಂದ ಟೆನ್ನಿಸ್ ಬಾಲ್ ತಯಾರಿಕೆಯನ್ನು ಮುಂದುವರಿಸಿದೆ. ನೈಸರ್ಗಿಕ ರಬ್ಬರ್ ಖರೀದಿ, ರಬ್ಬರ್ ಹದಗೊಳಿಸುವಿಕೆಯಿಂದ ಹಿಡಿದು ಚೆಂಡಿನ ಗುಣಮಟ್ಟದ ಪರೀಕ್ಷೆ, ಟ್ರೇಡ್‌ಮಾರ್ಕ್ ಅಂಟಿಸು ವುದು, ಪ್ಯಾಕಿಂಗ್… ಹೀಗೆ ಹದಿನೈದು ಹಂತಗಳಲ್ಲಿಯೂ ಮಾನವಶ್ರಮ ಬಳಕೆಯಾಗುತ್ತಿರುವುದು ವಿಶೇಷ! ಸೋಹಮ್ ರಬ್ಬರ್ ಟೆಕ್ ಘಟಕದಲ್ಲಿ ಸದ್ಯ ಸುಮಾರು 15 ಕಾರ್ಮಿಕರು ಕೆಲಸ ಮಾಡುತ್ತಿದ್ದು, 125 ಗ್ರಾಂ, 75 ಗ್ರಾಂ ಮತ್ತು 58 ಗ್ರಾಂನ ಟೂರ್ನಿಮೆಂಟ್ ಟೆನ್ನಿಸ್ ಬಾಲ್, ಹಾರ್ಡ್ ಟೆನ್ನಿಸ್ ಬಾಲ್, ಲೋ ಟೆನ್ನಿಸ್ ಬಾಲ್ ಮತ್ತು ಪೆಂಚ್ ಬಾಲ್ ಹೀಗೆ ವಿವಿಧ ರೀತಿಯ ಟೆನ್ನಿಸ್ ಬಾಲ್ ಸಿದ್ಧಗೊಳ್ಳುತ್ತಿದೆ. ಪ್ರತಿನಿತ್ಯ ಸುಮಾರು 1000 ಚೆಂಡುಗಳು ಇಲ್ಲಿ ಸಿದ್ಧಗೊಳ್ಳುತ್ತದೆ.
ಹೊರರಾಜ್ಯಗಳಲ್ಲೂ ಬೇಡಿಕೆ : ಘಟಕದ ಎಲ್ಲಾ ಯಂತ್ರಗಳು ಸ್ವಯಂ ಚಾಲಿತ ಯಂತ್ರಗಳಲ್ಲ. ಇಲ್ಲಿ ಪ್ರತಿಯೊಂದೂ ಹಂತಗಳಲ್ಲಿಯೂ ಕಾರ್ಮಿಕರ ಭಾಗವಹಿಸುವಿಕೆ ಅಗತ್ಯ. ಹೀಗಾಗಿ ಉತ್ಪಾದನೆಯಾಗುವ ಪ್ರತಿಯೊಂದು ಚೆಂಡುಗಳ ಗುಣಮಟ್ಟ ಪರಿಶೀಲನೆಯಾಗುತ್ತದೆ. ರಾಯಚೂರು, ಬೀದರ್, ಮಂಗಳೂರು, ಉಡುಪಿ, ಕೊಪ್ಪಳ ಸೇರಿದಂತೆ ಕೇರಳ ಗೋವಾ, ಮಹಾರಾಷ್ಟ್ರದಲ್ಲಿಯೂ “ಒಲಿಂಪಿಕ್’ ಚೆಂಡಿಗೆ ಬೇಡಿಕೆ ಇದೆ ಎನ್ನುತ್ತಾರೆ ಸಂಸ್ಥೆಯ ಸಿಇಓ ದಿನೇಶ ಹೆಗಡೆ ಮಾನೀರ.
ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಘಟಕದಲ್ಲಿ 2 ತಿಂಗಳುಗಳ ಬಳಿಕ ಮತ್ತೆ ಉತ್ಪಾದನೆ ಪುನರಾರಂಭಗೊಂಡಿದೆ. ಮಳೆಗಾಲದ ಬಳಿಕ ಬೇಡಿಕೆ ಹೆಚ್ಚುವ ನಿರೀಕ್ಷೆಯಲ್ಲಿ ಬಾಲ್‌ಗಳನ್ನು ತಯಾರಿಸಿ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. “ಮೇಕ್ ಇನ್‌ಇಂಡಿಯಾ’, “ಆತ್ಮನಿರ್ಭರ ಭಾರತ’ದಂಥ ಸ್ವದೇಶಿ ಅಭಿಯಾನಕ್ಕೆ ನಮ್ಮದೊಂದು ಪುಟ್ಟ ಕೊಡುಗೆ ಎನ್ನುತ್ತಾರೆ ಎಂ.ಜಿ. ಹೆಗಡೆ. ಬಾಲಿನ ದೀರ್ಘ ಬಾಳಿಕೆ, ಗಟ್ಟಿತನ ಮತ್ತು ಮೈದಾನದಲ್ಲಿನ ವಿಶೇಷ ಪುಟಿತ ಗುಣಗಳಿಂದಾಗಿ”ಒಲಿಂಪಿಕ್’ ಬಾಲ್ ಕ್ರಿಕೆಟಿಗರ ಮನಸ್ಸನ್ನು ಗೆದ್ದಿದೆ.ಈ ಸಂಸ್ಥೆಯ ಎಂಡಿ, ಎಂ.ಜಿ. ಹಗಡೆ ಅವರನ್ನು ಸಂಪರ್ಕಿಸಲು: 9008012789, 9845806855.
-ಎಂ.ಎಸ್. ಶೋಭಿತ್, ಮೂಡ್ಕಣಿ