ಕಲಬುರಗಿ: ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು, ಬಾರ್ ಅಸೋಸಿಯೇಶನ್ ಸದಸ್ಯರಿಗೆ, ನ್ಯಾಯಾಂಗ ಇಲಾಖೆಯ ಸಿಬ್ಬಂದಿಗೆ ಬಾರ್ ಅಸೋಸಿಯೇಶನ್ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್ (ಮತ ಖಾತ್ರಿ ಯಂತ್ರ) ಕುರಿತು ಮಾಹಿತಿ ನೀಡಲಾಯಿತು.
ಜಿಲ್ಲಾ ಪ್ರಭಾರಿ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧಿಧೀಶ ವಿ.ವಿ. ಮಲ್ಲಾಪುರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ
ಆರ್.ಕೆ. ಹಿರೇಮಠ, ಕಾರ್ಯದರ್ಶಿ ಬಿ.ಎನ್. ಪಾಟೀಲ ಸೇರಿದಂತೆ ವಿವಿಧ ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಧೀಶರುಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹಾಗೂ ಭಾರತ ಇಲೆಕ್ಟ್ರಿಕಲ್ ಲಿಮಿಲಿಟೆಡ್‌ನ ಇಂಜಿನಿಯರ್ ನರೇಂದ್ರ ಕೌಶಿಕ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಕೌಶಿಕ ಅವರು ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ನೊಂದಿಗೆ ಪ್ರಥಮ ಬಾರಿಗೆ ಮತ ಖಾತ್ರಿ ಪಡಿಸುವ ವಿವಿಪ್ಯಾಟ್ ಯಂತ್ರ ಬಳಸಲಾಗುತ್ತಿದೆ. ಇವಿಎಂನ ಬ್ಯಾಲೆಟ್ ಯುನಿಟ್‌ನಲ್ಲಿ ಮತದಾನದ ಗುಂಡಿ ಒತ್ತಿದ ನಂತರ ಯಾರಿಗೆ ಮತ ಹಾಕಲಾಗಿದೆ ಎಂಬುವುದರ ಬಗ್ಗೆ ಅಭ್ಯರ್ಥಿಯ ಕ್ರಮ ಸಂಖ್ಯೆ, ಅಭ್ಯರ್ಥಿಯ ಹೆಸರು ಮತ್ತು ಚಿಹ್ನೆಯ ವಿವರವುಳ್ಳ ಏಳು ಸೆಕೆಂಡ್‌ಗಳ ಕಾಲ ಚೀಟಿ ವಿವಿ ಪ್ಯಾಟ್ ಯಂತ್ರದಲ್ಲಿ ಪ್ರದರ್ಶನಗೊಂಡು ಸ್ವಯಂ ಚಾಲಿತವಾಗಿ ಕತ್ತರಿಸಿ ಪೆಟ್ಟಿಗೆಯಲ್ಲಿ ಬೀಳುತ್ತದೆ. ಇ.ವಿ.ಎಂ. ಮತ್ತು ವಿವಿ ಪ್ಯಾಟ್ ಯಂತ್ರ ವಿರೂಪಗೊಳಿಸುವುದು ಅಸಾಧ್ಯವಾಗಿದ್ದು, ಇವುಗಳು ವಿಶ್ವಾಸಾರ್ಹ ಯಂತ್ರವಾಗಿವೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ಜಿಲ್ಲಾ ನ್ಯಾಯಾಲಯದ ವಿವಿಧ ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಧೀಶರು, ಕಲಬುರಗಿ ಸಹಾಯಕ ಆಯುಕ್ತ ಎನ್.ಆರ್. ಉಮೇಶಚಂದ್ರ, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಸೇರಿದಂತೆ ನ್ಯಾಯವಾದಿಗಳು, ಬಾರ್ ಅಸೋಸಿಯೇಶನ್ ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.