ಧಾರವಾಡ: ಜಿಲ್ಲೆಯಾದ್ಯಂತ ಮತದಾನದ ಪ್ರಮಾಣ ಹೆಚ್ಚು ಮಾಡಲು ನಿರಂತರವಾಗಿ ಚಟುವಟಿಕೆಗಳನ್ನು ನಡೆಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿಯು ಆಕಾಶವಾಣಿ ಮೂಲಕ ಇವಿಎಂ ಮತ್ತು ವಿವಿ ಪ್ಯಾಟ್ ಯಂತ್ರಗಳ ಬಳಕೆ ಕುರಿತು ಕೇಳುಗರಿಗೆ ನೇರ ಪ್ರಸಾರದಲ್ಲಿ ಪ್ರಾತ್ಯಕ್ಷಿಕೆ ಒದಗಿಸುವ ವಿನೂತನ ಪ್ರಯತ್ನ ಮಾಡಿತು.
ಮಧ್ಯಾಹ್ನ 12:30ರಿಂದ 1ಗಂಟೆಯವರೆಗೆ ಮಹಿಳಾ ರಂಗ ಕಾರ್ಯಕ್ರಮದಲ್ಲಿ ಜನತಂತ್ರ ಮತಯಂತ್ರ ನೇರಫೋನ್
ಇನ್ ಕಾರ್ಯಕ್ರಮ ನಡೆಯಿತು. ಜಿಲ್ಲೆ ಹಾಗೂ ದೂರದ ಕೊಪ್ಪಳ, ರಾಯಚೂರು, ಕಲಬುರ್ಗಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕೇಳುಗರು ಕರೆ ಮಾಡಿ ಮಾಹಿತಿ ಪಡೆದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ಆರ್ ಸ್ನೇಹಲ್ ಅವರು, ಮತದಾನದ ಮಹತ್ವ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತಕ್ಕಿರುವ ಮೌಲ್ಯದ ಕುರಿತು ಪರಿಣಾಮಕಾರಿಯಾಗಿ ಮಾತನಾಡಿದರು. ಕಾರ್ಯಕ್ರಮ ನಿರ್ವಾಹಕಿ ಮಂಜುಳಾ ಪುರಾಣಿಕ ನಿರೂಪಿಸಿದರು. ನಂತರ ನಡೆದ ಇವಿಎಂ ಮತ್ತು ವಿವಿಪ್ಯಾಟ್ ಬಳಕೆ ಕುರಿತ ಕಾರ್ಯಾಗಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನವೀನ ಶಿಂತ್ರೆ, ಪ್ರೊಬೇಷನರಿ ಎ.ಸಿ. ಪಾರ್ವತಿ ರೆಡ್ಡಿ ಭಾಗವಹಿಸಿದ್ದರು.