Advertisement

ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ‘ಆಳ್ವಾಸ್‌ ವಿದ್ಯಾರ್ಥಿ ಸಿರಿ’ಗರಿ

03:49 PM Dec 01, 2017 | Team Udayavani |

ನಗರ: ವಿವೇಕಾನಂದ ವಿದ್ಯಾವರ್ಧಕ ಸಂಘವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡದ ಕೊಡುಗೆಯನ್ನು ಪರಿಗಣಿಸಿ ಮೂಡಬಿದಿರೆಯ ಆಳ್ವಾಸ್‌ ನುಡಿಸಿರಿಯ ‘ಆಳ್ವಾಸ್‌ ವಿದ್ಯಾರ್ಥಿ ಸಿರಿ-2017’ ಗೌರವವನ್ನು ನೀಡಿ ಗುರುವಾರ ಅಭಿನಂದಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್‌ ಪ್ರಶಸ್ತಿ ಸ್ವೀಕರಿಸಿದರು.

Advertisement

ವಿವೇಕಾನಂದ ವಿದ್ಯಾವರ್ಧಕ ಸಂಘ 102 ವರ್ಷಗಳಿಂದ ಶೆ„ಕ್ಷಣಿಕ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆ ನೀಡುತ್ತಿದ್ದು, ಶಿಶುಮಂದಿರಗಳಿಂದ ತೊಡಗಿ ಎಂಜಿನಿಯರಿಂಗ್‌ನಂತಹ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ವಿದ್ಯಾವರ್ಧಕ ಸಂಘ ಪ್ರಾಥಮಿಕ ಶಿಕ್ಷಣಕ್ಕೆ ಮತ್ತು ಮಾತೃ ಭಾಷೆಯಾದ ಕನ್ನಡ ಮಾಧ್ಯಮಕ್ಕೆ ಒತ್ತುಕೊಟ್ಟು ಹಲವು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಇರುವ ಎಲ್ಲ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪುತ್ತೂರು, ಬಂಟ್ವಾಳ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 15 ಶಿಶುಮಂದಿರಗಳನ್ನು ನಡೆಸುತ್ತಿದೆ.

ಭವಿಷ್ಯದ ಭಾರತಕ್ಕೆ ಬೇಕಾದ ದಕ್ಷ ಅಧಿಕಾರಿಗಳನ್ನು ತಯಾರು ಮಾಡುವ ಸದುದ್ದೇಶದಿಂದ ಯಶಸ್‌ ಪರಿಕಲ್ಪನೆಯ ಅಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ವಿಭಾಗವನ್ನು ನಡೆಸುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಬೇಕಾದ ವಿಶೇಷ ಕೌಶಲದ ತರಬೇತಿ, ಉದ್ಯೋಗ ಒದಗಿಸಲು ವಿವೇಕಾನಂದ ಉದ್ಯೋಗ ಮಾಹಿತಿ ಮತ್ತು ತರಬೇತಿ ಸಂಸ್ಥೆಯನ್ನು ಆರಂಭಿಸಿದೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯ ಸಾಮಾಜಿಕ ಪರಿವರ್ತನೆಯಿಂದ ಪ್ರಗತಿ ಸಾಧನೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕ್ರೀಡೆ, ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನೊಳಗೊಂಡ ಶುದ್ಧ, ಸರಳ ಮತ್ತು ಆಧುನಿಕ ಶಿಕ್ಷಣವನ್ನು ನೀಡುವುದಲ್ಲದೆ ವಿದ್ಯಾರ್ಥಿ ಸಮೂಹದಲ್ಲಿ ನಿಸ್ವಾರ್ಥ, ಶ್ರದ್ಧಾಪೂರ್ಣ, ರಾಷ್ಟ್ರ ಸೇವೆಯ ಚೈತನ್ಯವನ್ನು ಉದ್ದೀಪನ ಗೊಳಿಸುವುದಾಗಿದೆ. ಯುವಜನಾಂಗದಲ್ಲಿ ಶ್ರೇಷ್ಠತಮ ಶೀಲ ಸಂವರ್ಧನೆಯನ್ನು ಮೈಗೂಡಿಸುವುದು ಹಾಗೂ ವಿದ್ಯಾರ್ಥಿ ಗಳಲ್ಲಿ ಒಳ್ಳೆಯ ನಡತೆ, ಉತ್ತಮ ಹವ್ಯಾಸ-ಸದಭಿರುಚಿಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದಾಗಿದೆ.

ಈ ಹಿನ್ನೆಲೆಯಲ್ಲಿ ಆಳ್ವಾಸ್‌ ವಿದ್ಯಾರ್ಥಿ ಸಿರಿ- 2017ನ್ನು ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಸಮಿತಿಯ ಅಧ್ಯಕ್ಷ ಎಚ್‌. ಅಚ್ಯುತ್‌ ನಾಯಕ್‌, ಕೋಶಾಧಿಕಾರಿ ವಸಂತ ಸುವರ್ಣ ಮತ್ತು ಉಪ್ಪಿನಂಗಡಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಯು.ಜಿ. ರಾಧಾ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಿಇಒ ಭಾಸ್ಕರ ಬಿ. ಉಪಸ್ಥಿತರಿದ್ದರು.

Advertisement

ಎಫ್ಎಂ ರೇಡಿಯೋ
ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನಡೆಸುತ್ತಿರುವ ವಿದ್ಯಾಸಂಸ್ಥೆಗಳ ಮೂಲಕ ಒಟ್ಟು 36 ಗ್ರಾಮಗಳಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಶಿಕ್ಷಣ, ಸಂಸ್ಕಾರ, ಅರೋಗ್ಯ, ಸ್ವಾವಲಂಬನೆ, ಮಹಿಳಾ ಕಾರ್ಯ, ಸುರಕ್ಷಾ ಮತ್ತು ಕೃಷಿ ಕ್ಷೇತ್ರಗಳಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದೆ. ಧ್ವನಿ ಮಾಧ್ಯಮದ ಮೂಲಕ ಸಮುದಾಯ ಸಬಲೀಕರಣದ ಸಂದೇಶವನ್ನು ಪ್ರಸಾರ ಮಾಡುವ ಸದುದ್ದೇಶದಿಂದ, ಸಮುದಾಯದಿಂದ, ಸಮುದಾಯಕ್ಕಾಗಿ,
ಸಮುದಾಯವೇ ನಡೆಸುವ ರೇಡಿಯೋ ಪಾಂಚಜನ್ಯ 90.8 ಎಫ್‌.ಎಂ.ಅನ್ನು ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next