ಯಾದಗಿರಿ: ನಮ್ಮ ಭವ್ಯ ಭಾರತದ ದಿವ್ಯ ಸಂಸ್ಕೃತಿಯ ವೈಭವವನ್ನು ವಿವೇಕಾನಂದರು ಜಗತ್ತಿಗೆ ಸಾರಿದ್ದಾರೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್ ತಿಳಿಸಿದರು.
ಇಲ್ಲಿನ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಸ್ವಾಮಿ ವಿವೇಕಾನಂದರ 159ನೇ ಜಯಂತಿ ಹಾಗೂ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ “ಯುವ ಸಪ್ತಾಹ ಹಾಗೂ ರಾಷ್ಟ್ರೀಯ ಯುವ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್ ಆಗ್ತಾರೆ. ಆದರೆ ಅವರ ಗೆಳೆಯನ್ನೊಬ್ಬ ಪಾಸ್ ಆಗ್ತಾನೆ. ಇವರಿಗೆ ತಾವು ಫೇಲ್ ಆಗಿದ್ದ ದುಃಖಕ್ಕಿಂತ ತನ್ನ ಗೆಳೆಯ ಪಾಸ್ ಆಗಿದ್ದಕ್ಕೆ ಅವರಿಗೆ ಇನ್ನೂ ಜಾಸ್ತಿ ದುಃ ಖವಾಗುತ್ತದೆ ಎಂದ ಅವರು, ಸ್ವಾಮಿ ವಿವೇಕಾನಂದರು ಹೇಳುವಂತೆ ಇನ್ನೊಬ್ಬರ ಮೇಲೆ ಅವಲಂಬಿತವಾಗದೆ ನಿನ್ನನ್ನು ನೀನು ರೂಪಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ಮಾತನಾಡಿ, ಸ್ವಾಮಿ ವಿವೇಕಾನಂದರು ತಮ್ಮ ಜೀವಿತದ ಕೆಲವೇ ವರ್ಷಗಳಲ್ಲಿ ಮಾಡಿದ ಸಾಧನೆ ಅಗಾಧವಾಗಿದೆ ಎಂದರು.
ಲೀಡ್ ಕಾಲೇಜು ಪ್ರಾಂಶುಪಾಲ ಡಾ| ಸುಭಾಶ್ಚಂದ್ರ ಕೌಲಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಅಶೋಕ ತೋಟದ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ರಾಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ| ದೇವಿಂದ್ರಪ್ಪ ಹಳಿಮನಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.