ಧಾರವಾಡ: ಯುವ ಸಮುದಾಯದಲ್ಲಿ ವಯೋ ಸಹಜವಾಗಿ ಆಕರ್ಷಣೆಗಳು ಉಂಟಾಗುತ್ತವೆ. ಆದರೆ ಅವು ಕ್ಷಣಿಕವಾಗಿರುತ್ತವೆ. ಅವುಗಳನ್ನು ನಮ್ಮ ಅಧೀನ ದಲ್ಲಿರಿಸಿಕೊಂಡು ಮುಂದೆ ಸಾಗಿದಾಗ ವ್ಯಕ್ತಿಗತ ಮತ್ತು ದೇಶದ ಭವಿಷ್ಯ ರೂಪಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರು ಸಾಗಿದ ಹಾದಿ ನಮಗೆ ಆದರ್ಶಪ್ರಾಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿ.ಶ್ರೀಶಾನಂದ ಹೇಳಿದರು.
ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾ ಆಡಳಿತ, ಜಿಪಂ, ಪೊಲೀಸ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಕೀಲರ ಸಂಘಗಳ ಆಶ್ರಯದಲ್ಲಿ ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲೇ ಅತಿ ಹೆಚ್ಚು ಯುವ ಶಕ್ತಿಯ ಸಂಪನ್ಮೂಲಧಿ ವನ್ನು ಭಾರತ ಹೊಂದಿದೆ. ಸಂಸ್ಕೃತಿಯ ಮೇಲೆ ನಾನಾ ರೀತಿಯ ದಾಳಿಗಳ ಮೂಲಕ ಯುವಶಕ್ತಿಯನ್ನು ತಪ್ಪು ಹಾದಿಗೆ ಎಳೆಯುವ ಪ್ರಯತ್ನಗಳು ನಡೆಯುತ್ತಿದ್ದು, ಯುವಜನತೆ ತಮ್ಮ ಜವಾಬ್ದಾರಿ ಅರಿತು ಹೆಜ್ಜೆ ಇಡಬೇಕು ಎಂದರು. ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಮತ್ತೂಬ್ಬರಿಗೆ ನೋವಾಗುವಂತಹ ಮಾತುಗಳನ್ನು ಆಡಬಾರದು ಎಂದರು.
ಜಿಪಂ ಸಿಇಒ ಆರ್.ಸ್ನೇಹಲ್ ಮಾತನಾಡಿ, ಧಾರವಾಡದ ಕರ್ನಾಟಕ ಕಾಲೇಜು ತನ್ನ ಶೈಕ್ಷಣಿಕ ಉತ್ಕೃಷ್ಟತೆಗೆ ಹೆಸರಾಗಿದೆ. ಇಲ್ಲಿ ಅಧ್ಯಯನ ಮಾಡಿದವರು ಮಹಾನ್ ಸಾಧನೆ ಮಾಡಿದ್ದಾರೆ. ಅಂತಹ ಪವಿತ್ರ ಸ್ಥಳದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆ ಹಿರಿಯರ ಹಾದಿಯನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ್ವಾಮಿ ವಿವೇಕಾನಂದರ ಜನ್ಮ ದಿನೋತ್ಸವ ಅಂಗವಾಗಿ ಹೊರ ತಂದ ಕಿರು ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕೆಸಿಡಿ ಉಪ ಪ್ರಿನ್ಸಿಪಾಲ್ ಡಾ| ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕಾಮರಡ್ಡಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ಬಿ.ಎಸ್. ಸಂಗಟಿ, ಪ್ರಫುಲ್ಲಾ ಎಸ್.ನಾಯಕ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಚೇತಾ ನೆಲವಗಿ, ನೆಹರೂ ಯುವ ಕೇಂದ್ರದ ಪುರಾಣಿಕಮಠ ಇದ್ದರು. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಸ್.ಎನ್. ಹೆಗಡೆ ಸ್ವಾಗತಿಸಿದರು. ಎನ್.ಎಸ್.ಎಸ್. ಅಧಿಕಾರಿ ಡಾ|ಬಿ.ಎಸ್.ಭಜಂತ್ರಿ ವಂದಿಸಿದರು.