Advertisement

ಜಿಲ್ಲಾದ್ಯಂತ ವಿವೇಕಾನಂದರ ಜನ್ಮ ದಿನಾಚರಣೆ

03:59 PM Jan 13, 2020 | Suhan S |

ಕೋಲಾರ: ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ, ದೇಶ ನಿರ್ಮಾಣ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸ್ವಾಮಿ ವಿವೇಕಾನಂದರ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 157ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ವಿವರಿಸಿದರು.

Advertisement

ಯುವಕರು ಶಿಕ್ಷಣ ಪಡೆದುಕೊಂಡಾಗ ಮಾತ್ರ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂಬುದನ್ನು ಸ್ವಾಮಿ ವಿವೇಕಾನಂದರ ಉದ್ದೇಶವಾಗಿದ್ದು, ಅದನ್ನು ಈಡೇರಿಸುವ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು ಎಂದು ಶ್ರೀನಿವಾಸಗೌಡ ಸಲಹೆ ನೀಡಿದರು. ಉತ್ತಮ ಫ‌ಲಿತಾಂಶಕ್ಕೆ ಶ್ರಮಿಸಿ: ಹಲವು ದಶಕಗಳ ಹಿಂದೆ ರಾಮಕೃಷ್ಣ ಉಡುಪ ಈ ಕಾಲೇಜಿನ ಪ್ರಾಂಶುಪಾಲರಾಗಿದ್ದಾಗ ಕಾಲೇಜು ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿತ್ತು. ಬದಲಾದ ಪರಿಸ್ಥಿತಿಯಿಂದ ಫಲಿತಾಂಶದಲ್ಲಿ ಹಿಂದೆ ಉಳಿದಿದೆ. ಪ್ರಾಧ್ಯಪಕರು ಜವಾಬ್ದಾರಿ ಅರಿತು ಕೆಲಸ ಮಾಡಿ ಫಲಿತಾಂಶವನ್ನು ಉತ್ತಮ ಪಡಿಸಬೇಕು ಎಂದು ಸೂಚಿಸಿದರು.

ಸಮಾಜಕ್ಕೆ ಕೊಡುಗೆ ನೀಡಿ: ಇಲ್ಲಿ ವ್ಯಾಸಂಗ ಮಾಡಿದವರು ರಾಜಕೀಯವಾಗಿ, ವಿವಿಧ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿ ಅನೇಕ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಸಾಧನೆಯನ್ನು ಸ್ಫೂರ್ತಿಯಾಗಿ ಪಡೆದುಕೊಂಡು ಸದೃಢ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಯೋಜನ ಕಲ್ಪಿಸಿ: ಕಾಲೇಜಿನ ಈಗಿನ ಫಲಿತಾಂಶ ಗಮನಿಸಿದರೆ ಬೇಸರವಾಗುತ್ತದೆ. ವಿದ್ಯಾರ್ಥಿಗಳು ಹೊರಗಡೆ ಓಡಾಡುತ್ತಿರುವುದನ್ನು ನೋಡಿದರೆ ಕಾಲೇಜು ನಡೆಯುತ್ತಿದೆಯೋ ಇಲ್ಲವೊ ಎನ್ನಿಸುತ್ತದೆ. ಪೋಷಕರು ಆಸೆಗಳನ್ನು ಹೊತ್ತು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಪ್ರಯೋಜನೆ ಕಲ್ಪಿಸಬೇಕು ಎಂದು ಹೇಳಿದರು.

ಬಲಿಷ್ಠ ಭಾರತ: ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ವಿ.ಪುರುಷೋತ್ತಮ್‌, ಸ್ವಾಮಿ ವಿವೇಕಾನಂದರು ಅಧ್ಯಾತ್ಮಿಕ ಚಿಂತನೆ ಮೂಲಕವೇ ಸಮಾಜವನ್ನು ಸರಿದಾರಿಯತ್ತ ಕೊಂಡೊಯ್ಯುವ ಕೆಲಸ ಮಾಡಿದರು. ದೇಶದಲ್ಲಿ ಶೇ.50 ಭಾಗ ಯುವಜನರಿದ್ದಾರೆ.

Advertisement

ಸರಿಯಾದ ಮಾರ್ಗದರ್ಶನದ ಕೊರತೆಯಿಂದಾಗಿ ತಪ್ಪು ದಾರಿ ಹಿಡಿಯುತ್ತಿದ್ದರು. ವಿವೇಕಾನಂದರು ಎಚ್ಚರಿಸುವ ಮೂಲಕ ಬಲಿಷ್ಠ ಭಾರತ ಕಟ್ಟುವಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು ಎಂದು ಹೇಳಿದರು.

ಅಮೆರಿಕಾದ ಚಿಕಾಗೋದಲ್ಲಿ ನಡೆದ ಸರ್ವ ಧರ್ಮಗಳ ಸಭೆಯಲ್ಲಿ ಮಾಡಿದ ಭಾಷಣದಿಂದಲೇ ಯುವಕರ ಶಕ್ತಿಯಾಗಿದ್ದಾರೆ. ಹೇಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಘೋಷಣೆ ಯುವಕರ ಸ್ಫೂರ್ತಿಯಾಗಿದ್ದಾರೆ ಎಂದು ವಿವರಿಸಿದರು. ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ನಗರದ ಗಾಂಧಿನ ಉದ್ಯಾನದಿಂದ ಕಾಲೇಜಿತನಕ ಯುವ ಜಾಗೃತಿ ಜಾಥಾ ನಡೆಯಿತು.

ಪ್ರಾಂಶುಪಾಲೆ ಪ್ರೊ.ಮಧುಲತಾ ಮೋಸಸ್‌,ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ದೇವಿಕಾ, ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ಅನಿತಾ, ಭರತ್‌, ನಗರಸಭಾ ಸದಸ್ಯರಾಕೇಶ್‌, ಸಹ ಪ್ರಾಧ್ಯಪಕ ಆರ್‌.ಶಂಕರಪ್ಪ, ಮಹಿಳಾ ಕಾಲೇಜಿನ ಪ್ರಾಂಶುಪಾಲೆ ವೃಂದಾದೇವಿ, ಎನ್‌.ಕೃಷ್ಣಪ್ಪ, ಮಾಲೂರು ಪ್ರಾಂಶುಪಾಲ ಕೇಶವರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next