Advertisement
ದಾರಿಗಳೆ ಪಂಡರಾಪುರದೆಡೆಗೆ..
Related Articles
Advertisement
ಅಭೇದ ದೇವರು..
ಶುದ್ಧಭಕ್ತಿಯನ್ನಷ್ಟೇ ಬೇಡುವ ವಿಠೊಬನಿಗೆ ಜಾತಿ, ಧರ್ಮ, ಮತ-ಪಂಥ, ಬಡವ-ಬಲ್ಲಿದ… ಹೀಗೆ ಯಾವುದೇ ಬೇಧಗಳಿಲ್ಲ. ಈತನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಇದಕ್ಕಾಗಿ ಈತನ ಭಕ್ತರಿಗೆ “ಮಾವುಲಿ’ ಅಂತಲೇ ಕರೆಯುಲಾಗುತ್ತೆ. ಭಕ್ತರು ಪರಸ್ಪರರನ್ನು ಹೆಸರಿಟ್ಟು ಕರೆದುಕೊಳ್ಳದೇ “ಮಾವುಲಿ’ ಎಂದೇ ಸಂಬೋಧಿಸುತ್ತಾರೆ. “ಮಾವುಲಿ’ ಅಂದರೆ ಮರಾಠಿಯಲ್ಲಿ ತಾಯಿ ಎಂದರ್ಥ. ಈತನ ಭಕ್ತರಿಗೆ ವಿಠಲನೇ ತಂದೆ-ತಾಯಿ. ಪ್ರತಿ ಭಕ್ತ ಮತ್ತೂಬ್ಬ ಭಕ್ತನಲ್ಲಿ ವಿಠಲನ ಕಾಣುತ್ತಾರೆ! ಹಾಗೆ ಪ್ರತಿ ಭಕ್ತ ವಿಠಲನ ಪಾದ ಸ್ಪರ್ಶಿಸಿ, ಧನ್ಯನಾಗಲು ವಿಠಲನು ಅವಕಾಶ ಕಲ್ಪಿಸಿರುವುದು ಈತನ ವಿಶೇಷತೆ.
ಭಕ್ತರಿಂದ ಭಕ್ತರಿಗಾಗಿ…
ವಿಠೊಬನಲ್ಲಿಗೆ ಇಷ್ಟಾರ್ಥ ಸಿದ್ಧಿಗೆ, ಹರಕೆ ತೀರಿಸಲು, ನಿಷ್ಕಾಮ ಭಕ್ತಿ ಸಮರ್ಪಿಸಲು ತೆರಳುವ ದಿಂಡಿಯವರು ದಾರಿ ಉದ್ದಕ್ಕೂ ತಮ್ಮ ಊಟ, ತಂಗುವ ವ್ಯವಸ್ಥೆಗೆ ಪೂರ್ವ ಸಿದ್ಧತೆ ಮಾಡಿಕೊಂಡಿರುತ್ತಾರೆ. ಆದರೂ ಅನೇಕ ಊರುಗಳಲ್ಲಿ ದಿಂಡಿಯವರ ಸೇವೆ ಮಾಡಿ ಪಾಂಡುರಂಗನ ಕೃಪೆಗೆ ಪಾತ್ರರಾಗಿ, ಪುನೀತರಾಗಲು ಭಕ್ತರು ಕಾದಿರುತ್ತಾರೆ. ಸಕಾಮ ದಿಂಡಿಗೆ ಪೂರ್ವ ಯೋಜನೆಯಂತೆ ತಿಂಡಿ, ಊಟ, ನೀರು, ಚಿಕಿತ್ಸೆ, ತಂಗಲು ವ್ಯವಸ್ಥೆ.. ಅಚ್ಚುಕಟ್ಟಾಗಿ ಮಾಡುತ್ತಾರೆ. ವೀಣೆ, ತುಳುಸಿ ಕಟ್ಟೆಯನ್ನು ಕಂಬಳಿ ಹಾಸಿ, ಅದರ ಮೇಲಿರಿಸಿ ಶ್ರದ್ಧಾಭಕ್ತಿಯಿಂದ ಭಜಿಸಿ, ಪೂಜಿಸುತ್ತಾರೆ. ಗುಡಿ ಗುಂಡಾರ, ಶಾಲೆಗಳಲ್ಲಿ ತಂಗಲು ವ್ಯವಸ್ಥೆ ಮಾಡುತ್ತಾರೆ. ಆದರೆ ನಿಷ್ಕಾಮ ದಿಂಡಿಯವರು ಇಂತಹ ಸತ್ಕಾರವನ್ನು ನಿರಾಕರಿಸುತ್ತಾರೆ.
ವಿರಾಮದಲ್ಲೂ ರಾಮ ನಾಮ..!
ದಿಂಡಿಯ ಆದಿಯಿಂದ ಹಿಡಿದು ಪಂಡರಾಪುರದ ತನಕ ಏಕ ಭಜನೆ, ಹರಿ ನಾಮ ಸ್ಮರಣೆ ಇರುತ್ತದೆ. ಅನವಶ್ಯಕ ಮಾತುಗಳಿಗೆ ಅವಕಾಶವಿಲ್ಲ. ಅಲ್ಪ ವಿರಾಮದಲ್ಲೂ “ಜಯ ಜಯ ರಾಮ್ ಕೃಷ್ಣ ಹರಿ…’ ಹೀಗೆ ನಿರಂತರ ರಾಮ ನಾಮ ಸ್ಮರಣೆ ಮಾಡುತ್ತಾರೆ. ಸಿಗುವ ಪ್ರತಿ ಊರುಗಳಲ್ಲಿ ಭಕ್ತಿ, ಜ್ಞಾನದ ಬೆಳಕು ಚೆಲ್ಲುತ್ತಾರೆ. ತಿಂಡಿ, ಊಟಕ್ಕೆ ಬಿಟ್ಟಾಗ ಭರ್ತಿ ಗಂಟೆ ಪ್ರವಚನ ಇರುತ್ತದೆ. ಆಗ ಕೀರ್ತನೆ, ಭಜನೆ ಮಾಡುತ್ತಾರೆ. ಅಭಂಗ ಭೋಧಿಸುತ್ತಾರೆ. ಜ್ಞಾನೇಶ್ವರ ಗ್ರಂಥ ಪಠಿಸುತ್ತಾರೆ. ಸಮಯ ಪಾಲನೆಗೆ ಆದ್ಯತೆ ನೀಡುವ ದಿಂಡಿಗಳನ್ನು ಮುನ್ನೆಡೆಸಲು ದಿಂಡಿ ಮಾಲ್ಕರ್, ಹವಾಲ್ದಾರ್‌ಗಳು ಇರುತ್ತಾರೆ.
ಬದಲಾವಣೆಗೆ ನಾಂದಿ
ವ್ಯಕ್ತಿ, ಸಮಾಜದಲ್ಲಿ ಸಾಕಷ್ಟು ಬದಲಾವಣೆಗೆ ಈ ದಿಂಡಿ ಯಾತ್ರೆ ನಾಂದಿ ಹಾಡುತ್ತದೆ. ಇಲ್ಲಿ ಆತ್ಮಶುದ್ಧಿಗೆ ಆದ್ಯತೆ. ಭಕ್ತಿ ಪ್ರಭಾವದಿಂದ ಸಕರಾತ್ಮಕತೆ ತುಂಬಿ, ದುಶ್ಚಟ, ದುಬುìದ್ಧಿ, ಮನೋ ವಿಕಾರಗಳು ಕಳೆಯುತ್ತವೆ. ಮನೋ, ಆತ್ಮ ನಿಗ್ರಹ, ಸ್ಥೈರ್ಯ, ಶುದ್ಧ ಅಂತಃಕರಣ ಸಿದ್ಧಿಸುತ್ತದೆ. ಇನ್ನು ಧರ್ಮ, ಜಾತಿಯ ಹೆಸರಿನಲ್ಲಿ ಮನುಷ್ಯರನ ನಡುವಿನ ಗೋಡೆ, ಕಂದಕ ಇಲ್ಲವಾಗುತ್ತದೆ. ಪರಸ್ಪರರಲ್ಲಿ ಪ್ರೀತಿ, ಮೈತ್ರಿ ಬೆಳೆಯುತ್ತದೆ. ಲಿಂಗ ತಾರತಮ್ಯ ಅಂತ್ಯವಾಗುತ್ತದೆ. ಕೆಲ ಭಕ್ತರು ದಾರಿ ಉದ್ದಕ್ಕೂ ವರದಕ್ಷಿಣೆ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ, ಪರಿಸರ ಮಾಲಿನ್ಯ.. ಇತ್ಯಾದಿಗಳ ಬಗ್ಗೆ ಜನ ಜಾಗೃತಿ ಮಾಡುತ್ತಾ ಸಮಾಜದ ಬದಲಾವಣೆಗೆ ಶ್ರಮಿಸುತ್ತಾರೆ.
ಏಕಾದಶಿಗೆ ಭಕ್ತ ಸಾಗರ…
ದಿಂಡಿವಾರಿಗಳು ಕಾರ್ತಿಕ ಶುದ್ಧ ಏಕಾದಶಿಗೆ ಸರಿಯಾಗಿ (23 ನವೆಂಬರ್ 2023) ಮಹಾರಾಷ್ಟ್ರದ ಪಂಡರಾಪುರದ ವಿಠಲನ ಸನ್ನಿಧಿ ಸೇರುತ್ತಾರೆ. ಅಷ್ಟೊತ್ತಿಗೆ ದಿಂಡಿಗಳಲ್ಲದೆ ವಾಹನಗಳಲ್ಲಿ ಬಂದ ಲಕ್ಷ-ಲಕ್ಷ ಭಕ್ತರು ಬಂದು ಭಕ್ತರ ಸಾಗರವೇ ಕಾಣುತ್ತದೆ. ವಾಡದಲ್ಲಿ ವಾಸ್ತವ್ಯ, ಚಂದ್ರಭಾಗ (ಭೀಮಾ ನದಿ) ತೀರದಲ್ಲಿ ಸ್ನಾನ ಮಾಡಿ, ದರ್ಶನಕ್ಕೆ ಉಪವಾಸ ವ್ರತದಲ್ಲಿ ದಿನಗಟ್ಟಲೆ ಸರದಿ ಸಾಲಲ್ಲಿ ನಿಲ್ಲುತ್ತಾರೆ. ವಿಠಲ, ರುಕ್ಮಿಣಿ ಪಾದ ಸ್ಪರ್ಶಿಸಿ, ದರ್ಶಿಸಿ ಧನ್ಯರಾಗುತ್ತಾರೆ. ಆತನ ತೇರು, ಜಾತ್ರೆಗೆ ಸಾಕ್ಷಿಯಾಗಿ ದ್ವಾದಶಿಗೆ ಉಪವಾಸ ಅಂತ್ಯಗೊಳಿಸುತ್ತಾರೆ. ದರ್ಶನ ನಂತರ ಊರಿಗೆ ಮರಳುವ ಭಕ್ತರು ತಮ್ಮ ಶಕ್ಯಾಕಾöನುಸಾರ ಜನರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಾರೆ. ಇಂತಹವರು ತಮ್ಮ ಜೀವಿತ ಉದ್ದಕ್ಕೂ ಭಕ್ತಿಪಂಥ, ಪಥದಲ್ಲಿ ಸಾಗಿ ವ್ಯಕ್ತಿ, ಸಮಾಜದ ಪರಿವರ್ತನೆಗೆ ಅರ್ಪಿಸಿಕೊಳ್ಳುತ್ತಾರೆ.
-ಸ್ವರೂಪಾನಂದ ಕೊಟ್ಟೂರು