Advertisement
ಪೆರುವಾಯಿ ನಾರಾಯಣ ಭಟ್ ಬಂಟ್ವಾಳ ತಾಲೂಕಿನ ಪೆರುವಾಯಿಯವರಾದ ನಾರಾಯಣ ಭಟ್ ಹಿಮ್ಮೇಳ ವಾದನದಲ್ಲಿ ಆಸಕ್ತಿ ಹೊಂದಿದ್ದರು. ಮಾತಾಮಹರಾದ ಪ್ರಸಿದ್ಧ ಮದ್ದಲೆವಾದಕ ಕೊಂದಲಕಾಡು ನಾರಾಯಣ ಭಟ್ಟರಲ್ಲಿ ಚೆಂಡೆ – ಮದ್ದಲೆ ವಾದನ ಕಲಿತರು . 1974 ರಲ್ಲಿ ಸುಪ್ರಸಿದ್ಧ ಭಾಗವತರಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳಿಂದಾಗಿ ಸೊರ್ನಾಡ್ ಮೇಳಕ್ಕೆ ಸೇರಿ ತಿರುಗಾಟ ಆರಂಭಿಸಿದರು . 1975ರಲ್ಲಿ ಬಲಿಪ ನಾರಾಯಣ ಭಾಗವತರು ಭಟ್ಟರ ಮದ್ದಲೆ ವಾದನವನ್ನು ಮೆಚ್ಚಿ ಕಟೀಲು 2ನೇ ಮೇಳಕ್ಕೆ ಕರೆ ತಂದರು. ಅಂದು ಮೇಳದಲ್ಲಿದ್ದ ಪ್ರಸಿದ್ಧ ಮದ್ದಲೆ ವಾದಕ ನೆಡ್ಲೆ ನರಸಿಂಹ ಭಟ್‌ರ ಒಡನಾಟದಲ್ಲಿ ಮದ್ದಲೆಯ ಸೂಕ್ಷ್ಮ ಪಟ್ಟುಗಳನ್ನು ಕಲಿತರು . ಇರಾ ಗೋಪಾಲಕೃಷ್ಣ ಭಾಗವತರು , ಬಲಿಪ ಭಾಗವತರ ಸಾಂಗತ್ಯದಲ್ಲಿ ಯಕ್ಷಗಾನದ ಒಳಗನ್ನು ಅರಿತು ಹಿಮ್ಮೇಳದಲ್ಲಿ ಪಾರಮ್ಯ ಮೆರೆದರು .ನಾಜೂಕಿನ ಹೊಡೆತ , ತಾಳ – ಲಯಗಳಲ್ಲಿಯ ಅಪ್ರತಿಮ ಹಿಡಿತ , ಪರಂಪರೆ ಶೈಲಿಯ ತಾಡನಗಳಲ್ಲಿ ಹೆಸರು ಗಳಿಸಿದರು . ಯಕ್ಷಗಾನದ ಅಪರೂಪದ ಮದ್ದಲೆಯ ಸೂಕ್ಷ್ಮತೆಗಳನ್ನು ಬಲ್ಲ ಕೆಲವೇ ವಾದಕರಲ್ಲಿ ಭಟ್ಟರೂ ಓರ್ವರೆಂದು ಪರಿಗಣಿಸಲ್ಪಟ್ಟಿದ್ದಾರೆ . ಯುವ ಭಾಗವತರಾದ ಪಟ್ಲ ಸತೀಶ ಶೆಟ್ಟರು ಕಟೀಲು 2ನೇ ಮೇಳದ ಭಾಗವತರಾಗಿದ್ದ ಸಂದರ್ಭದಲ್ಲಿ ಯೋಗ್ಯ ಮಾರ್ಗದರ್ಶನ ನೀಡಿ ಪಟ್ಲ – ಪೆರುವಾಯಿ ಜೋಡಿ ಪ್ರಸಿದ್ಧವಾಗಿತ್ತು . ಹಿಮ್ಮೇಳ ವಾದಕರಾಗಿ ಐದು ದಶಕಗಳ ಕಾಲ ತಿರುಗಾಟ ನಡೆಸಿದ್ದು , ಕಟೀಲು ಮೇಳದಲ್ಲೆ 43 ವರ್ಷಗಳ ತಿರುಗಾಟ ನಡೆಸಿ , ಈ ವರ್ಷ ನಿವೃತ್ತರಾಗಿದ್ದಾರೆ .ಯಕ್ಷಗಾನ ತರಬೇತಿಯ ಮೂಲಕ ನೂರಾರು ಶಿಷ್ಯರನ್ನು ಯಕ್ಷರಂಗಕ್ಕೆ ನೀಡಿದ್ದಾರೆ . ಎಂ .ಶಾಂತರಾಮ ಕುಡ್ವ