ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಘೋಷಣೆಯಾಗಿದ್ದು, ಡಿ.27ರಂದು ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸುಗೊಂಡಿವೆ.
ಡಿ.8ರಂದು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದು, ಡಿ.15ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ ಮತ್ತು ಡಿ.18ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿ.29ರಂದು ಮರು ಮತದಾನ ಮತ್ತು ಡಿ.30ರಂದು ಮತ ಎಣಿಕೆ ನಡೆಯಲಿದೆ.
ವಿಟ್ಲ ಪ.ಪಂ. ಚುನಾವಣೆ ಪ್ರಕ್ರಿಯೆ 18 ವಾರ್ಡ್ ಗಳಲ್ಲಿ ನಡೆಯಲಿವೆ. ವಾರ್ಡ್ ಗಳ ಮೀಸಲಾತಿ ಇನ್ನೂ ಘೋಷಣೆಯಾಗಿಲ್ಲ. ಇತ್ತೀಚೆಗೆ ಒಂದು ಮೀಸಲಾತಿ ಪಟ್ಟಿ ವೈರಲ್ ಆಗಿತ್ತು. ಅದು ನಿಜವಲ್ಲ. ನಮಗೆ ಮೀಸಲಾತಿ ಪಟ್ಟಿಯ ಯಾವುದೇ ಆದೇಶ ಬಂದಿಲ್ಲ ಎಂದು ಮುಖ್ಯಾಧಿಕಾರಿ ಮಾಲಿನಿ ಉದಯವಾಣಿಗೆ ತಿಳಿಸಿದ್ದರು. ಚುನಾವಣೆ ಘೋಷಣೆಯಾಗಿದ್ದರೂ ಮೀಸಲಾತಿ ಪಟ್ಟಿ ಸಿದ್ಧವಾಗಿಲ್ಲ ಎಂಬ ಮಾಹಿತಿಯಿದೆ.
ಇದನ್ನೂ ಓದಿ:ಅನರ್ಹತೆ ಭೀತಿಯಲಿ 7 “ಕ್ಕೆ ನಗರಸಭೆ ಸದಸ್ಯರು
ಈ ಹಿಂದಿನ ಪ್ರಥಮ ಅವಧಿಯಲ್ಲಿ 18 ವಾರ್ಡುಗಳಲ್ಲಿ ಬಿಜೆಪಿ 12 ಮತ್ತು ಕಾಂಗ್ರೆಸ್ 6ರಲ್ಲಿ ಜಯಗಳಿಸಿತ್ತು. ಪ್ರಥಮ ಅವಧಿಯಲ್ಲಿ ಬಿಜೆಪಿಯ ಅರುಣ್ ಎಂ. ವಿಟ್ಲ ಅಧ್ಯಕ್ಷರಾಗಿದ್ದರು. ಎರಡನೇ ಅವಧಿಯಲ್ಲಿ ಮೀಸಲಾತಿ ಆಧಾರದಲ್ಲಿ ಬಹುಮತವಿಲ್ಲದಿದ್ದರೂ ಕಾಂಗ್ರೆಸ್ ಸದಸ್ಯೆ ದಮಯಂತಿ ಅಧ್ಯಕ್ಷರಾಗಿದ್ದರು. ಅವರ ವಿರುದ್ಧ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮೂಲಕ ಕೆಳಗಿಳಿಸಿ, ಕೊನೆಯ ಮೂರು ತಿಂಗಳ ಅವಧಿಗೆ ಬಿಜೆಪಿಯ ಚಂದ್ರಕಾಂತಿ ಶೆಟ್ಟಿ ಅಧ್ಯಕ್ಷರಾಗಲು ಅವಕಾಶ ಲಭಿಸಿತ್ತು.