Advertisement

Vitla: ಉದ್ಘಾಟನೆಯಾದ ನಾಡಕಚೇರಿ ತೆರೆದಿಲ್ಲ !

12:41 PM Nov 13, 2024 | Team Udayavani |

ವಿಟ್ಲ: ವಿಟ್ಲ ನಾಡಕಚೇರಿ ಕಟ್ಟಡ 18.84 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡಿದ್ದು ವಿಧಾನಸಭೆ ಚುನಾವಣೆ ವೇಳೆ ಉದ್ಘಾಟನೆಗೊಂಡಿದೆ. ಮೂಲ ಸೌಕರ್ಯಗಳೇ ಇಲ್ಲದ ಈ ಕಟ್ಟಡಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಸಿಬಂದಿ, ಕಡಗಳು ಸ್ಥಳಾಂತರಗೊಂಡಿಲ್ಲ. ಕಟ್ಟಡದ ನಿರ್ವಹಣೆ ಮಾಡುವವರೂ ಇಲ್ಲ. ಸುಣ್ಣ ಬಣ್ಣ ಕಂಡ ನೂತನ ಕಟ್ಟಡಕ್ಕೆ ಧೂಳು ಆವರಿಸಿ, ಹೊಸತನ ಕಳೆದುಕೊಂಡಿದೆ. ಸುತ್ತಲೂ ಹುಲ್ಲು, ಕಸ ಕಡ್ಡಿಗಳು ತುಂಬಿಕೊಂಡಿದೆ.

Advertisement

ಉದ್ಘಾಟನೆ
ವಿಟ್ಲ ಹೋಬಳಿಯ ನಾಡಕಚೇರಿ ಯನ್ನು ಕಳೆದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉದ್ಘಾಟಿಸಲಾಗಿತ್ತು. ಆದರೆ ಕಟ್ಟಡದಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿಲ್ಲ. 1 ವರ್ಷ 8 ತಿಂಗಳು ಕಳೆದರೂ ಈ ಕಟ್ಟಡವನ್ನು ಉಪಯೋಗಿಸಿದವರಿಲ್ಲ. ಕಬ್ಬಿಣದ ವಸ್ತುಗಳು ತುಕ್ಕು ಹಿಡಿಯುತ್ತವೆ.

ಕಾರಣವೇನು ?
ಈ ಕಟ್ಟಡದಲ್ಲಿ ಶೌಚಾಲಯ, ಸ್ನಾನದ ಕೊಠಡಿ ಬೇಕಾಗಿತ್ತು. ಎದುರುಗಡೆ ನಾಗರಿಕರು ಕುಳಿತುಕೊಳ್ಳಲು ಅವಕಾಶವಿಲ್ಲ. ನಾಗರಿಕರು ಬಿಸಿಲಿಗೆ ಸರದಿ ಸಾಲಲ್ಲಿ ನಿಲ್ಲುವ ಅನಿವಾರ್ಯತೆ ಇದೆ. ಕಟ್ಟಡ ವಿಶಾಲವಾಗಿಲ್ಲ. ಒಳಗೆ ನಾಡ ಕಚೇರಿ ಮತ್ತು ಗ್ರಾಮಕರಣಿಕರು, ನೆಮ್ಮದಿ ಕೇಂದ್ರ ಇರಬೇಕಾಗಿತ್ತು. ಇಷ್ಟು ವಿಭಾಗಗಳಿಗೆ ಕಟ್ಟಡದೊಳಗೆ ಸ್ಥಳಾವಕಾಶವಿಲ್ಲ. ಒಟ್ಟಿನಲ್ಲಿ ನಾಡಕಚೇರಿ ನಿರ್ಮಾಣವಾಗಿದೆಯೇ ಹೊರತು ನಾಗರಿಕರಿಗೆ ಉಪಯೋಗವಿಲ್ಲದಾಗಿದೆ.

ಹುಲ್ಲು, ಕಸ ಕಡ್ಡಿ ತುಂಬಿದೆ
ಕಟ್ಟಡ ಹಳೆಯದಾಗುತ್ತಿದೆ. ನಿರ್ಮಾಣವಾದ ಕಟ್ಟಡ ಮತ್ತು ಸರಕಾರದ ಅನುದಾನ ನಿಷ್ಪ್ರಯೋಜಕವಾಗುತ್ತಿದೆ. ವಿಟ್ಲ ಪೇಟೆಯಲ್ಲಿ ಜಾಗ ಇಲ್ಲದಿರುವುದರಿಂದ ಪಾರ್ಕಿಂಗ್‌ ಮಾಡಲು ಈ ಸ್ಥಳ ಉಪಯೋಗವಾಗುತ್ತಿದೆ. ಪರಿಸರದಲ್ಲಿ ಹುಲ್ಲು ಬೆಳೆದು ಕಟ್ಟಡವನ್ನು ಹೊದ್ದುಕೊಳ್ಳುತ್ತಿದೆ. ಇನ್ನೊಂದು ಕಡೆ ಕಸ ಕಡ್ಡಿ ತ್ಯಾಜ್ಯ ಗಳು ತುಂಬಿಕೊಳ್ಳುತ್ತಿವೆ. ಇದು ರೋಗ ರುಜಿನಗಳು ಹರಡುವ ಸಾಧ್ಯತೆಯಿದೆ. ಹತ್ತಿರದಲ್ಲೇ ಶಾಲೆ ಮಕ್ಕಳು ಸಂಚರಿಸುವ ಜಾಗವಾದ್ದರಿಂದ ಮತ್ತು ಪಕ್ಕದಲ್ಲೇ ಆಟವಾಡುವ ಮೈದಾನವಾಗಿರುವುದರಿಂದ ಮಕ್ಕಳಿಗೂ ರೋಗ ಹರಡುವ ಭೀತಿಯಿದೆ.

Advertisement

ಹಳೆ ನಾಡಕಚೇರಿ ಬೀಳುವ ಹಂತ
ಹಳೆ ನಾಡಕಚೇರಿ ಮಾಡು ಮುರಿದು ಬೀಳುವ ಹಂತದಲ್ಲಿದೆ. ಸೋರುತ್ತಿದೆ. ಕಡತಗಳನ್ನು ಗೆದ್ದಲು ತಿನ್ನುವಂತಿದೆ. ಅಲ್ಲಿ ಸ್ಥಳಾವಕಾಶ ಕಡಿಮೆಯಿದೆ. ನೆಮ್ಮದಿ ಕೇಂದ್ರದ ಕೆಲಸಕ್ಕಾಗಿ ಹೊರಗೆ ಮಳೆ-ಬಿಸಿಲಲ್ಲೇ ನಾಗರಿಕರು ಸರದಿ ಸಾಲಲ್ಲಿ ನಿಲ್ಲುತ್ತಿದ್ದಾರೆ. ಪರದಾಡುತ್ತಿದ್ದಾರೆ. ಈ ಅವ್ಯವಸ್ಥೆಯಿಂದ ಹೊರಬರುವುದಕ್ಕಾಗಿ ಹೊಸ ನಾಡಕಚೇರಿ ಬೇಕೆಂದು ನಾಗರಿಕರು ಹೋರಾಟ ಮಾಡಿ, ಹೊಸ ಕಟ್ಟಡ ನಿರ್ಮಾಣವಾಗಲು ಕಾರಣವಾಗಿದೆ. ಆದರೆ ಇದೀಗ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ನಾಗರಿಕರಿಗೆ ಉಪಯೋಗವಿಲ್ಲದ ನಾಡಕಚೇರಿ ಕಟ್ಟಡ ಇದ್ದರೇನು ? ಇಲ್ಲದಿದ್ದರೇನು ಎನ್ನುವಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

-ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next