ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲೆತ್ತೂರು ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಳಿಸಲಾಗಿದ್ದು, ಕೇರಳದ ನಟೋರಿಯಸ್ ಗ್ಯಾಂಗ್ ನ ಸಂಪೂರ್ಣ ವಿವರವನ್ನು ಕಲೆ ಹಾಕಲಾಗುತ್ತಿದೆ.
ಕಾಸರಗೋಡು ಜಿಲ್ಲೆಯ ಶಾಕೀರ್, ಅಸ್ಪಾಕ್, ಲತೀಫ್ ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಕೇರಳದ ಉಪ್ಪಳದ ಹಿದಾಯತ್ ನಗರದಲ್ಲಿ ನಿನ್ನೆ ಮಧ್ಯಾಹ್ನ ಈ ತಂಡ ಕ್ಲಬ್ ಮೇಲೆ ಗುಂಡಿನ ದಾಳಿ ನಡೆಸಿತ್ತು. ಅಲ್ಲಿಂದ ತಂಡ ಪರಾರಿಯಾಗಿದ್ದು, ಕೇರಳ ಪೊಲೀಸರು ಹಿಂಬಾಲಿಸಿಕೊಂಡು ಬಂದಿದ್ದರು. ಮೀಯಪದವು ಎಂಬಲ್ಲಿ ಕೇರಳ ಪೊಲೀಸರ ಜೀಪಿನ ಮೇಲೆ ಗುಂಡಿನ ದಾಳಿ ನಡೆಸಿ ವಿಟ್ಲ ಕಡೆಗೆ ಈ ತಂಡ ಆಗಮಿಸಿದ್ದು, ಸಾಲೆತ್ತೂರು ಎಂಬಲ್ಲಿ ನಾಕಾಬಂಧಿ ಅಳವಡಿಸಿದ ವಿಟ್ಲ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ವಿಟ್ಲ ಎಸ್.ಐ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಯತ್ನ: ಆರೋಪಿ ಬಂಧನ
ಬಳಿಕ ವಿಟ್ಲ ಠಾಣಾಧಿಕಾರಿ ವಿನೋದ್ ಕುಮಾರ್ ರೆಡ್ಡಿ ಅವರ ಪೊಲೀಸರ ತಂಡ ಪ್ರತಿದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಾದ ಮೂವರ ಮೇಲೆ ಕಾಸರಗೋಡು, ಕುಂಬಳೆ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಗಾಂಜಾ, ಕಿಡ್ನಾಪ್ ಪ್ರಕರಣಗಳು ದಾಖಲಾಗಿದೆ.
ಇದೀಗ ಆರೋಪಿಗಳಿಂದ ಪಿಸ್ತೂಲ್, ಗಾಂಜಾ ಹಾಗೂ ಮಾರಾಕಾಯುಧಗಳನ್ನು ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಸಿಡಿ ಲೇಡಿಯ ಮೂರನೇ ವಿಡಿಯೋ ಬಿಡುಗಡೆ: ವಕೀಲರ ಮೂಲಕ ದೂರು ನೀಡಲು ನಿರ್ಧಾರ
ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಭೇಟಿ ನೀಡಿದ್ದು, ಪ್ರಕರಣದ ವಿಚಾರಣೆ ನಡೆಸಿ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಎಸ್ಪಿ ಲಕ್ಷ್ಮಿಪ್ರಸಾದ್, ಡಿವೈಎಸ್ಪಿ ವೆಲೈಂಟೈನ್ ಡಿ ಸೋಜಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.