ವಿಟ್ಲ: ಸರಕಾರದ ಆದೇಶದಂತೆ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಲಿನಿ ಅವರನ್ನು ಕೋಟೆಕಾರ್ ಪಟ್ಟಣ ಪಂಚಾಯತ್ ಗೆ ವರ್ಗಾವಣೆ ಮಾಡಲಾಗಿದೆ. ಮಾಲಿನಿ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಹೆಚ್ಚುವರಿ ಪ್ರಭಾರ ಜವಾಬ್ದಾರಿ ಇರುತ್ತದೆ.
ವಿಟ್ಲ ಖಾಲಿ ಖಾಲಿ :
ವಿಟ್ಲ ಪ.ಪಂ.ಮುಖ್ಯಾಧಿಕಾರಿ ಹುದ್ದೆಯೊಂದು ಬಿಟ್ಟರೆ ಉಳಿದೆಲ್ಲವೂ ಖಾಲಿಯೇ ಆಗಿತ್ತು. ಕಳೆದ ಆರೇಳು ವರ್ಷಗಳಿಂದ ವಿಟ್ಲ ಪ.ಪಂ.ಸ್ಥಿತಿ ಶೋಚನೀಯವೇ ಆಗಿತ್ತು. ಈಗ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.
ಕಂದಾಯ ಅಧಿಕಾರಿ, ಎಂಜಿನಿಯರ್, ಆರೋಗ್ಯಾಧಿಕಾರಿ ಹುದ್ದೆಗಳು ಖಾಲಿಯಾಗಿವೆ. ಆರಂಭದಿಂದಲೇ ಆರೋಗ್ಯಾಧಿಕಾರಿ ಹುದ್ದೆ ಖಾಲಿಯಾಗಿಯೇ ಇತ್ತು. ಮುಖ್ಯಾಧಿಕಾರಿ ಹುದ್ದೆ ಮಾತ್ರ ನಿನ್ನೆವರೆಗೆ ಭರ್ತಿಯಾಗಿತ್ತು. ಇಂದಿನಿಂದ ಅದೂ ಪ್ರಭಾರ ಜವಾಬ್ದಾರಿಯಲ್ಲಿ ನಡೆಯುವಂತಾಗಿದೆ.
ಚುನಾವಣೆ ನಡೆದು ಎರಡು ತಿಂಗಳು ಕಳೆದರೂ ಜನಪ್ರತಿನಿಧಿಗಳಿಗೆ ಅಧಿಕಾರ ಪಡೆಯಲಾಗಲಿಲ್ಲ. ಅಧಿಕಾರಿಗಳಿಗೆ ಆಡಳಿತ ಯಂತ್ರ ಕಾರ್ಯಾಚರಿಸದೇ ಇರುವುದು ಹಲವು ತೊಡಕುಗಳಿಗೆ ಕಾರಣವಾಗಿದೆ. ನಾಗರಿಕರು ತಮ್ಮ ಆವಶ್ಯಕತೆಗಳನ್ನು ಪೂರೈಸುತ್ತಿಲ್ಲ ಎಂದು ದೂರುತ್ತಿದ್ದಾರೆ. ಈ ನಡುವೆ ಸಿಬಂದಿಗಳ ಕಡಿತ ಭಾರೀ ಹೊಡೆತವನ್ನು ನೀಡಲಿದೆ. ಈ ತನಕ ಪ್ರತೀದಿನ ಮುಖ್ಯಾಧಿಕಾರಿ ಹಾಜರಾಗಿ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಇನ್ನೂ ಅದೂ ಇಲ್ಲ ಎಂದು ನಾಗರಿಕರು ಆಡಿಕೊಳ್ಳುತ್ತಿದ್ದಾರೆ.