ವಿಟ್ಲ: ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಮಿಥುನ್ ರೈ ಪಕ್ಷದ ಕಾರ್ಯಕರ್ತರೊಂದಿಗೆ ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಮತ ಯಾಚಿಸಿದರು.
ವಿಟ್ಲ ಮೇಗಿನಪೇಟೆಯಿಂದ ಆರಂಭ ಗೊಂಡ ರೋಡ್ ಶೋ ಸಂತೆ ರಸ್ತೆ, ಹಳೆ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವರೆಗೆ ಸಾಗಿ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಮುಕ್ತಾಯವಾಯಿತು.
ಬಳಿಕ ಮಿಥುನ್ ರೈ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಶ್ರೀ ದೇವರ ದರ್ಶನ ಪಡೆದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ ಸ್ವಾಗತಿಸಿದರು. ಬಳಿಕ ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಉಮ್ಮರ್ ಸಅದಿ ನೇತೃತ್ವದಲ್ಲಿ ಹಾಗೂ ವಿಟ್ಲ ಶೋಕ ಮಾತಾ ಇಗರ್ಜಿಯಲ್ಲಿ ಧರ್ಮಗುರು ಎರಿಕ್ ಕ್ರಾಸ್ತಾ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್. ಮಹಮ್ಮದ್, ಮಂಜುಳಾ ಮಾಧವ ಮಾವೆ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ವಕ್ತಾರ ರಮಾನಾಥ ವಿಟ್ಲ, ದ.ಕ. ಜಿಲ್ಲಾ ಯೋಜನ ಸಮಿತಿ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ, ವಿಟ್ಲ ಪ.ಪಂ. ಸದಸ್ಯರಾದ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಸುನಿತಾ ಕೋಟ್ಯಾನ್, ನಾಮನಿರ್ದೇಶಿತ ಸದಸ್ಯರಾದ ವಿ.ಎಚ್. ಸಮೀರ್ ಪಳಿಕೆ, ಭವಾನಿ ರೈ ಕೊಲ್ಯ, ಪ್ರಭಾಕರ ಭಟ್ ಮಾವೆ, ಮಾಣಿಲ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ.ಕೆ.ಎಂ. ಅಶ್ರಫ್, ಯು.ಟಿ. ತೌಸಿಫ್ ಭಾಗವಹಿಸಿದ್ದರು.
ಬದಲಾವಣೆ ಸನ್ನಿಹಿತ
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಾಲಯ ದಲ್ಲಿ ವಿಶೇಷ ಪ್ರಾರ್ಥನೆ ನಡೆಸಿದ ಬಳಿಕ ಮಿಥುನ್ ರೈ ಪತ್ರಕರ್ತರೊಂದಿಗೆ ಮಾತನಾಡಿ, ಮತದಾರರು ಬದಲಾವಣೆ ಬಯಸುತ್ತಿದ್ದಾರೆ. ಬದಲಾವಣೆ ವಾತಾವರಣ ಸೃಷ್ಟಿಯಾಗುತ್ತಿದೆ. ಜಿಲ್ಲೆಯ ಪ್ರಜ್ಞಾವಂತ ನಾಗರಿಕರಿಗೆ ಶೂನ್ಯ ಪ್ರಗತಿಯ ಜಿಲ್ಲೆಯಿಂದ ಪೂರ್ಣ ಪ್ರಗತಿಯ ಜಿಲ್ಲೆಯಾಗಬೇಕೆನ್ನುವ ನಿರೀಕ್ಷೆ ಇದೆ. ಯುವಕರ ಕಷ್ಟಕ್ಕೆ ಸಹಕಾರ ನೀಡುವ ನಾಯಕ ಬೇಕೆನ್ನುವ ನಿರೀಕ್ಷೆ ಇದೆ. ಯುವಕರ ಧ್ವನಿಯಾಗಿ ಲೋಕಸಭೆಯಲ್ಲಿ ಸ್ಪಂದಿಸುವ ನಾಯಕರ ಕೊರತೆ ಇದೆ. ದ.ಕ. ಜಿಲ್ಲೆಯ ಎಲ್ಲಾ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ನನ್ನನ್ನು ಆಯ್ಕೆ ಮಾಡಿ ಅವರ ಕಷ್ಟಕ್ಕೆ ಸ್ಪಂದಿಸುವ ನಾಯಕನನ್ನಾಗಿ ಮಾಡುತ್ತಾರೆ ಎನ್ನುವ ಭರವಸೆ ಇದೆ ಎಂದು ಹೇಳಿದರು.