Advertisement

ವಿಟ್ಲ ಜಂಕ್ಷನ್‌: ನೂರಾರು ಅವಕಾಶಗಳೇ ಹೊಳೆಯುತ್ತಿವೆ!

04:01 PM Jul 31, 2018 | |

ಜಂಕ್ಷನ್‌ ಎಂದರೆ ಹೆಚ್ಚು ಜನರು ಸೇರುವ ಸ್ಥಳ. ಅಧಿಕ ಚಟುವಟಿಕೆಯ ತಾಣ. ಇದುವರೆಗೂ ಸ್ಥಳೀಯ ಸಂಸ್ಥೆಗಳು ಇವುಗಳ ಅಭಿವೃದ್ಧಿಗೆ ಕೊಟ್ಟ ಗಮನ ಕಡಿಮೆ. ಕಾರಣವಿಷ್ಟೇ. ಖರ್ಚಿನ ಬಾಬ್ತು. ವಾಸ್ತವವಾಗಿ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಸ್ಥಳೀಯ ಸಂಸ್ಥೆಗಳು ಆದಾಯದ ರೂಪದಲ್ಲಿ ಇಡೀ ಜಂಕ್ಷನ್‌ ಪ್ರದೇಶವನ್ನು ದುಡಿಸಿಕೊಳ್ಳಲು ಅವಕಾಶವಿದೆ. ಹಾಗಾಗಬೇಕು. ಇಡೀ ಬೆಳ್ತಂಗಡಿ-ಬಂಟ್ವಾಳ ತಾಲೂಕುಗಳಲ್ಲಿನ ಪ್ರಮುಖ ಜಂಕ್ಷನ್‌ಗಳ ಕುರಿತಾಗಿ ಇಲ್ಲಿ ಪ್ರಸ್ತಾವಿಸಲಾಗುತ್ತದೆ. ಇನ್ನಾದರೂ ಒಂದು ರಚನಾತ್ಮಕ ಪ್ರಯತ್ನ ಮಾಡುವ ಮೂಲಕ ಜಂಕ್ಷನ್‌ ಅಭಿವೃದ್ಧಿಗೊಳ್ಳಲಿ ಎಂಬುದೇ ಸರಣಿಯ ಆಶಯ. 

Advertisement

ವಿಟ್ಲ: ಈ ಪ್ರದೇಶವೇ ನಾಲ್ಕು ಮಾರ್ಗಗಳು ಸೇರುವ ಜಂಕ್ಷನ್‌. ಇದರ ಅಭಿವೃದ್ಧಿ ಎಷ್ಟೊಂದು ಅಗತ್ಯವಿದೆಯೆಂದರೆ ಉಳಿದ ಪ್ರದೇಶಗಳ ಪ್ರಗತಿಗೂ ಇದು ಅನಿವಾರ್ಯ. ಸುತ್ತಲಿನ ಹಲವು ಪ್ರದೇಶಗಳಿಗೆ ಬಹಳ ಪ್ರಮುಖವಾದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿಟ್ಲ ಜಂಕ್ಷನ್‌ ನಲ್ಲಿ ಆಗಬೇಕಾದ ಪಟ್ಟಿ ಬಹಳ ದೊಡ್ಡದಿದೆ. ಇಲ್ಲಿ ಪಾರ್ಕಿಂಗ್‌ ಸೌಲಭ್ಯ ಸರಿಯಾಗ ಬೇಕು. ಅವ್ಯವಸ್ಥಿತ ಪಾರ್ಕಿಂಗ್‌ನಿಂದ ಆಗು ತ್ತಿರುವ ಸಮಸ್ಯೆ ಎಂದರೆ ಬೇಕಾಬಿಟ್ಟಿ ವಾಹನ ಗಳ ನಿಲುಗಡೆ. ಇದರ ಪರಿಣಾಮ ಬೀಳುತ್ತಿ ರುವುದು ವಾಹನ ಸಂಚಾರದ ಮೇಲೆ. ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ಜಾಮ್‌ ಎಂಬುದು ನಿತ್ಯದ ಕಿರಿಕಿರಿಯಾದರೆ, ಜನರು ಆದಷ್ಟೂ ಆ ಜಂಕ್ಷನ್‌ ನಿಂದ ದೂರವಿರಲು (ಬದಲಿ ರಸ್ತೆ ಬಳಸಲು) ಇಚ್ಛಿಸುತ್ತಾರೆ. ಇದರಿಂದ ಇಡೀ ಪೇಟೆಯ ಉದ್ಯಮದ ಅವಕಾಶ ಕ್ಷೀಣಿಸುತ್ತಾ ಹೋಗುತ್ತದೆ. ಇಲ್ಲಿ ಹಾಗಾಗುವ ಮುನ್ನ ಸರಿಪಡಿಸಬೇಕಾಗಿದೆ.

ಎಲ್ಲೆಲ್ಲಿಗೆ ಸಂಪರ್ಕ
ಈ ಜಂಕ್ಷನ್‌ ನ ನಾಲ್ಲು ಮಾರ್ಗಗಳ ಪೈಕಿ ಒಂದು ಮಂಗಳೂರಿಗೆ, ಇನ್ನೊಂದು ಪುತ್ತೂರಿಗೆ, ಮತ್ತೂಂದು ಕೊಳ್ನಾಡು, ಕೇರಳ, ಮಂಗಳೂರಿಗೆ ಹಾಗೂ ಮಗದೊಂದು ಕನ್ಯಾನ-ಅಡ್ಯನಡ್ಕ, ಕೇರಳಕ್ಕೆ ಸಾಗುತ್ತದೆ.


ಎಷ್ಟು ಬಸ್‌ ಓಡಾಡುತ್ತವೆ ?
ಈ ಜಂಕ್ಷನ್‌ ಮೂಲಕ ನಾಲ್ಕೂ ಕಡೆಗೆ ಓಡಾಡುವ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಖ್ಯೆ 85ಕ್ಕಿಂತಲೂ ಹೆಚ್ಚು. ಖಾಸಗಿ ಬಸ್ಸುಗಳ ಸಂಖ್ಯೆ 67ಕ್ಕೂ ಅಧಿಕ. ಟೂರಿಸ್ಟ್‌ ಕಾರುಗಳು ಬಿ.ಸಿ.ರೋಡ್‌, ಪುತ್ತೂರು, ಕನ್ಯಾನ, ಅಳಿಕೆ, ಪೆರುವಾಯಿ ಮೊದಲಾದೆಡೆ ಸಂಚರಿಸುತ್ತವೆ. ಆಟೋ ರಿಕ್ಷಾಗಳು ಹಾಗೂ ಇತರ ಚತುಷcಕ್ರ ಬಾಡಿಗೆ ವಾಹನಗಳೂ ಹತ್ತಿರದ ಗ್ರಾಮಗಳನ್ನು ಸಂಪರ್ಕಿಸುತ್ತವೆ. ಕೊಳ್ನಾಡು, ವಿಟ್ಲಪಟ್ನೂರು ಗ್ರಾಮಸ್ಥರಿಗೆ ವಿಟ್ಲವೇ ಅನಿವಾರ್ಯ. ಕನ್ಯಾನ, ಕರೋಪಾಡಿ, ಮಾಣಿಲ, ಪೆರುವಾಯಿ, ಕೇಪು, ಅಳಿಕೆ, ಪುಣಚ, ವಿಟ್ಲಮುಟ್ನೂರುಗಳಿಗೂ ಅಷ್ಟೇ. ಉಳಿದಂತೆ ಕೆಲ ಗ್ರಾಮಗಳು ವಿಟ್ಲ ಮತ್ತು ಪುತ್ತೂರು, ಬಿ.ಸಿ.ರೋಡ್‌ ಪೇಟೆಯನ್ನು ಅವಲಂಬಿಸಿವೆ. ಸಾಮಾನ್ಯವಾಗಿ ಪ್ರತಿದಿನ ವಿಟ್ಲಕ್ಕೆ ಆಗಮಿಸಿ, ತೆರಳುವವರ ಸಂಖ್ಯೆ 6 ಸಾವಿರ ಮಂದಿಗೂ ಹೆಚ್ಚು. ಇವರಲ್ಲಿ ಶೇ.50ರಷ್ಟು ಮಂದಿ ವಿಟ್ಲವನ್ನು ವ್ಯಾಪಾರ ಕೇಂದ್ರವನ್ನಾಗಿಸಿದವರು. ಪೇಟೆಯ ವ್ಯಾಪ್ತಿಯಲ್ಲಿರುವ ಶಾಲೆ, ಕಾಲೇಜುಗಳಿಗೆ ಒಟ್ಟು ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆಮತ್ತಷ್ಟಿದೆ.

ಪಾರ್ಕಿಂಗ್‌ ವ್ಯವಸ್ಥೆ ಕಾಯಕಲ್ಪ
ಪೇಟೆ ಕಿರಿದು. ವಿಸ್ತರಿಸುವ ಅವಕಾಶ ಕಡಿಮೆ. ನಿಯಮದಂತೆ ಕ್ರಮ ಕೈಗೊಂಡರೆ ಪೇಟೆ ಮಾಯವಾದೀತೆಂಬ ಭಯ. ಹಾಗೆಂದು ಪಾರ್ಕಿಂಗ್‌ ವ್ಯವಸ್ಥೆ ಸಮರ್ಪಗೊಳಿಸದಿದ್ದರೆ ಜನರೇ ಮಾಯವಾದಾರೆಂಬ ಭೀತಿಯೂ ಇದೆ. ಯಾಕೆಂದರೆ ವ್ಯವಸ್ಥಿತವಾದ ವಾಹನ ನಿಲುಗಡೆಗೂ, ಪೇಟೆಯ ಆರ್ಥಿಕತೆಗೂ ನೇರವಾದ ಸಂಬಂಧವಿದೆ. ಸ್ಥಳೀಯ ಆಡಳಿತದ ಬೊಕ್ಕಸಕ್ಕೂ ಸಂಬಂಧವಿದೆ. ಎಲ್ಲಿ ವ್ಯವಸ್ಥಿತ ಪಾರ್ಕಿಂಗ್‌ ಸೌಲಭ್ಯವಿರುವುದಿಲ್ಲವೇ, ಟ್ರಾಫಿಕ್‌ಜಾಮ್‌ ಹೆಚ್ಚಿರುತ್ತದೋ ಜನರು ಅದರಿಂದ ದೂರವಿರುತ್ತಾರೆ. ತಮ್ಮ ವ್ಯವಹಾರಗಳಿಗೆ ಬದಲಿ ಸ್ಥಳವನ್ನು ಹುಡುಕಿಕೊಳ್ಳುತ್ತಾರೆ. ಇದನ್ನು ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಬೇಗ ಅರ್ಥಮಾಡಿಕೊಂಡಷ್ಟೂ ಒಳ್ಳೆಯದು.

ಪಾರ್ಕಿಂಗ್‌ ವ್ಯವಸ್ಥೆ ಸಮರ್ಪಕವಾಗಿಲ್ಲ. ಜಾಗವೂ ಇಲ್ಲ. ಬೆಳಗ್ಗೆ ಮತ್ತು ಸಂಜೆ ನಿರಂತರವಾಗಿ ಟ್ರಾಫಿಕ್‌ ಜಾಮ್‌ ಆಗುವ ಪೇಟೆಯು ಅವ್ಯವಸ್ಥೆ ಆಗರ.  ವಿದ್ಯುತ್‌ ಕಂಬಗಳ ಸ್ಥಳಾಂತರವಾಗಿಲ್ಲ. ಜಂಕ್ಷನ್‌ನಲ್ಲಿ ನಾಲ್ಕು ಅಂಗಡಿ ಗಳನ್ನು ಕೆಡವಿ ಹಾಕಿ ವರ್ಷಗಳುರುಳಿದರೂ ಅದನ್ನು ಸದುಪಯೋಗ ಪಡಿಸುವ ಕಾರ್ಯವಾಗಿಲ್ಲ. ಮಂಗಳೂರು ರಸ್ತೆ ಯಲ್ಲಿ ಬಸ್‌ ತಂಗುದಾಣ ನಿರ್ಮಿಸಲಾಗಿದ್ದರೂ ಜಂಕ್ಷನ್‌ನಲ್ಲಿ ಬಸ್‌ ನಿಲ್ದಾಣವನ್ನಾಗಿಸಿರುವುದು ಈ ಶತಮಾನದ ದುರಂತ. ಈ ರಸ್ತೆಯಲ್ಲಿ ಎಲ್ಲಿ ಬಸ್‌ ನಿಲ್ಲಿಸಿದರೂ ಇನ್ನೊಂದು ಬಸ್‌ ಸಂಚಾರಕ್ಕೆ ಭಾರೀ ತೊಂದರೆ ಯಾಗುತ್ತದೆ. ಪರಿಣಾಮವಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ಆದುದರಿಂದ ಇಲ್ಲಿ ಯಾವತ್ತೂ ಗಜಿಬಿಜಿ. ಕುಡಿಯುವ ನೀರಿಗೆ ಈ ಬಸ್‌ ನಿಲ್ದಾಣಗಳಲ್ಲಾಗಲೀ ಜಂಕ್ಷನ್‌ನಲ್ಲಾಗಲೀ ವ್ಯವಸ್ಥೆಯಿಲ್ಲ. ಸಾರ್ವಜನಿಕ ಶೌಚಾಲಯವು ಶಾಲಾ ರಸ್ತೆಯಲ್ಲಿ ನೂರು ಮೀಟರ್‌ ದೂರದಲ್ಲಿದೆ. ಕಸವನ್ನು ಅಂಗಡಿಗಳಿಂದಲೇ ಸಂಗ್ರಹಿಸುವ ವಾಹನ ವ್ಯವಸ್ಥೆಯಿರುವುದರಿಂದ ಸಾರ್ವಜನಿಕರಿಗೆ ಕಸದ ಬುಟ್ಟಿಗಳ ವ್ಯವಸ್ಥೆಯಿಲ್ಲ. ಅಂಗಡಿಗಳಲ್ಲೇ ಇರುವ ಕಸದ ಬುಟ್ಟಿಗಳಿಗೆ ಕಸವನ್ನು ಹಾಕಬೇಕಾಗಿದೆ. ಬಸ್‌ ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆ ವ್ಯವಸ್ಥೆಗಳೂ ಇಲ್ಲ.  ಸಮುದಾಯ ಆರೋಗ್ಯ ಕೇಂದ್ರ ಅರ್ಧ ಕಿಮೀ ದೂರದಲ್ಲಿದೆ.

Advertisement

ವೃತ್ತವಾಗಲಿ ಬೇಗ
ಲೋಕೋಪಯೋಗಿ ಇಲಾಖೆಯು ಜಂಕ್ಷನ್‌ನಲ್ಲಿರುವ ನಾಲ್ಕು ಅಂಗಡಿಗಳ ಭೂ ಸ್ವಾಧೀನಪಡಿಸಿ, ಅಂಗಡಿಗಳನ್ನು ಕೆಡವಿ ಹಾಕಿದ್ದು ವಾಹನ ದಟ್ಟಣೆ ಕಡಿಮೆ ಮಾಡಲು. ಇಲ್ಲೊಂದು ವೃತ್ತ ನಿರ್ಮಿಸಿ, ವಾಹನ ಸಂಚಾರ ಸುಗಮ ಗೊಳಿಸಲು. ಆದರೆ ಇಂದಿಗೂ ಈಡೇರಲಿಲ್ಲ. ವೃತ್ತವನ್ನು ಚಿಕ್ಕದಾಗಿಸಿ, ಟ್ರಾಫಿಕ್‌ ನಿಯಂತ್ರಣಕ್ಕೆ ಅಧಿಕಾರಿಗಳನ್ನು ನೇಮಿಸ ದಿದ್ದರೆ ಕಷ್ಟ. ಹಳೆ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಬಸ್‌ ನಿಲ್ಲಿಸಬಾರದು ಮತ್ತು ಅದಕ್ಕೆ ಸೂಕ್ತ ಸ್ಥಳ ಕಲ್ಪಿಸಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಜಾರಿ ಗೊಳಿಸಿದ ನಿಯಮ ಪಾಲನೆಯಾದರೆ ಅನುಕೂಲ. ಇದು ಜನಾಭಿಪ್ರಾಯ.

ಬೈಪಾಸ್‌ ರಸ್ತೆ ಸಾಧ್ಯವೇ ?
ವಿಟ್ಲಕ್ಕೆ ಬೈಪಾಸ್‌ ರಸ್ತೆ ಬೇಕು ಎಂಬ ಆಗ್ರಹವಿದೆ. ಅದಕ್ಕೆ ಸೂಕ್ತ ಜಾಗವನ್ನು ಗುರುತಿಸಬೇಕಿದೆ. ಕಾಸರಗೋಡು ಮಾರ್ಗದಿಂದ ವಿಟ್ಲ ಪೇಟೆಯನ್ನು ಪ್ರವೇಶಿಸದೇ ಪುತ್ತೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್‌ ರಸ್ತೆ ಮತ್ತು ಮಂಗಳೂರು ರಸ್ತೆಯಿಂದಲೂ ಪುತ್ತೂರು ರಸ್ತೆಗೆ ಬೈಪಾಸ್‌ ರಸ್ತೆ ನಿರ್ಮಿಸಿದರೂ ಟ್ರಾಫಿಕ್‌ ಜಂಜಾಟ ತಪ್ಪಬಹುದು ಎಂಬ ಅಭಿಪ್ರಾಯವಿದೆ. 

ದಾರಿ ಹುಡುಕಬೇಕು
ಸಬ್‌ ರಿಜಿಸ್ಟ್ರಾರ್‌ ಕಚೇರಿ, ನಾಡ ಕಚೇರಿ, ಪೊಲೀಸ್‌ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ಮೆಸ್ಕಾಂ ಉಪವಿಭಾಗ, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ, ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ, ರಾಷ್ಟ್ರೀಕೃತ ಬ್ಯಾಂಕ್‌ಗಳು, ಗ್ರಾಮೀಣ ಸಹಕಾರಿ ಬ್ಯಾಂಕ್‌, 45ಕ್ಕೂ ಅಧಿಕ ಸಹಕಾರಿ ಸಂಘಗಳು, ಕ್ಯಾಂಪೊRà ಶಾಖೆ, ಮಹಿಳಾ ಸೌಹಾರ್ದ ಸಹಕಾರಿ ಸಂಘ, ಅಳಿಕೆ ಸತ್ಯಸಾಯಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಮತ್ತು ಖಾಸಗಿ ಐಟಿಐ, ಸರಕಾರಿ ಮತ್ತು ಖಾಸಗಿ ಶಾಲೆಗಳು, ಪ್ರವಾಸಿ ಮಂದಿರ, ಪಿಯು ಕಾಲೇಜು ಇತ್ಯಾದಿ. ಇಷ್ಟೆಲ್ಲಾ ಇರುವಾಗ ಇಡೀ ಜನಸಂಖ್ಯೆಯ ಒತ್ತಡ ಪೇಟೆಯ ಪ್ರಮುಖ ಜಂಕ್ಷನ್‌ ನ ಮೇಲೆ ಬೀಳದಿರುವುದೇ? ಅದರ ನಿರ್ವಹಣೆಗೆ ದಾರಿ ಹುಡುಕಿಕೊಳ್ಳಬೇಕಿದೆ.

ಇಪ್ಪತ್ತಮೂರು ಗ್ರಾಮಗಳು
ವಿಟ್ಲ ಸೀಮೆಗೆ 16 ಗ್ರಾಮಗಳು. ಆದರೆ ಹೋಬಳಿಗೆ 23 ಗ್ರಾಮಗಳು. ಬಂಟ್ವಾಳ ತಾ.ನ ಮೂರು ಹೋಬಳಿಗಳಲ್ಲಿ ವಿಟ್ಲ ಹೋಬಳಿ ವಿಸ್ತೀರ್ಣದ ಲೆಕ್ಕಾಚಾರದಲ್ಲಿ 64,158.59 ಸಾವಿರ ಚದರ ಅಡಿ. ಇದೇ ದೊಡ್ಡದು. ವಿಟ್ಲ ಹಳ್ಳಿಗಳ ರಾಜ. ವಿಟ್ಲ ಅರಮನೆಯ ಅರಸೊತ್ತಿಗೆ ಈಗಲೂ ಇದೆ. ಬಿಳಿಯೂರು, ಪೆರ್ನೆ, ಕೆದಿಲ, ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಟ್ನೂರು, ಇಡಿRದು, ಕುಳ, ವೀರಕಂಭ, ಬೋಳಂತೂರು, ವಿಟ್ಲಮುಟ್ನೂರು, ಕೇಪು, ಪುಣಚ, ಪೆರುವಾಯಿ, ಮಾಣಿಲ, ಅಳಿಕೆ, ಕನ್ಯಾನ, ಕರೋಪಾಡಿ, ಕೊಳ್ನಾಡು, ಸಾಲೆತ್ತೂರು, ವಿಟ್ಲಪಟ್ನೂರು, ವಿಟ್ಲಕಸಬಾ ಗ್ರಾಮಗಳು ಒಳಪಟ್ಟಿವೆ. ವಿಟ್ಲ ಹೋಬಳಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಅಂತಾರಾಜ್ಯ ಹೆದ್ದಾರಿ ಸಾಗುತ್ತದೆ. ಈ ಎಲ್ಲ ಗ್ರಾಮದವರ ಸಂಬಂಧ ವಿಟ್ಲದೊಂದಿಗಿದೆ.

 ಕ್ರಮ ಅನಿವಾರ್ಯ
ಡಿಸಿ ಆದೇಶದಂತೆ ಕ್ರಮಕೈಗೊಳ್ಳುತ್ತೇವೆ. ಈಗಾಗಲೇ ಹೋಮ್‌ ಗಾರ್ಡ್ಸ್‌ ಮೂಲಕ ಟ್ರಾಫಿಕ್‌ ನಿಯಂತ್ರಿಸುತ್ತಿ ದ್ದೇವೆ. ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿದರೆ ವೀಲ್‌ ಲಾಕ್‌ ಮಾಡಿ ದಂಡ ವಿಧಿಸಲಾಗು ತ್ತಿದೆ. ಇದನ್ನು ಕ್ರಮೇಣ ದ್ವಿಚಕ್ರ ವಾಹನಗಳಿಗೂ ವಿಸ್ತರಿಸುತ್ತೇವೆ. ಜಂಕ್ಷನ್‌ನಲ್ಲಿ ಬಸ್‌ ನಿಲ್ಲಿಸುವ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಹಲವು ಬಾರಿ ಪತ್ರ ಬರೆದಿದ್ದೇವೆ. ಖಾಸಗಿ ಬಸ್‌ ಮಾಲಕರಿಗೂ ಸೂಚನೆ ನೀಡಿದ್ದೇವೆ. ನಿಯಮ ಪಾಲನೆಯಾಗುತ್ತಿಲ್ಲ. ಇನ್ನೂ ಒಂದೆರಡು ಬಾರಿ ಪತ್ರ ಬರೆದ ಮೇಲೂ ಸ್ಪಂದಿಸದಿದ್ದರೆ ಕ್ರಮ ಅನಿವಾರ್ಯ. 
ನಾಗರಾಜ್‌ ಎಚ್‌.ಇ. ಠಾಣಾಧಿಕಾರಿ, ವಿಟ್ಲ
 
 ಪ್ರಯತ್ನ ಅವಿರತ
ಬೈಪಾಸ್‌ ರಸ್ತೆ ಮತ್ತು ರಿಂಗ್‌ ರಸ್ತೆ ನಿರ್ಮಾಣದ ಬಗ್ಗೆ ಯೋಜನೆ ರೂಪಿಸಲಾಗಿದೆ. ಚುನಾವಣೆ, ಅನುದಾನದ ಕೊರತೆ ಇತ್ಯಾದಿ ಕಾರಣಗಳಿಂದ ಈಡೇರಿಲ್ಲ. ಜಂಕ್ಷನ್‌ನಲ್ಲಿ ಸಣ್ಣ ವೃತ್ತ ನಿರ್ಮಿಸುವ ಹಾಗೂ ಸೂಕ್ತ ಸ್ಥಳಗಳಲ್ಲಿ ಬ್ಯಾರಿಕೇಡ್‌ ಹಾಕಿ, ಜೀಬ್ರಾ ಮಾರ್ಕಿಂಗ್‌ ಮಾಡಿ ಟ್ರಾಫಿಕ್‌ ಜಂಜಾಟವನ್ನು ನಿಯಂತ್ರಣಗೊಳಿಸಬೇಕಿದೆ. ಮಳೆಗಾಲ ಮುಗಿದ ಮೇಲೆ ಜಾರಿಗೊಳಿಸಲಾಗುವುದು. ಪಟ್ಟನ ಪಂಚಾಯತ್‌ ಗೆ ಸಿಗ್ನಲ್‌ ಲೈಟ್‌ ಅಳವಡಿಸುವ ಅವಕಾಶಗಳಿಲ್ಲ. 
 ಅರುಣ್‌ ಎಂ. ವಿಟ್ಲ
ಅಧ್ಯಕ್ಷರು, ವಿಟ್ಲ ಪ.ಪಂ.

*ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next