Advertisement

ವಿಟ್ಲ ಪೊಲೀಸರ ಮೇಲೆ ಗುಂಡಿನ ದಾಳಿ ಪ್ರಕರಣ : ಮತ್ತೆ ನಾಲ್ವರು ಕುಖ್ಯಾತರು ಪೊಲೀಸ್‌ ಬಲೆಗೆ

10:55 PM Apr 05, 2021 | Team Udayavani |

ವಿಟ್ಲ/ಬಂಟ್ವಾಳ: ಕರ್ನಾಟಕ-ಕೇರಳ ಗಡಿ ಭಾಗದ ಸಾಲೆತ್ತೂರು ಕೊಡಂಗೆಯ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆ ವಿಟ್ಲ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ಡಿಸ್ಕ್ವಾಡ್‌ ಗ್ಯಾಂಗ್‌ ಮುಖ್ಯಸ್ಥ ಸೇರಿ ನಾಲ್ವರು ಕುಖ್ಯಾತರನ್ನು ಬಂಟ್ವಾಳ ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಟಿ.ಡಿ. ನಾಗರಾಜ್‌ ನೇತೃತ್ವದ ತಂಡ ಸೋಮವಾರ ಪೆರಾಜೆ ಗ್ರಾಮದ ಬುಡೋಳಿಯಲ್ಲಿ ಬಂಧಿಸಿದೆ.

Advertisement

ಡಿಸ್ಕ್ವಾಡ್‌ ಮುಖ್ಯಸ್ಥ ಎಂದು ಗುರುತಿಸಿಕೊಂಡ ಮೀಯಪದವು ಮೂಡಂಬೈಲು ನಿವಾಸಿ ಅಬ್ದುಲ್‌ ರಹಿಮಾನ್‌ ಯಾನೆ ರಹೀಂ (25), ಮಹಾರಾಷ್ಟ್ರ ಜಲಗಾಂವ್‌ ಮುಕುಂದ ನಗರ ನಿವಾಸಿ ರಾಕೇಶ್‌ ಕಿಶೋರ್‌ ಬಾವಿಸ್ಕರ್‌ ಯಾನೆ ರಾಕಿ ಯಾನೆ ರಾಕಿ ಬಾಯ್‌ (27), ಡಿಸ್ಕ್ವಾಡ್‌ ಸದಸ್ಯ ರಾದ ಕಡಂಬಾರು ಬಟ್ಯಪದವು ನಿವಾಸಿ ಮಹಮ್ಮದ್‌ ಫಯಾಝ್ ಯಾನೆ ಕೂವ ಫಯಾಝ್ (22), ಮಂಗಲ್ಪಾಡಿ ಸೋಂಕಾಲ್‌ ನಿವಾಸಿ ಹೈದರ್‌ ಅಲಿ ಯಾನೆ ಹೈದರ್‌ (20) ಬಂಧಿತರು.

ಪರಾರಿ ವೇಳೆ ವಶಕ್ಕೆ
ಆರೋಪಿಗಳು ಆಲ್ಟೋ ಕಾರಿನಲ್ಲಿ ಬೆಂಗಳೂರು ಭಾಗಕ್ಕೆ ತೆರಳುತ್ತಿದ್ದಾರೆ ಎಂಬ ಮಾಹಿತಿಯ ಆಧಾರದಲ್ಲಿ ವಿಟ್ಲ ಪಿಎಸ್‌ಐ ವಿನೋದ್‌ ರೆಡ್ಡಿ ನೇತೃತ್ವದ ತಂಡ ಮಾಣಿಯಿಂದ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದು, ಬುಡೋಳಿಯಲ್ಲಿ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.

ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್‌ ಡಿ’ಸೋಜಾ ಅವರ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಡಿ. ನಾಗರಾಜ್‌, ವಿಟ್ಲ ಠಾಣಾಧಿಕಾರಿ ವಿನೋದ್‌ ರೆಡ್ಡಿ, ಎಎಸ್‌ಐ ಕರುಣಾಕರ್‌, ಸಿಬಂದಿಗಳಾದ ಪ್ರಸನ್ನ, ಗಿರೀಶ್‌, ಪ್ರತಾಪ, ವಿನಾಯಕ, ಲೋಕೇಶ್‌, ಹೇಮರಾಜ್‌, ನಝೀರ್‌, ವಿವೇಕ್‌, ಪ್ರವೀಣ್‌ ಪಾಲ್ಗೊಂಡಿದ್ದರು.

Advertisement

ಪ್ರಕರಣದ ಹಿನ್ನೆಲೆ
ಮಂಜೇಶ್ವರ ಠಾಣೆ ವ್ಯಾಪ್ತಿಯ ಮೀಯ ಪದವಿನಲ್ಲಿ ಮಾ. 9ರಂದು ಡಿಸ್ಕ್ವಾಡ್‌ ತಂಡವು ಪಿಸ್ತೂಲ್‌ಗ‌ಳಿಂದ ಗುಂಡು ಹಾರಿಸುವ ಪ್ರಾತ್ಯಕ್ಷಿಕೆಯ ವೀಡಿಯೋವನ್ನು ಇನ್‌ಸ್ಟ್ರಾಗ್ರಾಂನಲ್ಲಿ ಹಾಕಿದ್ದು, ಈ ವೀಡಿಯೋ ವೈರಲ್‌ ಆಗಿ ಆತಂಕ ಸೃಷ್ಟಿಯಾಗಿತ್ತು. ಇದು ಕರ್ನಾಟಕದ ಗಡಿ ಪ್ರದೇಶದಲ್ಲಿ ನಡೆದ ಕಾರಣ ಅಂದಿನ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಅವರು ವಿಟ್ಲ ಠಾಣಾ ವ್ಯಾಪ್ತಿಯಲ್ಲೂ ನಿಗಾ ಇಡುವಂತೆ ಎಚ್ಚರಿಸಿದ್ದರು.

ಮಾ. 25ರಂದು ಇದೇ ಗ್ಯಾಂಗ್‌ ಉಪ್ಪಳದ ಹಿದಾಯತ್‌ನಗರದ ಕ್ಲಬ್‌ನಲ್ಲಿ ಗುಂಡು ಹಾರಾಟ ನಡೆಸಿದ್ದು, ಬಳಿಕ ತಪ್ಪಿಸಿಕೊಳ್ಳುವುದಕ್ಕೆ ಕರ್ನಾಟಕದತ್ತ ಬರುತ್ತಿದೆ ಎಂಬ ಮಾಹಿತಿಯ ಆಧಾರದಲ್ಲಿ ವಿಟ್ಲ ಪಿಎಸ್‌ಐ ವಿನೋದ್‌ ರೆಡ್ಡಿ ನೇತೃತ್ವದ ತಂಡ ಕೊಡಂಗೆಯಲ್ಲಿ ಮುಂಜಾನೆ 4ರ ಸುಮಾರು ತಾತ್ಕಾಲಿಕ ಚೆಕ್‌ಪೋಸ್ಟ್‌ ಹಾಕಿತ್ತು. ಆಗ ಐ20 ಕಾರಿನಲ್ಲಿ ಬಂದ ತಂಡ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಮೂವರನ್ನು ಅದೇ ದಿನ ಬಂಧಿಸಲಾಗಿತ್ತು ಎಂದು ಬಂಟ್ವಾಳ ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಡಿ. ನಾಗರಾಜ್‌ ತಿಳಿಸಿದ್ದಾರೆ.

ಇದನ್ನೂ ಓದಿ :25ವರ್ಷಕ್ಕಿಂತ ಮೇಲ್ಪಟ್ಟವರಿಗೂ ಕೋವಿಡ್ ಲಸಿಕೆಗೆ ಅನುಮತಿ ಕೋರಿ ಪ್ರಧಾನಿಗೆ ‘ಮಹಾ’ ಸಿಎಂ ಪತ್ರ

ಕಾಸರಗೋಡಿನ ಮಂಗಲ್ಪಾಡಿ ಬೈತಿಲ ನಿವಾಸಿ ಅಬ್ದುಲ್‌ ಲತೀಫ್‌ ಯಾನೆ ಲತ್ತಿ ಯಾನೆ ಲತೀಫ್‌ (23), ಮೀಂಜ ಮೀಯಪದವು ಬೆಜ್ಜಂಗಳ ನಿವಾಸಿ ಮಹಮ್ಮದ್‌ ಶಾಕೀರ್‌ ಯಾನೆ ಶಾಕೀರ್‌ (26), ಮೂಡಂಬೈಲು ಅಡ್ಕಂತಗುರಿ ನಿವಾಸಿ ಮಹಮ್ಮದ್‌ ಅಶ್ವಕ್‌ ಯಾನೆ ಅಸ್ಪಾಕ್‌ (25) ಅವರನ್ನು ಬಂಧಿ ಸಿ, ಒಂದು ಕಾರು, ಒಂದು ಪಿಸ್ತೂಲ್‌, 13 ಸಜೀವ ಗುಂಡು, 1 ಡ್ರಾಗನ್‌, 1 ಕೊಡಲಿ, 1 ಚೂರಿ, ಎಲ್‌ಎಸ್‌ಡಿ ಹಾಗೂ ಎಂಡಿಎಂಎ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಮಾರಕಾಸ್ತ್ರ ವಶ
ಬಂಧಿತರಿಂದ 7.65 ಎಂಎಂ ಪಿಸ್ತೂಲ್‌ – 3, ನಾಡಕೋವಿ – 1, ಸಜೀವ ಮದ್ದುಗುಂಡು -13, 1 ಕಾರನ್ನು ವಶ ಪಡೆದುಕೊಳ್ಳಲಾಗಿದೆ. ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಂಧಿತರು ಕುಖ್ಯಾತರು!
ಕೂವ ಫಯಾಝ್ ಮೇಲೆ ಕೇರಳದ ಮಂಜೇಶ್ವರ ಠಾಣೆಯಲ್ಲಿ ಹಲ್ಲೆ, ದೊಂಬಿ, ಕೊಲೆಯತ್ನ, ಅಕ್ರಮ ಶಸ್ತ್ರ ಬಳಕೆ, ಕುಂಬಳೆಯಲ್ಲಿ ಕೊಲೆಯತ್ನ, ಆಂಧ್ರಪ್ರದೇಶದಲ್ಲಿ ಗಾಂಜಾ ಪ್ರಕರಣ ಸೇರಿ 11 ಪ್ರಕರಣಗಳಿವೆ.

ರಹೀಂ ಮೇಲೆ ಮಂಜೇಶ್ವರ ಠಾಣೆಯಲ್ಲಿ ಅಕ್ರಮ ಶಸ್ತ್ರ ಬಳಕೆ, ಗಾಂಜಾ ಸಾಗಾಟ ಪ್ರಕರಣ, ಕೊಲೆ ಯತ್ನ, ಅಪಹರಣ ಪ್ರಕರಣ, ಚಿಕ್ಕಮಗಳೂರು ಠಾಣೆಯಲ್ಲಿ ಗಾಂಜಾ ಪ್ರಕರಣ ಸೇರಿ 11 ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next