ಉದಯವಾಣಿ ದೆಹಲಿ ಪ್ರತಿನಿಧಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಪ್ರಾರಂಭವಾದ ವರ್ಷ (1998)ದಿಂದಲೇ ತೆರಿಗೆ ವಿನಾಯಿತಿ ನೀಡಬೇಕೆಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಶುಕ್ರವಾರ ವಿತ್ತ ಸಚಿವಾಲಯವಿರುವ ನಾರ್ತ್ ಬ್ಲಾಕ್‌ನಲ್ಲಿ ಜೇಟ್ಲಿ ಅವರನ್ನು ಭೇಟಿಯಾಗಿ ಅವರು ಈ ಕೋರಿಕೆ ಮಂಡಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯೂ ವಿಟಿಯುನ 441 ಕೋಟಿ ರೂ. ಮುಟ್ಟುಗೋಲು ಹಾಕಿಕೊಂಡಿದೆ. ಅಷ್ಟೆ ಅಲ್ಲದೆ 127 ಕೋಟಿ ರೂ. ದಂಡ ವಿಧಿಸಿದೆ. ಇದರಿಂದ ವಿವಿಯ ಕಾರ್ಯಚಟುವಟಿಕೆಗೆ ತೊಂದರೆಯಾಗಿದ್ದು ತಕ್ಷಣವೇ ವಿಟಿಯುಗೆ ವಿಧಿಸಲಾಗಿರುವ ದಂಡವನ್ನು ಮನ್ನಾ ಮಾಡಬೇಕುಹಾಗು ಮುಟ್ಟುಗೋಲು ಹಾಕಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಜೇಟ್ಲಿ ಅವರನ್ನು ರಾಯರೆಡ್ಡಿ ಒತ್ತಾಯಿಸಿದ್ದಾರೆ.
ಭೇಟಿಯ ಬಳಿಕ ಕರ್ನಾಟಕ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಯರೆಡ್ಡಿ, ವಿಟಿಯು ಲಾಭಗಳಿಸುವ ಉದ್ದೇಶದ ಸಂಸ್ಥೆಯಲ್ಲ. ಆದ್ದರಿಂದ ತೆರಿಗೆ ವಿನಾಯಿತಿ ನೀಡಬೇಕು. ಖಾಸಗಿ ಸಂಸ್ಥೆಗಳಿಗೆ ಇರುವ ತೆರಿಗೆ ವಿನಾಯಿತಿಯ ಸೌಲಭ್ಯ ಸರ್ಕಾರಿ ಸಂಸ್ಥೆಯಾಗಿರುವ ವಿಟಿಯುಗೂ ವಿಸ್ತರಿಸಬೇಕು ಎಂದು ಎಂದು ಹೇಳಿದರು.
ಮಾರ್ಚ್ ಅಂತ್ಯದೊಳಗೆ ದಂಡ ತುಂಬಬೇಕು ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡದೇ ಹೋದರೆ ವಿಟಿಯುನ ಸಿಬ್ಬಂದಿಗೆ ಸಂಬಳ ನೀಡಲಾಗದ ಸ್ಥಿತಿ ನಿರ್ಮಾಣವಾಗಲಿದೆ. ವಿಟಿಯು ವ್ಯಾಪ್ತಿಯಲ್ಲಿ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ 4 ಲಕ್ಷ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಲಿದ್ದಾರೆ.
ಕಾನೂನು ಸುವ್ಯವಸ್ಥೆಯ ಸಮಸ್ಯೆಯೂ ತಲೆದೋರಬಹುದು ಎಂದು ರಾಯರೆಡ್ಡಿ ಆತಂಕ ವ್ಯಕ್ತಪಡಿಸಿದರು. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, 40 ಸಂಸದರು ಈ ಸಮಸ್ಯೆಯ ಗಂಭೀರತೆಯನ್ನು ಜೇಟ್ಲಿ ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ರಾಯರೆಡ್ಡಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳು ಜೇಟ್ಲಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ, ರಾಜ್ಯಪಾಲರೂ ಪತ್ರ ಬರೆದಿದ್ದಾರೆ. ನಾನೇ ಜೇಟ್ಲಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಈ ಬಾರಿ ಭೇಟಿ ಸಂದರ್ಭದಲ್ಲಿ ಅವರು ನಮ್ಮ ಮನವಿ ಆಲಿಸಿದ್ದಾರೆ. ಆದರೆ ಧನಾತ್ಮಕವಾಗಿ ಸ್ಪಂದಿಸಿಲ್ಲ. ಇದರಲ್ಲಿ ರಾಜಕೀಯ ದುರುದ್ದೇಶ ಇದ್ದಂತೆ ಕಾಣುತ್ತಿಲ್ಲ ಆದರೆ ಸ್ವಲ್ಪಮಟ್ಟಿನ ನಿರ್ಲಕ್ಷ್ಯ ಇದ್ದಂತಿದೆ.
– ಬಸವರಾಜ ರಾಯರೆಡ್ಡಿ,
ಉನ್ನತ ಶಿಕ್ಷಣ ಸಚಿವ