Advertisement

ಯಾವತ್ತೂ ವಿಶ್ವಶ್ರೇಷ್ಠನಾಗಿರಲು ಬಯಸುತ್ತೇನೆ: ವಿರಾಟ್‌ ಕೊಹ್ಲಿ

06:42 AM Mar 10, 2017 | Team Udayavani |

ಬೆಂಗಳೂರು: ಆರಂಭದಿಂದಲೂ ಶ್ರೇಷ್ಠ ಕ್ರಿಕೆಟಿಗನಾಗ ಬೇಕೆಂಬ ಹಂಬಲ ಇರಿಸಿಕೊಂಡಿದ್ದ ನಾನು, ಇದಕ್ಕಾಗಿ ಎಲ್ಲ ಮಾದರಿ ಗಳಲ್ಲೂ ಸ್ಥಿರ ಪ್ರದರ್ಶನ ನೀಡಬೇಕೆಂಬುದನ್ನು ಬಲ್ಲೆ ಎಂಬುದಾಗಿ ಟೀಮ್‌ ಇಂಡಿಯಾ ಕಪ್ತಾನ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಬುಧವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದ ಬಳಿಕ ಅವರು ಇಂಥದೊಂದು ಹೇಳಿಕೆ ನೀಡಿದ್ದಾರೆ.

Advertisement

ದಾಖಲೆ 3ನೇ ಬಾರಿಗೆ ವರ್ಷದ “ಅಂತಾರಾಷ್ಟ್ರೀಯ ಕ್ರಿಕೆಟಿಗ’ನಾಗಿ ಆಯ್ಕೆಯಾದ ವಿರಾಟ್‌ ಕೊಹ್ಲಿ ಪ್ರತಿಷ್ಠಿತ “ಪಾಲಿ ಉಮ್ರಿಗರ್‌ ಪ್ರಶಸ್ತಿ’ಗೆ ಭಾಜನರಾಗಿದ್ದರು. ನನಗೆ ಭವಿಷ್ಯ ಇಲ್ಲ ಎನ್ನುವ ಮಾತುಗಳು ಹೊರಗಡೆಯಿಂದ ವ್ಯಕ್ತವಾಗಿವೆ. ಇದಕ್ಕೆ ಸಾಧನೆಯಿಂದ ಪ್ರತ್ಯುತ್ತರ ನೀಡಬಲ್ಲೆ. ಯಾವುದೇ ಟೀಕೆಗಳಿಗೆ ಕಿವಿಗೊಡಲಾರೆ. 3 ಮಾದರಿಯ ಕ್ರಿಕೆಟ್‌ನಲ್ಲೂ ಟೀಮ್‌ ಇಂಡಿಯಾವನ್ನು ಮುನ್ನಡೆಸುವ ಜವಾಬ್ದಾರಿ ನನ್ನ ಮುಂದಿದೆ. ಮುಂದಿನ ಸರಣಿಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಕೊಹ್ಲಿ ಹೇಳಿದರು.

“ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬನೆನಿಸಿಕೊಳ್ಳುವುದೇ ತನ್ನ ಬಯಕೆ. ಹೀಗಾಗಿ ಕ್ರಿಕೆಟಿನ ಮೂರೂ ಮಾದರಿಗಳಲ್ಲಿ ಫಾರ್ಮ್ ಕಾಯ್ದುಕೊಂಡು ಸ್ಥಿರ ಪ್ರದರ್ಶನ ನೀಡಬೇಕಾದುದು ಅಗತ್ಯ. ಈಗ ನಾಯಕತ್ವದಲ್ಲೂ ಶ್ರೇಷ್ಠತೆಯನ್ನು ಕಾಯ್ದುಕೊಳ್ಳಬೇಕು…’ ಎಂದೂ ಕೊಹ್ಲಿ ಅಭಿಪ್ರಾಯಪಟ್ಟರು.

ಆತ್ಮವಿಶ್ವಾಸ ಮುಖ್ಯ 
“ಬಹಳಷ್ಟು ಮಂದಿಗೆ ನನ್ನ ಸಾಮರ್ಥ್ಯದಲ್ಲಿ ಅನುಮಾನವಿತ್ತು. ಈಗಲೂ ಇದೆ. ಜತೆಗೆ ದ್ವೇಷಿಸುವವರೂ ಇದ್ದಾರೆ. ಕ್ರಿಕೆಟ್‌ ಬದುಕಿನುದ್ದಕ್ಕೂ ಇಂಥ ವಿದ್ಯಮಾನಗಳನ್ನು ಕಾಣುತ್ತ ಬಂದಿದ್ದೇನೆ. ಆದರೆ ನನಗೆ ಮುಖ್ಯವಾಗಿರುವುದು ನನ್ನ ಮೇಲಿನ ನಂಬಿಕೆಯೇ ಹೊರತು ಬೇರೇನಲ್ಲ. ದಿನಕ್ಕೆ ನೂರಲ್ಲ, 120 ಪ್ರತಿಶತ ಕೆಲಸ ಮಾಡಿದರೆ ನಾನು ಯಾರಿಗೂ ಉತ್ತರ ಕೊಡಬೇಕಾಗಿ ಬರುವುದಿಲ್ಲ ಎಂಬುದನ್ನೂ ಬಲ್ಲೆ…’ ಎಂದು ಕೊಹ್ಲಿ ಟೀಕಾಕಾರರನ್ನು ಇದೇ ಸಂದರ್ಭದಲ್ಲಿ ಚುಚ್ಚಿದರು.

“2016 ಎನ್ನುವುದು ನನ್ನ ಕ್ರಿಕೆಟ್‌ ಬದುಕಿನ ದೊಡ್ಡ ಬ್ರೇಕ್‌ತೂ ಆಗಿತ್ತು. ತಂಡದ ಆಟಗಾರರ ಸಾಧನೆ, ಅವರ ನಿರಂತರ ಬೆಂಬಲವಿಲ್ಲದೆ ಇದು ಸಾಧ್ಯವಿರುತ್ತಿರಲಿಲ್ಲ. ಎಲ್ಲ ಸಲವೂ ಅತ್ಯುತ್ತಮವಾದುದನ್ನೇ ನೀಡುವುದು ಅಸಾಧ್ಯ. ಆದರೆ ಚಾಂಪಿಯನ್‌ ಆಟಗಾರರು ಸುತ್ತ ಇರುವಾಗ, ಇವರೆಲ್ಲ ತಮ್ಮ ನೈಜ ಸಾಮರ್ಥ್ಯವನ್ನು ಪ್ರದರ್ಶಿಸುವಾಗ ಅಪೇಕ್ಷಿತ ಫ‌ಲಿತಾಂಶ ಪಡೆಯುವುದು ಕಷ್ಟವೇನಲ್ಲ…’ ಎಂದು ಕ್ಯಾಪ್ಟನ್‌ ಕೊಹ್ಲಿ ಅಭಿಪ್ರಾಯಪಟ್ಟರು.

Advertisement

ರಾಜ್ಯ ಸಂಸ್ಥೆಗಳ ಬಹಿಷ್ಕಾರ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕೆಲ ಕ್ರಿಕೆಟ್‌ ಸಂಸ್ಥೆಗಳ ಬಹಿಷ್ಕಾರದ ನಡುವೆಯೂ ಬಿಸಿಸಿಐ ವಾರ್ಷಿಕ  ಪ್ರಶಸ್ತಿ ಮತ್ತು ಮನ್ಸೂರ್‌ ಆಲಿಖಾನ್‌ ಪಟೌಡಿ ಉಪನ್ಯಾಸ ಕಾರ್ಯಕ್ರಮ ಬುಧವಾರ ಉದ್ಯಾನನಗರಿಯಲ್ಲಿ ನಡೆಯಿತು. ರಾಜ್ಯದ ಶಾಂತಾ ರಂಗಸ್ವಾಮಿ ಕೂಡ ಬಿಸಿಸಿಐ ಜೀವನಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದರು. ಬಿಸಿಸಿಐ ಈ ಪ್ರಶಸ್ತಿಯನ್ನು ವನಿತಾ ಕ್ರಿಕೆಟಿಗರಿಗೆ ನೀಡುತ್ತಿರುವುದು ಇದೇ ಮೊದಲು. 

ಆರ್‌. ರವಿಚಂದ್ರನ್‌ ಅಶ್ವಿ‌ನ್‌ 2016ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನೀಡಿದ ಪ್ರದರ್ಶನಕ್ಕೆ ಸಿ.ಕೆ.ನಾಯ್ಡು ಪ್ರಶಸ್ತಿ ಪಡೆದರು. ಬಿಸಿಸಿಐ ವಿಶೇಷ ಪ್ರಶಸ್ತಿಯನ್ನು ಮಾಜಿ ಕ್ರಿಕೆಟಿಗರಾದ ರಮಾಕಾಂತ್‌ ದೇಸಾಯಿ ಹಾಗೂ ವಿ.ವಿ. ಕುಮಾರ್‌ ಸ್ವೀಕರಿಸಿದರು. ಕರ್ನಲ್‌ ಸಿಕೆ ನಾಯ್ಡು ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ಮಾಜಿ ಕ್ರಿಕೆಟಿಗರಾದ ರಾಜೇಂದ್ರ ಗೋಯಲ್‌, ಪದ್ಮಾಕರ್‌ ಶಿವಾಲ್ಕರ್‌ ಪಡೆದರು. 

 ಬಳಿಕ ಮಾತನಾಡಿದ ಶಾಂತಾ ರಂಗಸ್ವಾಮಿ, “ನಾವು ಕ್ರಿಕೆಟ್‌ ಆಡುವ ಸಮಯದಲ್ಲಿ ಹಣಕಾಸಿನ ಕೊರೆತೆ ಇತ್ತು. ಸರಿಯಾಗಿ ಹಣ ಸಿಗುತ್ತಿರಲಿಲ್ಲ. ಟಿಕೆಟ್‌ ಕಾಯ್ದಿರಿಸದ ರೈಲಿನಲ್ಲಿ ಪ್ರಯಾಣ ಮಾಡಬೇಕಿತ್ತು. ವಿದ್ಯಾರ್ಥಿನಿಲಯಗಳಲ್ಲಿ ತಂಗಬೇಕಿತ್ತು. ಇಷ್ಟೆಲ್ಲ ಕಷ್ಟದ ನಡುವೆ ಕ್ರಿಕೆಟ್‌ ಆಡಿದ ದೇಶದ ಮಹಿಳೆಯರಿಗೆ ಕ್ರಿಕೆಟ್‌ ಅರ್ಪಿಸುತ್ತೇನೆ…’ ಎಂದರು.

ಬಿಸಿಸಿಐ ವಾರ್ಷಿಕ ಪ್ರಶಸ್ತಿ ವಿಜೇತರು
ಸಿ.ಕೆ. ನಾಯ್ಡು ಪ್ರಶಸ್ತಿ (ಜೀವಮಾನದ ಸಾಧನೆ): ರಾಜೇಂದರ್‌ ಗೋಯೆಲ್‌, ಪದ್ಮಾಕರ್‌ ಶಿವಾಲ್ಕರ್‌

ಬಿಸಿಸಿಐ ಜೀವಮಾನದ ಸಾಧನೆ (ವನಿತಾ ವಿಭಾಗ): ಶಾಂತಾ ರಂಗಸ್ವಾಮಿ

ಬಿಸಿಸಿಐ ವಿಶೇಷ ಪ್ರಶಸ್ತಿ: ವಿ.ವಿ. ಕುಮಾರ್‌, ರಮಾಕಾಂತ ದೇಸಾಯಿ

ಪಾಲಿ ಉಮ್ರಿಗರ್‌ ಪ್ರಶಸ್ತಿ (ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ): ವಿರಾಟ್‌ ಕೊಹ್ಲಿ

ದಿಲೀಪ್‌ ಸರ್ದೇಸಾಯಿ ಪ್ರಶಸ್ತಿ 
(ದ್ವಿಪಕ್ಷೀಯ ಸರಣಿಯ ಶ್ರೇಷ್ಠ ಸಾಧಕ): ಆರ್‌. ಅಶ್ವಿ‌ನ್‌

ಲಾಲಾ ಅಮರನಾಥ್‌ ಪ್ರಶಸ್ತಿ (ಶ್ರೇಷ್ಠ ರಣಜಿ ಆಲ್‌ರೌಂಡರ್‌): ಜಲಜ್‌ ಸಕ್ಸೇನಾ

ಲಾಲಾ ಅಮರನಾಥ್‌ ಪ್ರಶಸ್ತಿ (ಶ್ರೇಷ್ಠ ಆಲ್‌ರೌಂಡರ್‌, ದೇಶಿ ಟಿ-20): ಅಕ್ಷರ್‌ ಪಟೇಲ್‌

ಮಾಧವ ರಾವ್‌ ಸಿಂಧಿಯಾ ಪ್ರಶಸ್ತಿ (ರಣಜಿಯಲ್ಲಿ ಸರ್ವಾಧಿಕ ಸ್ಕೋರ್‌): ಶ್ರೇಯಸ್‌ ಅಯ್ಯರ್‌

ಮಾಧವ ರಾವ್‌ ಸಿಂಧಿಯಾ ಪ್ರಶಸ್ತಿ (ರಣಜಿ ಯಲ್ಲಿ ಅತ್ಯಧಿಕ ವಿಕೆಟ್‌): ಶಾಬಾಜ್‌ ನದೀಂ

ಎಂ.ಎ. ಚಿದಂಬರಂ ಟ್ರೋಫಿ (ಸಿ.ಕೆ. ನಾಯ್ಡು ಟ್ರೋಫಿ ಅಂಡರ್‌-23 ಸರಣಿಯಲ್ಲಿ ಅತ್ಯಧಿಕ ರನ್‌): ಜಾಯ್‌ ಬಿಷ್ಟ್

ಎಂ.ಎ. ಚಿದಂಬರಂ ಟ್ರೋಫಿ (ಸಿ.ಕೆ. ನಾಯ್ಡು ಟ್ರೋಫಿ ಅಂಡರ್‌-23 ಸರಣಿಯಲ್ಲಿ ಸರ್ವಾಧಿಕ ವಿಕೆಟ್‌): ಸತ್ಯಜಿತ್‌ ಬಚಾವ್‌

ಎನ್‌.ಕೆ.ಪಿ. ಸಾಳ್ವೆ ಪ್ರಶಸ್ತಿ (ಅಂಡರ್‌-19 ಕೂಚ್‌ ಬಿಹಾರ್‌ ಸರಣಿಯಲ್ಲಿ ಸರ್ವಾಧಿಕ ರನ್‌): ಅರ್ಮಾನ್‌ ಜಾಫ‌ರ್‌

ಎನ್‌.ಕೆ.ಪಿ. ಸಾಳ್ವೆ ಪ್ರಶಸ್ತಿ (ಅಂಡರ್‌-19 ಕೂಚ್‌ ಬಿಹಾರ್‌ ಸರಣಿಯಲ್ಲಿ ಸರ್ವಾಧಿಕ ವಿಕೆಟ್‌): ನಿನಾದ್‌ ರತ್ವಾ

ರಾಜ್‌ಸಿಂಗ್‌ ಡುಂಗರ್ಪುರ್‌ ಪ್ರಶಸ್ತಿ (ಅಂಡರ್‌-16 ವಿಜಯ್‌ ಮರ್ಚಂಟ್‌ ಟ್ರೋಫಿ ಯಲ್ಲಿ ಅತ್ಯಧಿಕ ರನ್‌): ಅಭಿಷೇಕ್‌ ಶರ್ಮ

ರಾಜ್‌ಸಿಂಗ್‌ ಡುಂಗರ್ಪುರ್‌ ಪ್ರಶಸ್ತಿ (ಅಂಡರ್‌-16 ವಿಜಯ್‌ ಮರ್ಚಂಟ್‌ ಟ್ರೋಫಿಯಲ್ಲಿ ಅತ್ಯಧಿಕ ವಿಕೆಟ್‌, 2015-16): ಅಭಿಷೇಕ್‌ ಶರ್ಮ

ಜಗ್‌ಮೋಹನ್‌ ದಾಲ್ಮಿಯಾ ಪ್ರಶಸ್ತಿ (ಅತ್ಯು ತ್ತಮ ಸೀ. ವನಿತಾ ಕ್ರಿಕೆಟರ್‌): ಮಿಥಾಲಿ ರಾಜ್‌

ಜಗ್‌ಮೋಹನ್‌ ದಾಲ್ಮಿಯಾ ಪ್ರಶಸ್ತಿ (ಅತ್ಯು ತ್ತಮ ಜೂ. ವನಿತಾ ಕ್ರಿಕೆಟರ್‌): ದೀಪ್ತಿ ಶರ್ಮ

ಅತ್ಯುತ್ತಮ ದೇಶಿ ಅಂಪಾಯರ್‌: ನಿತಿನ್‌ ಮೆನನ್‌

ಬಿಸಿಸಿಐ ದೇಶಿ ಕೂಟದಲ್ಲಿ ಶ್ರೇಷ್ಠ ನಿರ್ವಹಣೆ: ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌

Advertisement

Udayavani is now on Telegram. Click here to join our channel and stay updated with the latest news.

Next