Advertisement

ವಿಸ್ಟ್ರಾನ್‌ ಗಲಾಟೆ “ಸಂಘರ್ಷ’ಪರಿಹಾರವಲ್ಲ

01:25 AM Dec 14, 2020 | sudhir |

ಉದ್ಯೋಗ ಭದ್ರತೆ, ವೇತನ ತಾರತಮ್ಯ, ಕೆಲಸದ ಅವಧಿ ವಿಚಾರದಲ್ಲಿ ಕಾರ್ಮಿಕರು ಮತ್ತು ಉದ್ಯೋಗದಾತರ ನಡುವೆ ಸಂಘರ್ಷ ಹೊಸದೇನಲ್ಲ. ಆದರೆ ಇವುಗಳ ಪರಿಹಾರಕ್ಕೆ ಹಿಂಸೆ, ಗಲಾಟೆ ಮಾರ್ಗವಾಗಬಾರದು. ಸಂಬಳದ ವಿಚಾರ ಮುಂದಿಟ್ಟುಕೊಂಡು ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಐ-ಫೋನ್‌ ತಯಾರಿಸುವ ವಿಸ್ಟ್ರಾನ್‌ ಇನ್ಫೋಕಾಮ್‌ ಮ್ಯಾನುಫ್ಯಾಕ್ಚರಿಂಗ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ ಕಾರ್ಮಿಕರು ನಡೆಸಿದ ದಾಂಧಲೆ ಕೈಗಾರಿಕ ಬೆಳವಣಿಗೆ ದೃಷ್ಟಿಯಿಂದ ಆರೋಗ್ಯಕರವಲ್ಲ. ಹಾಗಂತ, ಯಾವುದೇ ಕಾರ್ಖಾನೆ ಮಾಲಕರು, ಆಡಳಿತ ಮಂಡಳಿಗಳು ನಡೆಸುವ ದಬ್ಟಾಳಿಕೆಗಳನ್ನು ಸಹಿಸಬೇಕೆಂದೇನಿಲ್ಲ. ಆದರೆ ಮಾರ್ಗ ಸರಿಯಾಗಿರಬೇಕು.

Advertisement

ಕೈಗಾರಿಕೆ ಅಥವಾ ವಾಣಿಜ್ಯ ಚಟುವಟಿಕೆಗಳು ಸುಗಮ ರೀತಿಯಲ್ಲಿ ನಡೆಯ ಬೇಕಾದರೆ ಉದ್ಯೋಗಿಗಳು ಮತ್ತು ಉದ್ಯೋಗದಾತರ ನಡುವೆ ನೌಕರ-ಮಾಲಕನ ತಾಂತ್ರಿಕ ಸಂಬಂಧಗಳಿಗಿಂತ ಮಾನವೀಯ ನೆಲಗಟ್ಟಿನ ಸೌಹಾರ್ದ ಸಂಬಂಧಗಳು ಮುಖ್ಯ. ಹಾಗೆಂದು ಕಾರ್ಮಿಕರು ತಮಗೆ ಸಿಗಬೇಕಾದ ನ್ಯಾಯಬದ್ಧ ಹಕ್ಕು ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳುವ ವಿಚಾರದಲ್ಲಿ ಉದ್ಯೋಗದಾತರ “ಮರ್ಜಿ’ ಕಾಯಬೇಕೆಂದೇನಿಲ್ಲ. ಕೈಗಾರಿಕ ವಲಯದಲ್ಲಿ ಹೊರಗುತ್ತಿಗೆ ಮೂಲಕ ಕಾರ್ಮಿಕ ರನ್ನು ನೇಮಕ ಮಾಡಿಕೊಳ್ಳುವ ಶೋಷಿತ ವ್ಯವಸ್ಥೆಗೆ ವಿಸ್ಟ್ರಾನ್‌ ಘಟನೆ ಕೈಗನ್ನಡಿ ಯಾಗಿದೆ. ಕೈಗಾರಿಕೆಗಳ ಆಗು-ಹೋಗುಗಳು ಮತ್ತು ಕಾರ್ಮಿಕರ ಬೇಕು-ಬೇಡಗಳ ನಿರ್ವಹಣೆಗೆ ಅನೇಕ ಕಾಯ್ದೆಗಳನ್ನು ರೂಪಿಸಲಾಗಿದೆ. ಯಾವ ಕಾಯ್ದೆಯೂ ಯಾರಿಗೂ ಪೂರ್ಣಪ್ರಮಾಣದಲ್ಲಿ ಒಪ್ಪಿತವಾಗಿರಲು ಸಾಧ್ಯವಿಲ್ಲ.

ಅದಕ್ಕಾಗಿಯೇ ಸಮಸ್ಯೆಗಳನ್ನು ಪರಸ್ಪರ ಚರ್ಚೆಗಳ ಮೂಲಕ ಪರಿಹರಿಸಿಕೊಳ್ಳಲು ಸರಕಾರ-ಉದ್ಯೋಗದಾತರು-ಕಾರ್ಮಿಕರ ನಡುವೆ ತ್ರಿಪಕ್ಷೀಯ ವ್ಯವಸ್ಥೆಗೆ ಕಾಯ್ದೆಗಳಲ್ಲೇ ಅವಕಾಶ ಮಾಡಿಕೊಡಲಾಗಿದೆ. ಇದನ್ನು ಬಿಟ್ಟು ಹಿಂಸೆಯ ಹಾದಿ ಹಿಡಿಯುವುದು ತಮ್ಮ ಮೇಲೆಯೇ ಚಪ್ಪಡಿ ಎಳೆದುಕೊಂಡಂತಾಗುತ್ತದೆ. ಅದೇ ಕಾರ್ಮಿಕರನ್ನು “ಜೀತದಾಳು’ಗಳಂತೆ ದುಡಿಸಿಕೊಳ್ಳುವ ಉದ್ಯೋಗದಾತರ ಧೋರಣೆಯೂ ತರವಲ್ಲ. ಕೈಗಾರಿಕೆಗಳು ಮತ್ತು ಉದ್ಯೋಗಿಗಳ ನಡುವಿನ ಮಧ್ಯವರ್ತಿಗಳಿಗೆ ಕಡಿವಾಣ ಬೀಳಬೇಕಿದೆ. ರಾಜ್ಯ ಸರಕಾರ ತಯಾರಿಸಿರುವ “ಸುಸ್ಥಿರ ಅಭಿವೃದ್ಧಿ ಗುರಿಗಳು-2030′ ಇದರಲ್ಲಿ ಕೈಗಾರಿಕೆ, ಆವಿಷ್ಕಾರ ಮತ್ತು ಮೂಲಸೌಕರ್ಯ ವಲಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 10 ವರ್ಷಗಳ ಅವಧಿಗೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಕೈಗಾರಿಕೆ, ಬಂಡವಾಳ ಹೂಡಿಕೆ ಸೂಚ್ಯಂಕದಲ್ಲಿ ಕರ್ನಾಟಕವನ್ನು ಮುಂಚೂಣಿಗೆ ತರುವ ಪ್ರಯತ್ನಗಳನ್ನು ಸರಕಾರ ಮಾಡುತ್ತಿದೆ. ಕೈಗಾರಿಕ ಸ್ನೇಹಿ ವಾತಾವರಣ, ಹೂಡಿಕೆ, ಜಮೀನು ಖರೀದಿ ಮೇಲೆ ವಿಶೇಷ ರಿಯಾಯಿತಿ, ಉತ್ಪನ್ನಗಳ ತೆರಿಗೆ ರಿಯಾಯಿತಿ ನೀಡಲಾಗುತ್ತಿರುವ ಸರಕಾರದ ಕ್ರಮಗಳಿಂದಾ ಗಿ ದೇಶ-ವಿದೇಶಗಳು  ರಾ ಜ್ಯವನ್ನು ಆದ್ಯತಾ ತಾಣವಾಗಿ ಮಾಡಿಕೊಂಡಿವೆ. ಇದರ ಜತೆಗೆ ಋಣಾತ್ಮಕ ಪೈಪೋಟಿ ನಡೆಸುತ್ತಿರುವ ದೇಶದ ಹಲವು ರಾಜ್ಯಗಳು ಕೈಗಾರಿಕೆಗಳನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇದು ಒಟ್ಟಾರೆ ಕೈಗಾರಿಕ ಬೆಳವಣಿಗೆ ದೃಷ್ಟಿಯಿಂದ ರಾಜ್ಯಕ್ಕೆ ಸವಾಲು. ಟೊಯೋಟಾ ನೌಕರರ ಮುಷ್ಕರ, ವಿಸ್ಟ್ರಾನ್‌ ಕಂಪೆನಿಯಲ್ಲಿ ನಡೆದ ಗಲಾಟೆ ರಾಜ್ಯ ಸರಕಾರದ ಅಭಿವೃದ್ಧಿ ಪೂರಕ ಗುರಿಗಳ ಸಾಧನೆಗೆ ಹಿನ್ನಡೆ ಉಂಟು ಮಾಡಲಿದೆ.

ಅಭಿವೃದ್ಧಿಗೆ ಕೈಗಾರಿಕೆಗಳು ಬೇಕು, ಕೈಗಾರಿಕೆಗಳು ನಡೆಯಬೇಕಾದರೆ ಕಾರ್ಮಿ ಕರು ಬೇಕು. ಎಲ್ಲದಕ್ಕೂ ಸ್ನೇಹಮಯ ವಾತಾವರಣ ಮುಖ್ಯ. ಸಮಸ್ಯೆ ಪರಿಹಾರಕ್ಕೆ ಕಾರ್ಮಿಕರು ಹಿಂಸೆಯ ಹಾದಿ ಹಿಡಿಯುವುದು, ಉದ್ಯೋಗದಾತರು ಬಿಗಿಪಟ್ಟು ಸಡಿಲಿಸದಿರುವುದು, ಸರಕಾರ ಮೂಕ ಪ್ರೇಕ್ಷಕವಾಗುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲ ಮಾಡುತ್ತದೆ. ಮಾತುಕತೆ ದ್ವಾರಗಳು ಯಾವತ್ತೂ ತೆರೆದಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next