Advertisement

“ವಿಸ್ಟಾಡೋಮ್‌ ರೈಲು ರಾತ್ರಿ ಸಂಚಾರ ಬೇಡ’

08:41 PM Aug 07, 2021 | Team Udayavani |

ಕುಂದಾಪುರ: ಬೆಂಗಳೂರು – ಮಂಗಳೂರು ವರೆಗೆ ಈಗ ಯಶಸ್ವಿ ಸಂಚಾರ ನಡೆಸುತ್ತಿರುವ ವಿಸ್ಟಾಡೋಮ್‌ ರೈಲನ್ನು ಕುಂದಾಪುರ, ಕಾರವಾರಕ್ಕೆ ವಿಸ್ತರಿಸಬೇಕು ಎನ್ನುವ ಬೇಡಿಕೆಗಳಿದ್ದರೂ, ಕೊಂಕಣ್‌ ರೈಲ್ವೇಯು ಉಡುಪಿ – ಕಾರವಾರ ಮಾರ್ಗದಲ್ಲಿ ರಾತ್ರಿ ವೇಳೆ ಈ ವಿಸ್ಟಾಡೋಮ್‌ ರೈಲು ಆರಂಭಕ್ಕೆ ಮುಂದಾಗಿರುವ ಮಾಹಿತಿ ಸಿಕ್ಕಿದ್ದು, ರಾತ್ರಿ ವೇಳೆ ವಿಸ್ಟಾಡೋಮ್‌ ಸಂಚರಿಸಿದರೆ ಏನು ಪ್ರಯೋಜನ. ವಿಸ್ಟಾಡೋಮ್‌ ರಾತ್ರಿ ರೈಲು ಬೇಡ ಎನ್ನುವುದಾಗಿ ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.

Advertisement

ಕುಂದಾಪುರ, ಕಾರವಾರದ ರೈಲು ಪ್ರಯಾಣಿಕರ, ರೈಲ್ವೇ ಸಮಿತಿಯವರ ಒತ್ತಾಯಕ್ಕೆ ಮಣಿದು, ಈಗ ವಿಸ್ಟಾಡೋಮ್‌ ರೈಲನ್ನು ಆರಂಭಿಸಲು ಮುಂದಾಗಿದ್ದರೂ, ಮಂಗಳೂರಿನವರೆಗೆ ಇದ್ದ ಹಗಲು ರೈಲಿನ ಬದಲಾಗಿ, ರಾತ್ರಿಯ ಪಂಚಗಂಗಾ ಎಕ್ಸ್‌ಪ್ರೆಸ್‌ಗೆ 15 ಕೋಚ್‌ಗಳ ವಿಸ್ಟಾಡೋಮ್‌ ರೈಲನ್ನು ಜೋಡಣೆ ಮಾಡಲು ಹೊರಟಿರುವುದು ಸರಿಯಲ್ಲ. ವಿಸ್ಟಾಡೋಮ್‌ ರೈಲು ಹಗಲು ವೇಳೆ ಸಂಚರಿಸಿದರೆ ಮಾತ್ರ ಪ್ರಯಾಣಿಕರಿಗೆ, ಪ್ರವಾಸಿಗರಿಗೆ ಅನುಕೂಲವಾಗಲಿದೆ. ಅದಲ್ಲದೆ 15 ಬೋಗಿಗಳಲ್ಲಿಯೂ ವಿಸ್ಟಾಡೋಮ್‌ ಬೋಗಿ ಬೇಡ. 5 ಬೋಗಿಗಳಲ್ಲಿ ಮಾತ್ರ ಅಳವಡಿಸಿದರೆ ಸಾಕು. ಇದಲ್ಲದೆ ಈಗ ಮಂಗಳೂರಿನವರೆಗೆ ಸಂಚರಿಸುತ್ತಿರುವ ಹಗಲು ರೈಲನ್ನೇ ಕಾರಾವರದವರೆಗೆ ವಿಸ್ತರಿಸಲಿ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

ನಿರ್ಲಕ್ಷ್ಯ ಸರಿಯಲ್ಲ :

ರಾತ್ರಿ ಮತ್ತು ಹಗಲು ರೈಲುಗಳ ಪ್ರಯಾಣಿಕ ವರ್ಗವೇ ಬೇರೆಯಾಗಿದ್ದು, ಮುಂಬರುವ ಹಬ್ಬ -ಹರಿದಿನಗಳು, ಲಾಕ್‌ಡೌನ್‌ ಅನಂತರದ ಜನರ ಓಡಾಟದ ಬಗ್ಗೆ ನಿಗಮಕ್ಕೆ ಕಾಳಜಿ ಇದ್ದರೆ, ಅದಾಗಲೇ ಓಡುತ್ತಿದ್ದ ಕಾರವಾರ – ಯಶವಂತಪುರ ವಿಸ್ಟಾಡೋಮ್‌ ಹಗಲು ರೈಲನ್ನು ನಿಗಮ ಲಾಭ ಕಡಿಮೆಯಾಗುವ ಕಾರಣದಿಂದ ರದ್ದು ಮಾಡಿದ್ದು, ಕೂಡಲೇ ಅದನ್ನು ಮರು ಆರಂಭಿಸಿ ಜನ ಸೇವೆಯ ತನ್ನ ಕರ್ತವ್ಯ ನಿಭಾಯಿಸಲಿ. ಈಗಾಗಲೇ ಹುಬ್ಬಳ್ಳಿಯ ನೈಋತ್ಯ ರೈಲ್ವೇ, ವಿಸ್ಟಾಡೋಮ್‌ ರೈಲಿನ ಉಡುಪಿ- ಕುಂದಾಪುರ – ಕಾರವಾರ ವಿಸ್ತರಣೆಗೆ ಅನೇಕ ಬಾರಿ ಆಗ್ರಹಿಸಿದ್ದರೂ, ಕೊಂಕಣ ರೈಲ್ವೇ ಇದನ್ನು ತಿರಸ್ಕರಿಸುತ್ತಿರುವುದು ಇವರ ನಿರ್ಲಕ್ಷéವನ್ನು ತೋರಿಸುತ್ತದೆ ಎನ್ನುವುದಾಗಿ ಸಮಿತಿ ಆರೋಪಿಸಿದೆ.

ಜನಾಂದೋಲನ:

Advertisement

ಲಾಭಕ್ಕಾಗಿ ಕೇರಳ – ಮಹಾರಾಷ್ಟ್ರ, ಗೋವಾದ ರೈಲುಗಳ ಸುಗಮ ಓಡಾಟಕ್ಕಾಗಿ, ಹೆಚ್ಚು ಲಾಭ ಇಲ್ಲ ಎಂಬ ಕಾರಣಕ್ಕೆ ರಾಜ್ಯದ ರೈಲುಗಳನ್ನು ರದ್ದು ಮಾಡುವ ತನ್ನ ಚಾಳಿ ಬಿಡಬೇಕಿದೆ. ಭೂಮಿ ಕಳೆದುಕೊಂಡವರಿಗೆ ಉದ್ಯೋಗದ ಬಗ್ಗೆ ಕೂಡ ಆದ ಅನ್ಯಾಯವನ್ನು ಸಹ ಕೊಂಕಣ್‌ ರೈಲ್ವೇ ಕೂಡಲೇ ಸರಿಪಡಿಸಲಿ. ಈಗಾಗಲೇ ಕರಾವಳಿಯ ಸಂಸದರು, ಶಾಸಕರು, ಕೊಂಕಣ ರೈಲ್ವೇಯಿಂದಾಗುತ್ತಿರುವ ಅನ್ಯಾಯಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ರೈಲುಗಳ ರದ್ದತಿ ಹಾಗೂ ಹಲವು ವಿಷಯಗಳ ಜತೆಗೆ ಸಮಿತಿಯು ಮುಂಬರುವ ದಿನಗಳಲ್ಲಿ ಕೊಂಕಣ ರೈಲ್ವೇ ವಿರುದ್ಧ ಕರಾವಳಿ ಕರ್ನಾಟಕದ ಅತೀ ದೊಡ್ಡ ರೈಲ್ವೇ ಜನಾಂದೊಲನ ಕೈಗೊಳ್ಳಲಿದೆ ಎಂದು ಪ್ರಕಟನೆ ಮೂಲಕ ಎಚ್ಚರಿಸಿದೆ.

ಕಳೆದ ಎರಡು ವರ್ಷದಲ್ಲಿ ಐದು ರೈಲುಗಳ ರದ್ಧತಿ, ಉದ್ಯೊಗದಲ್ಲಿ ಕರ್ನಾಟಕದ ಅವಗಣನೆ, ಸೇವೆಯನ್ನೇ ನೀಡದೇ ಲಾಭ ಗಳಿಸುವ ಏಕೈಕ ಉದ್ದೇಶದಿಂದ ಜನಪ್ರತಿನಿಧಿಗಳಿಗೆ ಸವಾಲೊಡ್ಡುವ ಕೊಂಕಣ ರೈಲ್ವೇ ಆಡಳಿತ ನಿರ್ದೇಶಕರ ಧೋರಣೆ ಅನುಮಾನ ಮೂಡಿಸಿದೆ. ಕೊಂಕಣ ರೈಲ್ವೇ ವಿರುದ್ಧ ರೈಲ್ವೇ ಮಂಡಳಿಗೂ ಮೀರಿದ ತನಿಖಾ ಸಂಸ್ಥೆಯಿಂದ ತನಿಖೆಯಾಗಲಿ. ಈ ಬಗ್ಗೆ ರಾಜ್ಯದ ಎಲ್ಲ ಜನಪ್ರತಿನಿಧಿಗಳ ಜತೆ ಸೇರಿ ಕರಾವಳಿಯ ಅತೀ ದೊಡ್ಡ ರೈಲ್ವೇ ಹೋರಾಟವನ್ನು ಸಂಘಟಿಸಲಾಗುವುದು. – ಗಣೇಶ್‌ ಪುತ್ರನ್‌, ಅಧ್ಯಕ್ಷರು, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next