Advertisement

ವಿಐಎಸ್‌ಎಲ್‌ ಸಮಸ್ಯೆ ಪರಿಹಾರಕ್ಕೆ ಯತ್ನ: ಬಿವೈಆರ್‌

11:28 AM Feb 23, 2019 | |

ಭದ್ರಾವತಿ: ಸಂಸದನಾಗಿ ವಿಐಎಸ್‌ಎಲ್‌ ಕಾರ್ಖಾನೆ ಮತ್ತು ಇಲ್ಲಿನ ಕಾರ್ಮಿಕರ ಉಳಿವಿಗಾಗಿ ದೇವರು ಮೆಚ್ಚುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಶುಕ್ರವಾರ ವಿಐಎಸ್‌ಎಲ್‌ ಕಾರ್ಖಾನೆಯ ಪ್ರವೇಶ ದ್ವಾರದ ಸಮೀಪ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು ತಿಂಗಳಿಗೆ 26 ದಿನ ಕೆಲಸ ನೀಡಬೇಕೆಂದು ಆಗ್ರಹಿಸಿ ಮತ್ತು ಕಾರ್ಖಾನೆಯ ಆಡಳಿತ ಮಂಡಳಿಯು ಗುತ್ತಿಗೆ ಕಾರ್ಮಿಕರನ್ನು ಕೀಳಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ಕಾರ್ಖಾನೆಯ ಉಳಿವಿಗೆ ನಮ್ಮ ತಂದೆ ಬಿ.ಎಸ್‌.ಯಡಿಯೂರಪ್ಪ ಹಾಗೂ ನಾನು ಮತ್ತು ಇಲ್ಲಿನ ಮುಖಂಡರು ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ ಎಂದರು. 

ಒಂದು ವಾರ ಕಾಲಾವಕಾಶ ನೀಡಿ: ಕೇಂದ್ರ ಉಕ್ಕು ಸಚಿವರೂ ಸೇರಿದಂತೆ ಅನೇಕರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಖಾನೆಯನ್ನು ಡಿಸ್‌ ಇನ್ವೆಸ್ಟ್‌ಮೆಂಟ್‌ ಪಟ್ಟಿಯಿಂದ ಕೈ ಬಿಡುವ ಭರವಸೆ ದೊರಕಿದೆ. ಕಾರ್ಖಾನೆ ಎದುರಿಸುತ್ತಿದ್ದ ಅದಿರಿನ ಗಣಿ ಸಮಸ್ಯೆ ಸಹ ನಿವಾರಣೆಯಾಗಿದೆ. ಪಕ್ಷದ
ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೂ ಸಹ ಚರ್ಚಿಸಿದ್ದೇನೆ. ಆದರೆ ಆ ಪ್ರಯತ್ನಗಳೆಲ್ಲಾ ನಿರೀಕ್ಷಿತ ಅವಧಿಯೊಳಗೆ ಫಲಕಾರಿಯಾಗುತ್ತಿಲ್ಲ.  ಅಲ್ಲಿಯವರೆಗೆ ನೀವು ಕಾರ್ಮಿಕರು ಕಾಯುವ ಪರಿಸ್ಥಿತಿ ಇಲ್ಲ. ಹಾಗಾಗಿ ನನಗೆ ಒಂದು ವಾರ ಕಾಲಾವಕಾಶ ನೀಡಿ. ಸಂಬಂಧಪಟ್ಟ ಅಧಿಕಾರಿ, ಮಂತ್ರಿಗಳ ಬಳಿ ಈ ಬಗ್ಗೆ ಮತ್ತೂಮ್ಮೆ ಮಾತನಾಡಿ ಸಮಸ್ಯೆಯ ತೀವ್ರತೆ ಬಗ್ಗೆ ತಿಳಿಸುತ್ತೇನೆ ಎಂದರು.

ಚುನಾವಣೆ ಬಹಿಷ್ಕರಿಸುವುದು ನಿಮಗೆ ಬಿಟ್ಟ 
ವಿಷಯ: ಧರಣಿ ನಿರತ ಗುತ್ತಿಗೆ ಕಾರ್ಮಿಕರು ಸಂಸದರು ಮಾತನಾಡುವ ಮುನ್ನ ನಮ್ಮ ಸಮಸ್ಯೆ ಪರಿಹರಿಸಲು ಸಾಧ್ಯವಾಗುವುದಾದರೆ ಭಾಷಣ ಮಾಡಲಿ. ಇಲ್ಲವಾದರೆ ಮಾಡಬೇಡಿ. ನಮ್ಮ ಸಮಸ್ಯೆ ಬಗೆಹರಿಸಿದ್ದರೆ ಬರಲಿರುವ ಲೋಕಸಭೆ ಚುನಾವಣೆಯಲ್ಲಿ ನಾವು ಮತದಾನವನ್ನು
ಬಹಿಷ್ಕರುತ್ತೇವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ನಾನು ದೇವರು ಮೆಚ್ಚುವಂತೆ ಪ್ರಯತ್ನ ಮಾಡಿದ್ದೇನೆ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ನೀವು ಮತದಾನ ಬಹಿಷ್ಕರಿಸುವುದರಿಂದ ನಿಮಗೆ ನ್ಯಾಯ ದೊರಕುತ್ತದೆ ಎಂದು ಅನಿಸಿದರೆ ಹಾಗೆಯೇ ಮಾಡಿ ಎಂದರು.

Advertisement

ಗುತ್ತಿಗೆ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಚಂದ್ರಹಾಸ ಮಾತನಾಡಿ, ಸಂಸದ ರಾಘವೇಂದ್ರ ಅವರು ಇದುವರೆಗೆ ಮಾಡಿರುವ ಪ್ರಯತ್ನ ನಮಗೆ ತಿಳಿದಿದೆ. ಆದರೆ ಅದು ಫಲಕಾರಿಯಾಗದಿರುವುದರಿಂದ ಹೋರಾಟ ಅನಿವಾರ್ಯವಾಗಿದೆ. ಮಾ. 1ರಿಂದ ಯಾರೂ ಕೆಲಸಕ್ಕೆ ಹೋಗುವುದಿಲ್ಲ ಎಂದರು. 

ಗುತ್ತಿಗೆ ಕಾರ್ಮಿಕರ ಸಂಘದ ಉಪಾಧ್ಯಕ್ಷ ರಾಕೇಶ್‌ ಮಾತನಾಡಿ, ಕೂಡಲೇ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಮಾತನಾಡಿ ತಿಂಗಳಿಗೆ 26 ದಿನ ಕೆಲಸ ನೀಡಬೇಕು. ಗುತ್ತಿಗೆ ಕಾರ್ಮಿಕರನ್ನು ಜೀತದಾಳಿನಂತೆ ನಡೆಸಿಕೊಳ್ಳುವ ಪರಿಪಾಠ ಕೊನೆಯಾಗಬೇಕು ಎಂದರು. 

ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಿ. ಆನಂದ ಕುಮಾರ್‌, ಗ್ರಾಮಾಂತರ ಅಧ್ಯಕ್ಷ ಮಂಗೋಟೆ ರುದ್ರೇಶ್‌, ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್‌,ಪ್ರವೀಣ್‌ ಪಟೇಲ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next