ಶಹಾಪುರ: ನಗರದ ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಜಿಲ್ಲಾ ಪಶು ಇಲಾಖೆ ಉಪ ನಿರ್ದೇಶಕ ಡಾ| ಶರಣಭೂಪಾಲರಡ್ಡಿ ಹಾಗೂ ಸಿಬ್ಬಂದಿ ಸೋಮವಾರ ಭೇಟಿ ನೀಡಿ ಜಾನುವಾರುಗಳನ್ನು ಪರಿಶೀಲಿಸಿ ಸೂಕ್ತ ಚಿಕಿತ್ಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ| ಶರಣಭೂಪಾಲರಡ್ಡಿ, ಜಾನುವಾರುಗಳಿಗೆ ಅಗತ್ಯವಿರುವ ಭತ್ತದ ಮೇವು ಹಾಗೂ ಕಣಕಿ ನೀಡಲು ಬದ್ಧರಿದ್ದು, ಸರ್ಕಾರಿ ಇಲಾಖೆ ನಿಯಮದಂತೆ ಜೋಳದ ಕಣಕಿ ಮತ್ತು ಭತ್ತದ ಮೇವು 2 ಕೆಜಿಯಂತೆ ನೀಡುತ್ತೇವೆ. ಪ್ರತಿ ಹಸುವಿಗೆ 5 ಕೆಜಿ ನೀಡಲಾಗುತ್ತಿದೆ.
ಸಂಗ್ರಹವಿರುವ ಜೋಳದ ಕಣಕಿ ತೆಗೆದುಕೊಳ್ಳಿ ಎಂದು ಶ್ರೀಮಠದ ಗುರುಗಳಿಗೆ ತಿಳಿಸಿದರು. ಶ್ರೀಮಠ ಜಾನುವಾರುಗಳು ಭತ್ತದ ಮೇವು ತಿನ್ನುವುದಿಲ್ಲ ಎಂದು ಹೇಳಿದಾಗ, ಕಣಕಿ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇಲಾಖೆ ನಿಯಮದಡಿ ಬರುವ ಸಹಕಾರ ಪಡೆಯಬೇಕು. ಪ್ರತಿ ಪಶು ಮೃತಪಟ್ಟಾಗ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕು. ನಮ್ಮ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತ ಹಸು ಕುರಿತು ವರದಿ ಸಲ್ಲಿಸುತ್ತಾರೆ. ನಂತರ ಮೃತಪಟ್ಟ ಹಸುವಿನ ಸಂಬಂಧ ಸರ್ಕಾರದಿಂದ ಪರಿಹಾರ ದೊರೆಯಲಿದೆ. ಹಾಗಾಗಿ ಸರಕಾರದ ಸೌಲಭ್ಯ ಪಡೆಯಬೇಕು. ಅಲ್ಲದೆ ಇತರೆ ಯೋಜನೆಗಳ ಸಹಕಾರ ಪಡೆಯಬೇಕು ಎಂದು ಹೇಳಿದರು.
ಉದಯವಾಣಿ ಪತ್ರಿಕೆಯಲ್ಲಿ ಮೇವು ನೀರಿಲ್ಲದೆ ಎಂಟು ಹಸು ಸಾವು ಎಂಬ ವಿಶೇಷ ವರದಿ ರವಿವಾರ ಪ್ರಕಟವಾಗಿತ್ತು. ವರದಿಗೆ ಇಲಾಖೆ ಅಧಿಕಾರಿಗಳಿಗೆ ಸ್ಪಂದಿಸಿದ್ದಾರೆ.
ಹಸುಗಳ ಚಿಕಿತ್ಸೆಗಾಗಿ ಸೂಕ್ತ ಔಷಧಿ ನೀಡಿದ್ದೇನೆ. ಇಲಾಖೆಯಿಂದ ನಿಯಮನುಸಾರ ಬರುವ ಸೌಲಭ್ಯ ಒದಗಿಸಿಕೊಡಲಾಗುವುದು. ಭತ್ತದ ಮೇವು ತಿಂದರೆ ಯಾವುದೇ ಪಶುಗಳಿಗೆ ಅಪಾಯವಿಲ್ಲ. ಆದರೂ ಜೋಳದ ಕಣಕಿ ವ್ಯವಸ್ಥೆ ಮಾಡಿದ್ದೇನೆ. ಶ್ರೀಮಠ ಸರ್ಕಾರದ ದರ ನೀಡಿದ್ದಲ್ಲಿ ಪೂರಕ ವ್ಯವಸ್ಥೆ ಕಲ್ಪಿಸಲಾಗುವುದು.
ಡಾ| ಶರಣಭೂಪಾಲರಡ್ಡಿ, ಪಶು ಇಲಾಖೆ ಉಪ ನಿರ್ದೇಶಕ ಯಾದಗಿರಿ.
ಡಾ| ಶರಣಭೂಪಾಲರಡ್ಡಿ, ಪಶು ಇಲಾಖೆ ಉಪ ನಿರ್ದೇಶಕ ಯಾದಗಿರಿ.