ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿಯ ವಿವಿಧ ರಸಗೊಬ್ಬರ ಹಾಗೂ ಕೀಟನಾಶಕ ಮಳಿಗೆಗಳ ಮೇಲೆ ಕೃಷಿ ಅಧಿಕಾರಿಗಳು ಸೋಮವಾರ (ಮಾ.23 ರಂದು) ದಿಢೀರ್ ದಾಳಿ ನಡೆಸಿ, ರಸಗೊಬ್ಬರ ದಾಸ್ತಾನು ಅಧಿಕೃತ ಪರವಾನಿಗೆ ಹಾಗೂ ಇನ್ನಿತರ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು.
ರಸಗೊಬ್ಬರ ಹಾಗೂ ಕೀಟನಾಶಕ ಅಂಗಡಿಗಳ ಮೇಲೆ ಬಣಕಲ್ ಕೃಷಿ ಅಧಿಕಾರಿ ವೆಂಕಟೇಶ್ ಎಂ ಆರ್ ಅವರು ದಿಢೀರ್ ದಾಳಿ ನಡೆಸಿದ್ದಾರೆ.
ವಿವಿಧ ರಸಗೊಬ್ಬರ ಹಾಗೂ ಕೀಟನಾಶಕಗಳ ಮಾದರಿಗಳನ್ನು ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಬಳಿಕ ನಿಯಮ ಪಾಲಿಸದ ರಸಗೊಬ್ಬರ ಮಾರಾಟಗಾರರಿಗೆ ನೋಟಿಸ್ ನೀಡಿ ಮತ್ತೊಮ್ಮೆ ನಿಯಮ ಉಲ್ಲಂಘನೆ ಕಂಡು ಬಂದರೆ ಅಧಿಕೃತ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಮುಂಗಾರು ಹಂಗಾಮು ಇನ್ನೇನು ಪ್ರಾರಂಭವಾಗಲಿದ್ದು, ರೈತರು ಬೆಳೆದ ಬೆಳೆಗಳಿಗೆ ಸೂಕ್ತವಾದ ರಸಗೊಬ್ಬರಗಳ ದಾಸ್ತಾನು ಇದೆ. ಕಡಿಮೆ ಇರುವ ರಸಗೊಬ್ಬರಗಳನ್ನು ದಾಸ್ತಾನು ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರು ಅಧಿಕೃತ ಪರವಾನಗಿ ಹೊಂದಿರುವ ಅಂಗಡಿಗಳಿಂದ ಮಾತ್ರ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರೀದಿಸಬೇಕು ಎಂದರು.
ರಸಗೊಬ್ಬರ ಮಾರಾಟಗಾರರು ಎಂ.ಆರ್.ಪಿ. ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಾರದು. ಮಾರಾಟ ಮಾಡಿದ್ದು ಕಂಡು ಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ರಸಗೊಬ್ಬರವನ್ನು ರೈತರಿಗೆ ವಿತರಿಸುವಾಗ ಪಿಓಎಸ್ ಮಿಷನ್ ನ ಮುಖಾಂತರ ವಿತರಣೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಿಬ್ಬಂದಿ ಪ್ರದೀಪ್ ಹಾಜರಿದ್ದರು.