ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ, ಬಿ.ಸಿ. ರೋಡ್ ಉದಯ ಲಾಂಡ್ರಿ ಮಾಲಕ ಶರತ್ ಮಡಿವಾಳ ಅವರ ನಿವಾಸಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಬುಧವಾರ ದಿಢೀರಾಗಿ ಭೇಟಿ ನೀಡಿ ಶರತ್ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸಚಿವರು ಬರುತ್ತಿದ್ದಂತೆ ತೋಟದಿಂದ ಆಗಮಿಸಿದ ಶರತ್ ಅವರ ತಂದೆ ತನಿಯಪ್ಪ ಮಡಿವಾಳ ಅವರು ಅಂಗಳ ದಲ್ಲಿ ಹಾಕಿದ್ದ ಕುರ್ಚಿಯಲ್ಲಿ ಕುಳಿತು ಸಚಿವರೊಂದಿಗೆ ಮಾತನಾಡಿದರು.
ತನಿಯಪ್ಪ ಅವರಿಗೆ ಸಾಂತ್ವನ ಹೇಳಿದ ರೈ ಅವರು, ಕಾರ್ಯದೊತ್ತಡದಿಂದಾಗಿ ನನಗೆ ಇಷ್ಟು ದಿನ ನಿಮ್ಮ ಮನೆಗೆ ಬರಲು ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಸುಮಾರು 5 ನಿಮಿಷ ಕಾಲ ಅಲ್ಲಿದ್ದ ಸಚಿವರು ಸರಕಾರ ದಿಂದ ಏನಾದರೂ ಪರಿಹಾರ ಒದಗಿಸಲು ಸಾಧ್ಯವೇ ಎಂದು ಪರಿ ಶೀಲಿಸುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಮನೆಯೊಳಗೆ ದುಃಖೀಸುತ್ತಿದ್ದ ಶರತ್‌ನ ತಾಯಿಯನ್ನು ಕಿಟಕಿಯಿಂದಲೇ ನೋಡಿ ಸಚಿವರು ತೆರಳಿದ್ದಾರೆ ಎಂದು ತನಿಯಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
ಸಚಿವರ ಭೇಟಿಯ ಸಂದರ್ಭ ಸ್ಥಳೀಯರನ್ನು, ಕಾರ್ಯಕರ್ತರನ್ನು ಮನೆಯ ಕಡೆಗೆ ಬಾರದಂತೆ ಪೊಲೀ ಸರು ತಡೆದಿದ್ದಾರೆ ಎಂದು ಸ್ಥಳೀಯ ಗ್ರಾ.ಪಂ. ಸದಸ್ಯ ಪ್ರವೀಣ್ ಗಟ್ಟಿ ತಿಳಿಸಿದ್ದಾರೆ.
ಸಚಿವರ ಜತೆಗೆ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಿ. ಪದ್ಮಶೇಖರ ಜೈನ್, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ಸಹಿತ ಇತರರು ಉಪಸ್ಥಿತರಿದ್ದರು.
ಹೇಳದೆ ಬಂದ ಸಚಿವರು!
ಸಚಿವರು ಬರುವ ಬಗ್ಗೆ ಪೂರ್ವ ಮಾಹಿತಿ ಇರಲಿಲ್ಲ . ಹಾಗಾಗಿ ನಾನು ಮುಂಚಿತವಾಗಿ ಮನೆಯಲ್ಲಿ ಇರಲಿಲ್ಲ ಎಂದು ತನಿಯಪ್ಪ ಮಡಿವಾಳ ಅವರು ಹೇಳಿದರು. ಸಚಿವರ ಭೇಟಿಯ ಬಗ್ಗೆ ಮಾಧ್ಯಮಗಳಿಗೂ ಮಾಹಿತಿ ಇರಲಿಲ್ಲ. ಕೇಂದ್ರ ಸಚಿವರು, ರಾಜ್ಯ ಮತ್ತು ಜಿಲ್ಲಾ ಬಿಜೆಪಿ ನಾಯಕರು, ಸಂಘಟನೆಯ ಪ್ರಮುಖರು ಶರತ್ ಮನೆಗೆ ಬಂದು ಹೋಗಿದ್ದರೂ ಇದುವರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡದಿರುವ ಬಗ್ಗೆ ಸಾಮಾಜಿಕವಾಗಿ ಆಕ್ರೋಶ ವ್ಯಕ್ತವಾಗಿತ್ತು.