Advertisement

ಸಾರ್ವಜನಿಕ ಆಸ್ಪತ್ರೆಗೆ ಗುಣಮಟ್ಟ ಖಾತ್ರಿ ತಂಡ ಭೇಟಿ

09:11 PM Oct 30, 2019 | Lakshmi GovindaRaju |

ಅರಸೀಕೆರೆ: ಕೇಂದ್ರ ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ದೊರಕಿಸುವ ಸಲುವಾಗಿ ರೂಪಿಸಿರುವ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಗುಣಮಟ್ಟದ ಪರಿಶೀಲಿಸಲು ಯೋಜನೆ ರೂಪಿಸಿದೆ ಎಂದು ಜಿಲ್ಲಾ ಗುಣಮಟ್ಟ ಖಾತ್ರಿ ಪರಿಶೀಲನಾ ತಂಡದ ಮುಖ್ಯಸ್ಥ ಡಾ.ಎಚ್‌.ಅರ್‌.ತಿಮ್ಮಯ್ಯ ತಿಳಿಸಿದರು.

Advertisement

ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಗುಣಮಟ್ಟ ಖಾತ್ರಿ ತಂಡದ ಸರ್ಕಾರಿ ಆಸ್ಪತ್ರೆಯಲ್ಲಿನ ಆವರಣ ಮತ್ತು ವಾರ್ಡ್‌ಗಳ ಸ್ವಚ್ಛತೆ ಪರಿಶೀಲಿಸುವ ಜೊತೆಗೆ ಗುಣಾತ್ಮಕ ಸೇವೆ ಹಾಗೂ ವೈದ್ಯರು ಬಳಸುವ ಸಲಕರಣೆಗಳು ಹಾಗೂ ಔಷಧಿ ಮಾತ್ರೆಗಳ ಪರಿಶೀಲನೆಯನ್ನು ನಡೆಸಿದ ನಂತರ ಸುದ್ದಿಗಾರೊಂದಿಗೆ ಡಾ. ಡಾ.ಎಚ್‌.ಅರ್‌.ತಿಮ್ಮಯ್ಯ ಮಾತನಾಡಿದರು.

ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಚಿಕಿತ್ಸೆ ನೀಡುವ ಸಲುವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಉತ್ತಮ ಗುಣಮಟ್ಟದ ಔಷಧಿಗಳು ಮತ್ತು ಮಾತ್ರೆ ಗಳನ್ನು ಪೂರೈಕೆ ಮಾಡುತ್ತಿದೆ. ಈ ಎಲ್ಲಾ ಯೋಜನೆಗಳು ಸಂಕಷ್ಟದಲ್ಲಿರುವ ಜನರಿಗೆ ಸಕಾಲದಲ್ಲಿ ದೊರೆಯುತ್ತಿದೆ ಎಂದರು.

ಪ್ರತಿ ವರ್ಷ ಪರಿಶೀಲನೆ: ಪ್ರತಿವರ್ಷವೂ ಜಿಲ್ಲಾ ಆಸ್ಪತ್ರೆಯೂ ಸೇರಿದಂತೆ ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗಳ ಗುಣಾತ್ಮಕ ಸೇವೆಯನ್ನು ತಂಡವು ಅತ್ಯಂತ ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ನಂತರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುತ್ತದೆ ಎಂದು ಹೇಳಿದರು.

ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆ ಉಪ ವೈದ್ಯಾಧಿಕಾರಿ ಡಾ.ಎಚ್‌.ಕೆ.ರಮೇಶ್‌ ಮಾತನಾಡಿ, ಕೇಂದ್ರ ಸರ್ಕಾರ ಪರಿಸರ ಸ್ವಚ್ಛತೆ ಮತ್ತು ಕಾಯಕಲ್ಪ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳ ಸೇವೆಯ ಗುಣಮಟ್ಟ ಪರಿಶೀಲಿಸಲು ಕೆಲವು ಮಾನದಂಡ ನಿಗದಿ ಮಾಡಿದೆ. ಆಸ್ಪತ್ರೆಯ ಪರಿಸರ ಸ್ವಚ್ಛತೆಯೊಂದಿಗೆ ಉದ್ಯಾನವನದ ನಿರ್ವಹಣೆ, ವಾರ್ಡ್‌ಗಳ ಸ್ವಚ್ಛತೆ ಹಾಗೂ ಸಿಬ್ಬಂದಿ ಆರೋಗ್ಯ ಪರಿಶೀಲನೆ ಜೊತೆಗೆ ಹೆರಿಗೆ ವಾರ್ಡ್‌, ಲ್ಯಾಬ್‌, ಶಸ್ತ್ರಚಿಕಿತ್ಸಾ ಕೊಠಡಿಗಳ ಪರಿಶೀಲನೆ ನಡೆಸಿ ನಿಗದಿತ ಅಂಕಗಳನ್ನು ನೀಡಲಾಗುತ್ತದೆ ಎಂದರು.

Advertisement

ಕಳೆದ ಸಾಲಿನಲ್ಲಿ ತಾಲೂಕಿನ ಕಾಮಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಉತ್ತಮ ನಿರ್ವಹಣೆಗಾಗಿ 50 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗಿತ್ತು ಎಂದು ಅವರು ತಿಳಿಸಿದರು. ತಂಡದಲ್ಲಿ ಜಿಲ್ಲಾ ವೈದ್ಯಕೀಯ ವಿದ್ಯಾಸಂಸ್ಥೆಯ ಗುಣಮಟ್ಟ ಖಾತ್ರಿ ವಿಭಾಗದ ವ್ಯವಸ್ಥಾಪಕಿ ಡಾ.ಸುವಿನೀತಾ ಮೂರ್ತಿ ಮತ್ತು ಸ್ಥಳೀಯ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ, ಸರ್ಕಾರಿ ಜೆ.ಸಿ.ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ಪ್ರಹ್ಲಾದ್‌, ಮಕ್ಕಳ ತಜ್ಞ ಡಾ.ಸುರೇಶ್‌, ಲಯನ್ಸ್‌ ಕ್ಲಬ್‌ ಮಾಜಿ ಅಧ್ಯಕ್ಷ ಎಂ.ವೈ.ಖಾನ್‌ ಹಿರಿಯ ಆರೋಗ್ಯಾಧಿಕಾರಿ ಜಬ್ಬೀರ್‌ ಪಾಷಾ, ಲಲಿತಮ್ಮ, ಮಾಲತಿ ಹಾಜರಿದ್ದರು.

ಉತ್ತಮ ಕಾರ್ಯ ನಿರ್ವಹಣೆಗೆ ಬಹುಮಾನ: ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಉತ್ತೇಜನ ನೀಡಲು ಪ್ರತಿಯೊಂದು ಆಸ್ಪತ್ರೆಯಲ್ಲಿ 6 ವಿಭಾಗಗಳನ್ನು ಮಾಡಿ ಅವುಗಳ ಮಾನದಂಡದಲ್ಲಿ ನಿಗದಿತ ಅಂಕಗಳನ್ನು ನೀಡಲಾಗುತ್ತದೆ. ಪ್ರಥಮ ಸ್ಥಾನ ಪಡೆದ ಜಿಲ್ಲಾ ಆಸ್ಪತ್ರೆಗೆ 50 ಲಕ್ಷ ರೂ. ಬಹುಮಾನ, ತಾಲೂಕು ಆಸ್ಪತ್ರೆಗಳಿಗೆ 10 ಲಕ್ಷ ರೂ. ಬಹುಮಾನ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 2 ಲಕ್ಷ ರೂ. ಬಹುಮಾನಗಳನ್ನ ನೀಡಲಾಗುತ್ತದೆ ಎಂದು ಪರಿಶೀಲನಾ ತಂಡದ ಮುಖ್ಯಸ್ಥ ಡಾ.ಎಚ್‌.ಅರ್‌.ತಿಮ್ಮಯ್ಯ ತಿಳಿಸಿದರು.

ರಕ್ಷಾ ಸಮಿತಿಗೆ ಬಹುಮಾನದ ಶೇ.70 ಹಣ: ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆ ಉಪ ವೈದ್ಯಾಧಿಕಾರಿ ಡಾ.ಎಚ್‌.ಕೆ.ರಮೇಶ್‌ ಮಾತನಾಡಿ ಬಹುಮಾನದ ಹಣದಲ್ಲಿ ಶೇ.70 ಭಾಗ ಹಣವು ಆರೋಗ್ಯ ರಕ್ಷಾ ಸಮಿತಿಗೆ ಹಾಗೂ ಶೇ.30ರಷ್ಟು ಹಣವನ್ನು ವೈದ್ಯರು ಮತ್ತು ಸಿಬ್ಬಂದಿಗೆ ಹಂಚಿಕೆಯನ್ನು ಮಾಡುವ ಮೂಲಕ ಸೇವಾ ಕಾರ್ಯದಲ್ಲಿ ಭಾಗಿಯಾಗಲು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಕಾಯಕಲ್ಪ ಯೋಜನೆ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next