ಪ್ರತಿ ವರ್ಷದಂತೆ ಈ ಬಾರಿಯೂ 20 ಸದಸ್ಯರನ್ನೊಳಗೊಂಡ ನಮ್ಮ ಶಬರಿಮಲೆ ಯಾತ್ರಾ ತಂಡ ಜು. 19ರಂದು ಶ್ರೀ ಕ್ಷೇತ್ರ ಕದ್ರಿಯಲ್ಲಿ ಮಾಲಾಧಾರಣೆ ನಡೆಸಿ, ಅತ್ತಾವರದ ಶ್ರೀ ಅಯ್ಯಪ್ಪ ಮಂದಿರದಲ್ಲಿ ಇರುಮುಡಿ ಕಟ್ಟಿ ರಾತ್ರಿ ಫಲಾಹಾರ ಸೇವಿಸಿ ಮಂಗಳೂರು ರೈಲು ನಿಲ್ದಾಣದ ಮೂಲ ಚೆಂಗನ್ನೂರು ಕಡೆಗೆ ಯಾತ್ರೆ ಪ್ರಾರಂಭಿಸಿದೆವು. ದಾರಿಯುದ್ದಕ್ಕೂ ಸುರಿದ ಭಾರೀ ಮಳೆಯಿಂದಾಗಿ ರೈಲು 2 ಗಂಟೆ ವಿಳಂಬವಾಗಿ ಮುಂಜಾನೆ 4 ಗಂಟೆಗೆ ಚೆಂಗನ್ನೂರು ರೈಲು ನಿಲ್ದಾಣ ತಲುಪಿದಾಗ ಮುಂಜಾನೆಯ ತಣ್ಣನೆಯ ಚಳಿಯ ಸ್ವಾಗತ ನಮಗಾಯಿತು.
ಇಲ್ಲಿ ಮೊದಲೇ ಗೊತ್ತು ಪಡಿಸಿದ ವಾಹನದಲ್ಲಿ ಸುಮಾರು 90 ಕಿ.ಮೀ. ದೂರವಿರುವ ಪಾಂಬಾ ನದಿ ತೀರಕ್ಕೆ ಪ್ರಯಾಣ ನಡೆಸಿದೆವು. ದಾರಿಯುದ್ದಕ್ಕೂ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ, ಅಯ್ಯಪ್ಪ ಸ್ವಾಮಿಯನ್ನು ಮನದಲ್ಲೇ ನೆನೆಯುತ್ತಾ ಸಾಗಿತು ನಮ್ಮ ತಂಡ.
ಶಬರಿಮಲೆಯಲ್ಲಿ ಸತತ ಜಡಿಮಳೆಯಾಗುತ್ತಿದೆ ಎಂದು ಸುದ್ದಿ ತಿಳಿದಿದ್ದ ನಾವು ಮಳೆ ಎದುರಿಸಲು ರೈನ್‌ಕೋಟ್ ತಂದಿದ್ದೆವು. ಆದರೆ, ಅದೃಷ್ಟವಶಾತ್ ನಮ್ಮ ಪ್ರಯಾಣದುದ್ದಕ್ಕೂ ಮಳೆ ಯಾವುದೇ ತೊಂದರೆ ನೀಡದೆ ಅಚ್ಚರಿ ಮೂಡಿಸಿತ್ತು. ಎರಡು ದಿನಗಳ ಹಿಂದೆ ಚೆಂಗನ್ನೂರು ಪರಿಸರದಲ್ಲಿ ಸುರಿದ ಮಳೆಯ ಬಗ್ಗೆ ಹಾಗೂ ಮುಖ್ಯ ರಸ್ತೆಗೆ ನೆರೆ ನೀರು ನುಗ್ಗಿದ್ದನ್ನು ನಮ್ಮ ವಾಹನದ ಚಾಲಕ ರಸವತ್ತಾಗಿ ವರ್ಣಿಸುವಾಗ ಮನದಲ್ಲಿ ಆತಂಕದ ಮಧ್ಯೆಯೇ ನಮ್ಮಲ್ಲಿ ಸಮಾಧಾನದ ನಿಟ್ಟುಸಿರು!.
ತುಂಬಿ ತುಳುಕಿದ ಪಾಂಬಾ ನದಿ
ಕೇರಳದಾದ್ಯಂತ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಪಂಪಾ ನದಿ ತುಂಬಿ ತುಳುಕುತ್ತಿತ್ತು. ಹಿಂದಿನ ದಿನವಷ್ಟೇ ನದಿಯಲ್ಲಿ ಸ್ನಾನಕ್ಕಿಳಿದ ಓರ್ವ ನೀರಿನಲ್ಲಿ ಕೊಚ್ಚಿ ಹೋದ ವಿಷಯ ಕೇಳಿದ ನಾವು ಕೊರೆಯುವ ಚಳಿಯ ನಡು ವೆಯೂ ತಣ್ಣನೆಯ ನೀರಿನಲ್ಲಿ ಬಹಳ ಜಾಗರೂಕತೆಯಿಂದಲೇ ಸ್ನಾನ ಮುಗಿಸಿದೆವು. ನದೀ ತೀರದಿಂದ ಹೊರಟ ನಮ್ಮ ತಂಡ ಕಾಲ್ನಡಿಗೆಯ ಮೂಲಕ ಶ್ರೀ ಕನ್ನಿಮೂಲ ಗಣಪತಿ, ಗಣೇಶ ಬೆಟ್ಟ, ನೀಲಿಮಲೆ, ಅಪ್ಪಚಿಮೇಡು ಇಪ್ಪಾಚಿ ಮೇಡು, ಶಬರಿ ಪೀಠದ ದರ್ಶನ ಪಡೆದು ಸುಮಾರು ಒಂದೂವರೆ ಗಂಟೆ ದಟ್ಟ ಕಾನನದ ನಡುವೆ ಪ್ರಕೃತಿಯೊಂದಿಗೆ ಅನುಸಂಧಾನ ನಡೆಸಿದ ಅನುಭೂತಿಯೊಂದಿಗೆ ಶ್ರೀ ಅಯ್ಯಪ್ಪ ಸನ್ನಿಧಾನ ತಲುಪಿದೆವು.
ಮಳೆಗಾಲವಾದ್ದರಿಂದ ಭಕ್ತರ ಸಂಖ್ಯೆ ಬಹಳ ಕಡಿಮೆ ಇತ್ತು. ಶ್ರೀ ಅಯ್ಯಪ್ಪ ಸನ್ನಿಧಾನದ ಮುಂಭಾಗದಲ್ಲಿನ ಪವಿತ್ರವಾದ ಹದಿನೆಂಟು ಮೆಟ್ಟಿಲುಗಳನ್ನು (ಪದಿನೆಟ್ಟಾಂಪಡಿ) ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಉದ್ಘೋಷದೊಂದಿಗೆ ಏರಿದೆವು. ಯಾವುದೇ ನೂಕುನುಗ್ಗಲು ಇಲ್ಲದೇ ಇದ್ದುದರಿಂದ ಸಾವಕಾಶವಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಬಂದೆವು. ದೇವರಿಗೆ ತುಪ್ಪದ ಅಭಿಷೇಕವೂ ಸಾಂಗವಾಗಿಯೇ ನೆರವೇರಿತು. ದೇವರ ದರ್ಶನ ಪಡೆದು ಸ್ವಲ್ಪ ಸಮಯ ಸಿಕ್ಕಿ ದ್ದರಿಂದ ಅಲ್ಲಲ್ಲಿ ನಿಂತು ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆವು. ಬಳಿಕ ಮರಳಿ ಬೆಟ್ಟವಿಳಿದು ಬರುವಾಗ ಮನದಲ್ಲೊಂದು ಸಂತೃಪ್ತಿ ನೆಲೆಯಾಗಿತ್ತು. ಊಟ ಉಪಾಹಾರವನ್ನು ಮುಗಿಸಿ ಜುಲೈ 20ರಂದು ರಾತ್ರಿ ಕಾಯಂಕುಳಂ ರೈಲು ನಿಲ್ದಾಣದ ಮೂಲಕ ಹೊರಟು ಜುಲೈ 21ರ ಬೆಳಗ್ಗೆ ಮಂಗಳೂರಿಗೆ ತಲುಪಿತು.
ರೂಟ್ ಮ್ಯಾಪ್
· ಮಂಗಳೂರಿನಿಂದ 442 ಕಿ.ಮೀ. ದೂರದಲ್ಲಿದೆ.
· ಮಂಗಳೂರಿನಿಂದ ಚೆಂಗನ್ನೂರುವರಗೆ ರೈಲು, ಬಸ್ ಸೌಲಭ್ಯವಿದೆ.
· ಚೆಂಗನ್ನೂರಿನಿಂದ 90 ಕಿ.ಮೀ. ದೂರದ ಪ್ರಯಾಣ.
· ಖಾಸಗಿ ವಾಹನ ಮೊದಲೇ ಬುಕ್ ಮಾಡಿದರೆ ಉತ್ತಮ.
· ಪಾಂಬಾದಲ್ಲಿ ಊಟ, ವಸತಿ ಸೌಲಭ್ಯವಿದೆ.