Advertisement
ಈಗಾಗಲೇ ಕೆ.ಎಸ್.ಆರ್.ಟಿ.ಸಿ.ಯ ಮಂಗಳೂರು ಡಿಪೋದಿಂದ ವರ್ಷಾಂತ್ಯಕ್ಕೆ ಗೋವಾ ಪ್ರವಾಸಕ್ಕೆ ಯೋಜನೆ ಸಿದ್ಧಪಡಿಸಲಾಗಿದ್ದು, ಇದಕ್ಕೆ ಉಡುಪಿಯಲ್ಲಿಯೂ ಬುಕಿಂಗ್ ಕಲ್ಪಿಸಲಾಗಿದೆ. ಈ ಬಸ್ ಉಡುಪಿ ಡಿಪೋದ ಮೂಲಕವೇ ಹಾದು ಹೋಗುವುದರಿಂದ ಉಡುಪಿಯ ಜನತೆಗೂ ಅನುಕೂಲವಾಗಲಿದೆ.
Related Articles
Advertisement
ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಮಾಡಿದ್ದ ಪ್ರವಾಸಿ ಪ್ಯಾಕೇಜ್‌ಗೆ ಜಿಲ್ಲಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ದಸರಾಕ್ಕೆ ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಆರಂಭಗೊಂಡು ಮೊದಲಿಗೆ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ, ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನ, ಅಂಬಲಪಾಡಿ ಶ್ರೀ ಮಹಾಕಾಳಿ ದೇವಸ್ಥಾನ, ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನ, ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನ, ಕಾಪು ಶ್ರೀ ಮಾರಿಗುಡಿ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಕಲ್ಪಿಸಲಾಗಿತ್ತು. ದೀಪಾವಳಿ ಸಂದರ್ಭದಲ್ಲಿಯೂ ಸ್ಥಳೀಯ ದೇವಸ್ಥಾನಗಳು ಸಹಿತ ಶೃಂಗೇರಿ, ಹೊರ್ನಾಡು ಭಾಗಗಳಿಗೆ ಪ್ಯಾಕೇಜ್ ಕಲ್ಪಿಸಲಾಗಿತ್ತು. ಈ ಪೈಕಿ ಶೃಂಗೇರಿ ಭಾಗಕ್ಕೆ ವಾರದಲ್ಲಿ 350ಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ.
ಟೆಂಪಲ್ ಟೂರಿಸಂಗೆ ಸ್ಫೂರ್ತಿ: ದಸರಾ, ದೀಪಾವಳಿ ಸಹಿತ ವರ್ಷಾಂತ್ಯದ ವೇಳೆ ಈ ಬಾರಿ ಪ್ರಾಯೋಗಿಕವಾಗಿ ಇಂತಹ ಪ್ಯಾಕೇಜ್‌ಗಳನ್ನು ಆಯೋಜಿಸುವ ಮೂಲಕ ಕೆ.ಎಸ್.ಆರ್.ಟಿ.ಸಿ. ಯಶಸ್ಸು ಕಂಡಿದೆ.
ಇದೇ ರೀತಿ ಮುಂದಿನ ವರ್ಷದಿಂದ ನಿರಂತರವಾಗಿ ಅಥವಾ ವಾರಾಂತ್ಯದ ವೇಳೆಗೆ ಜಿಲ್ಲೆಯ ವಿವಿಧ ದೇವಸ್ಥಾನ, ಪ್ರವಾಸಿ ತಾಣ, ಸಹಿತ ಇತರ ಭಾಗಗಳಿಗೆ ಪ್ಯಾಕೇಜ್‌ಗಳನ್ನು ರೂಪಿಸಿ ಜನರನ್ನು ಸೆಳೆಯುವ ಕಾರ್ಯದಲ್ಲಿ ಕೆ.ಎಸ್.ಆರ್.ಟಿ.ಸಿ. ನಿರತವಾಗಿದೆ. ಇದರಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆಯೂ ಹೆಚ್ಚಳವಾಗುತ್ತಿದೆ.
ಸೇವೆ ವಿಸ್ತರಣೆ: ಮಿತದರದಲ್ಲಿ ಜಿಲ್ಲೆಯ ವಿವಿಧ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಜನರಿಗೆ ಪರಿಚಯಿಸುವ ಉದ್ದೇಶವನ್ನು ಕೆ.ಎಸ್.ಆರ್.ಟಿ.ಸಿ. ಇರಿಸಿಕೊಂಡಿದೆ. ಈಗಾಗಲೇ ದಸರಾ ಹಾಗೂ ದೀಪಾವಳಿ ಸಂದರ್ಭ ಮಾಡಿದ ಪ್ಯಾಕೇಜ್‌ಗೆ ಉತ್ತಮ ಸ್ಪಂದನೆ ಕಂಡುಬಂದಿದೆ. ಇದನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಇರಿಸಿಕೊಳ್ಳಲಾಗಿದೆ. -ಶಿವರಾಮ್ ನಾಯ್ಕ, ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರ್, ಉಡುಪಿ