Advertisement

ಶೃಂಗೇರಿಗೆ ನಿಖೀಲ್, ಅನಿತಾ ಭೇಟಿ

01:59 AM May 23, 2019 | Team Udayavani |

ಶೃಂಗೇರಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಬುಧವಾರ ಇಲ್ಲಿನ ಶಾರದಾ ಪೀಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಜಗದ್ಗುರುಗಳ ಆಶೀರ್ವಾದ ಪಡೆದರು.

Advertisement

ಬುಧವಾರ ಬೆಳಗ್ಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಇವರು, ಶಾರದಾ ಪೀಠಕ್ಕೆ ಆಗಮಿಸಿ, ಶಾರದಾಂಬೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಮಠದ ಹೊರಪ್ರಾಂಗಣದ ತೋರಣ ಗಣಪತಿ, ಶಂಕರಾಚಾರ್ಯರ ದೇವಸ್ಥಾನಕ್ಕೂ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಬಳಿಕ, ಗುರುಭವನಕ್ಕೆ ತೆರಳಿ, ಜಗದ್ಗುರು ಶ್ರೀಭಾರತೀತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಸಮೀಕ್ಷೆ ಒಪ್ಪಲ್ಲ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖೀಲ್ ಕುಮಾರಸ್ವಾಮಿ, ‘ಮಂಡ್ಯದಲ್ಲಿ ಚುನಾವಣಾ ಫಲಿತಾಂಶ ನನ್ನ ಪರವಾಗಿ ಬರುವ ಸಂಪೂರ್ಣ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ಶಾರದಾಂಬೆ ಹಾಗೂ ಜಗದ್ಗುರುಗಳ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸಿರುವೆ. ನಾನು ಯಾವುದೇ ಸಮೀಕ್ಷೆಯನ್ನು ಪರಿಗಣಿಸಿಲ್ಲ. ಮತದಾರರು ಆಶೀರ್ವಾದ ಮಾಡಿದ್ದಾರೆ ಎಂಬ ನಂಬಿಕೆ ಇದೆ. 2004ರಲ್ಲಿ ಜೆಡಿಎಸ್‌ಗೆ ಕೇವಲ 2 ಸ್ಥಾನ ಬರುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಆದರೆ, 58 ಸ್ಥಾನ ಜೆಡಿಎಸ್‌ಗೆ ಲಭಿಸಿತ್ತು. ಚುನಾವಣೋತ್ತರ ಸಮೀಕ್ಷೆ ನಡೆಸಿದ್ದರಲ್ಲಿ ನಾಲ್ಕು ಚಾನಲ್ ನನ್ನ ಪರವಾಗಿ, ಆರು ಚಾನಲ್ ನನ್ನ ವಿರುದ್ಧವಾಗಿ ಫಲಿತಾಂಶ ಪ್ರಕಟಿಸಿವೆ. ಆದರೆ, ಈ ಎರಡೂ ಸಮೀಕ್ಷೆಯನ್ನು ನಾನು ಒಪ್ಪುವುದಿಲ್ಲ’ ಎಂದರು.

6 ಕ್ಷೇತ್ರದಲ್ಲಿ ಗೆಲುವು: ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಶಾರದಾ ಪೀಠಕ್ಕೆ ಬಂದಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ನಾವು ಮಠದ ಭಕ್ತರಾಗಿ ನಿರಂತರವಾಗಿ ಇಲ್ಲಿಗೆ ಭೇಟಿ ನೀಡಿ, ತಾಯಿ ಶಾರದಾಂಬೆಗೆ ಪೂಜೆ ಸಲ್ಲಿಸಿ, ಜಗದ್ಗುರುಗಳ ಆಶೀರ್ವಾದ ಪಡೆಯುತ್ತಿದ್ದೇವೆ. ರಾಜ್ಯದಲ್ಲಿ ಜೆಡಿಎಸ್‌ ಆರು ಕ್ಷೇತ್ರದಲ್ಲಿ ಗೆಲ್ಲಲಿದೆ. ಮೈತ್ರಿ ಸರಕಾರ ರಚನೆಯಾದಾಗಿನಿಂದ ಬಿಜೆಪಿ ನಾಯಕರು ಮೈತ್ರಿ ಸರ್ಕಾರಕ್ಕೆ ಡೆಡ್‌ಲೈನ್‌ ನೀಡುತ್ತಾ ಬಂದಿದ್ದಾರೆ. ಯಾವುದೇ ಪ್ರಯೋಜನವಾಗದೆ, ಸರಕಾರ ಸ್ಥಿರವಾಗಿದೆ. ಇದೇ ಪರಿಸ್ಥಿತಿ ಮುಂದುವರಿಯಲಿದೆ. ಸರಕಾರ ಪತನಗೊಳಿಸುವ ಬಿಜೆಪಿ ಆಸೆ ಈಡೇರದು’ ಎಂದರು.

ನಳಿನ್‌, ಶೋಭಾರಿಂದ ದೇಗುಲಗಳಿಗೆ ಭೇಟಿ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಅವರು ಬುಧವಾರ ಮಧ್ಯಾಹ್ನ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ರಾತ್ರಿ ಕಟೀಲು ದೇವಸ್ಥಾನದಲ್ಲಿ ಯಕ್ಷಗಾನ ವೀಕ್ಷಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ, ಬುಧವಾರ ಬೆಳಗ್ಗೆ ಬೆಳ್ತಂಗಡಿಯ ಸಿರಿಯಾ ದೇವಸ್ಥಾನ, ಕಕ್ಕೆಪದವು ಗರೋಡಿ, ಕುತ್ತಾರಪದವು ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.

Advertisement

ಪ್ರಮೋದ್‌ ಮನೆಯಲ್ಲಿ ವಿಶೇಷ ಪೂಜೆ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಬುಧವಾರ ಬಂಟಕಲ್ಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಮನೆಯಲ್ಲಿಯೇ ವಿಶೇಷ ಪೂಜೆ ನೆರವೇರಿಸಿದರು.

ಸುಮಲತಾ ಗೆಲುವಿಗೆ ಪೂಜೆ

ಪಾಂಡವಪುರ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವಿಗಾಗಿ ಅಂಬಿ ಅಭಿಮಾನಿಗಳು ಪಟ್ಟಣದ ಶನೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಂಬರೀಶ್‌ ಅಭಿಮಾನಿಗಳ ಸಂಘದ ರಾಜ್ಯ ಉಪಾಧ್ಯಕ್ಷ ಸುಬ್ರಹ್ಮಣ್ಯ ನೇತೃತ್ವದಲ್ಲಿ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿ, ಸುಮಾಲತಾ ಗೆಲುವಿಗೆ ಪ್ರಾರ್ಥಿಸಲಾಯಿತು.

ಎ‍ಚ್ಡಿಡಿ, ಪ್ರಜ್ವಲ್ ಗೆಲುವಿಗೆ ಪ್ರಾರ್ಥನೆ

ಮುಳಬಾಗಿಲು: ತಾಲೂಕಿನ ಕುರುಡುಮಲೆ ಗ್ರಾಮದ ಪುರಾಣ ಪ್ರಸಿದ್ಧ ಗಣಪತಿ ದೇವಾಲಯದಲ್ಲಿ ಸಂಕಷ್ಟಹರ ಚತುರ್ಥಿ ಅಂಗವಾಗಿ ಸೂರಜ್‌ ರೇವಣ್ಣ ಅವರು, ಸತತ ಮೂರು ಗಂಟೆಗಳ ಕಾಲ ಹೋಮ ಹವನ ನಡೆಸಿ, ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವಿಗೆ ಪ್ರಾರ್ಥಿಸಿದರು. ಸೂರಜ್‌ ಜೊತೆ ಸ್ಥಳೀಯ ಜೆಡಿಎಸ್‌ ಮುಖಂಡ ಕುರುಡುಮಲೆ ಮಂಜುನಾಥ್‌ ಪಾಲ್ಗೊಂಡಿದ್ದರು
Advertisement

Udayavani is now on Telegram. Click here to join our channel and stay updated with the latest news.

Next