ಲಕ್ಷ್ಮೇಶ್ವರ: ಪಟ್ಟಣದ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಮಂಗಳವಾರ ಗದಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶ ಭೇಟಿ ನೀಡಿ ರಸಗೊಬ್ಬರ, ಕೀಟನಾಶಕಗಳ ಮಾರಾಟ, ದಾಸ್ತಾನುಗಳ ಮಾಹಿತಿ ಪಡೆದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಗಳ ಕೃಷಿ ಪರಕರ ಅಂಗಡಿಗಳಿಗೆ ಭೇಟಿ ನೀಡಿದ ವೇಳೆ ಪಟ್ಟಣಕ್ಕೂ ಆಗಮಿಸಿದ ಅವರು, ಎಲ್ಲ ಅಂಗಡಿಗಳಿಗೆ ಭೇಟಿ ನೀಡಿ ಬಹುತೇಕ ಕೃಷಿ ಪರಿಕರ ಮಾರಾಟಗಾರರನ್ನು ತರಾಟೆಗೆ ತೆಗೆದುಕೊಂಡರು. ರಸಗೊಬ್ಬರವನ್ನು ಪಿಒಎಸ್ ಯಂತ್ರದ ಮೂಲಕ ರೈತರಿಂದ ದಾಖಲೆ ಪಡೆದು ಬಿಲ್ ನೀಡಿಲ್ಲ. ಬದಲಾಗಿ ಕೆಲವೇ ರೈತರ ಹೆಸರಿನಲ್ಲಿ ಪದೇ ಪದೇಬಿಲ್ ಆಗಿವೆ. ಬಿಲ್‌ನಲ್ಲಿ ವ್ಯತ್ಯಾಸವಾದ ಬಗ್ಗೆ ಪರಿಶೀಲಿಸಿ ಸ್ಪಷ್ಟೀಕರಣ ಕೇಳಿ ಎಚ್ಚರಿಕೆ ನೀಡಿದರು.
ಈ ವೇಳೆ ಮಾರಾಟಗಾರು ಕೋವಿಡ್ ಹಿನ್ನೆಲೆ ಮತ್ತು ಯೂರಿಯಾ ಗೊಬ್ಬರಕ್ಕೆ ಏಕಕಾಲಕ್ಕೆ ನೂರಾರು ರೈತರು ಮುಗಿಬೀಳುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಮಜಾಯಿಸಿ ನೀಡಿದರು. ಸದ್ಯಕ್ಕೆ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು ಇದನ್ನೇ ಬಂಡವಾಳವಾಗಿಸಿಕೊಳ್ಳುವ ನಿಟ್ಟಿನಲ್ಲಿ ಗೊಬ್ಬರ ದಾಸ್ತಾನು ಮಾಡಿಕೊಳ್ಳುವುದು, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಮುಲಾಜಿಲ್ಲದೇ ಲೈಸೆನ್ಸ್ ರದ್ದು ಪಡಿಸಲಾಗುವುದು. ಅಲ್ಲದೇ ಅಂಗಡಿಗಳಲ್ಲಿ ರಸಗೊಬ್ಬರ, ಬೀಜ, ಕೀಟನಾಶಕಗಳ ದಾಸ್ತಾನು, ಮಾರಾಟ ದರದ ಫಲಕ ಕಡ್ಡಾಯವಾಗಿ ಹಾಕಬೇಕು. ನಿಷೇಧಿತ ಮತ್ತು ಅವಧಿ ಮೀರಿದ ಬೀಜ, ಕೀಟನಾಶಕ ಮಾರಾಟ ಮಾಡಬಾರದು. ಕಡ್ಡಾಯವಾಗಿ ರೈತರಿಗೆ ಬಿಲ್ ನೀಡಬೇಕು. ಹೆಚ್ಚಿನ ಲಾಭದ ಆಸೆಗೆ ಇಲಾಖೆ ನಿಯಮಾವಳಿ ಮೀರಿದ್ದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ಲೈಸೆನ್ಸ್ ರದ್ದು ಪಡಿಸಲಾಗುವುದು. ಈಗಾಗಲೇ ಗದಗ ಜಿಲ್ಲೆಯಲ್ಲಿ ಗದಗ, ಅಂತೂರ-ಬೆಂತೂರ, ಶಿರಹಟ್ಟಿ ತಾಲೂಕಿನ ಇಟಗಿ, ಗಜೇಂದ್ರಗಡ, ರೋಣ ಭಾಗದಲ್ಲಿ ಕೆಲವು ಮಳಿಗೆಗಳ ಲೈಸೆನ್ಸ್ ರದ್ದು ಪಡಿಸಲಾಗಿದೆ ಎಂದು ಎಚ್ಚರಿಸಿದರು.
ರೈತರು ತಮಗೇನಾದರೂ ಮಾರಾಟಗಾರರಿಂದ ತೊಂದರೆಯಾದಲ್ಲಿ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು. ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ ನರಸಮ್ಮನವರ, ಕೃಷಿ ಸಹಾಯಕ ಅಧಿಕಾರಿ ಪಿ.ಕೆ. ಹೊನ್ನಪ್ಪನವರ, ಎನ್.ಎಚ್. ಹಣಗಿ, ಎಸ್.ಬಿ. ಲಮಾಣಿ ಇದ್ದರು.