Advertisement

ಡಿಸಿ ಭೇಟಿ,ಪರಿಶೀಲನೆ: ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಭರವಸೆ​

06:00 AM Aug 31, 2018 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ನಿರ್ಮಾಣದ ವೇಳೆ ಹೆಮ್ಮಾಡಿ ಭಾಗದ ಕೆಲವು ಕಡೆಗಳಲ್ಲಿ ಪ್ಯಾಸೇಜ್‌, ಹೆಮ್ಮಾಡಿಯಿಂದ ಸಂತೋಷ ನಗರದವರೆಗೆ ಸರ್ವಿಸ್‌ ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಬೇಕೆಂದು ಇಲ್ಲಿನ ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಉಡುಪಿ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಬುಧವಾರ ಹೆಮ್ಮಾಡಿಗೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. 

Advertisement

ಹೆಮ್ಮಾಡಿಯ ಸಂತೋಷ ನಗರ, ಹಾಲಿನ ಡೈರಿ ಬಳಿ, ಹೊಸ್ಕಳಿ ಹಾಗೂ ಪಂಚಾಯತ್‌ನ 2 ಕಿ.ಮೀ. ವ್ಯಾಪ್ತಿಯಲ್ಲಿ ಹೆದ್ದಾರಿ ಹಾದು ಹೋಗುತ್ತಿದ್ದು, ಪ್ಯಾಸೇಜ್‌ ಬೇಕು. ಜತೆಗೆ ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲ. ಈಗಾಗಲೇ ಹೆಮ್ಮಾಡಿ ಪ್ರದೇಶದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಬೇಡಿಕೆಗಳಿಗೆ ಕಾಮಗಾರಿ ನಿರ್ವಹಿಸುವವರು ಸ್ಪಂದಿಸಿಲ್ಲ ಎಂದು ಇಲ್ಲಿನ ಜನ ಡಿಸಿಗೆ ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಿದ್ದರು. 

ಬೈಂದೂರಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮತ್ತೆ ಡಿಸಿಯನ್ನು ಭೇಟಿಯಾದ ಇಲ್ಲಿನ ಗ್ರಾಮಸ್ಥರು ಸ್ಪಂದಿಸುವಂತೆ ಮನವಿ ಮಾಡಿ ಕೊಂಡಿದ್ದಾರೆ. ಬೈಂದೂರಿನಿಂದ ವಾಪಸು ಬರುವಾಗ ಹೆಮ್ಮಾಡಿಯ ಸಂತೋಷನಗರಕ್ಕೆ ಭೇಟಿ ನೀಡಿದ ಡಿಸಿ ಸರ್ವಿಸ್‌ ರಸ್ತೆ, ಹೆದ್ದಾರಿ ಪ್ಯಾಸೇಜ್‌ ನಿರ್ಮಾಣ ಕುರಿತ ಸಾಧಕ – ಬಾಧಕಗಳ ಕುರಿತು ಪರಿಶೀಲನೆ ನಡೆಸಿದರು. 

ಈ ಸಂದರ್ಭದಲ್ಲಿ ಹೆಮ್ಮಾಡಿ ಗ್ರಾ.ಪಂ. ಸದಸ್ಯರಾದ ಯಾಸೀನ್‌, ರಾಘವೇಂದ್ರ ಪೂಜಾರಿ, ಪ್ರಗತಿ ಬಂಧು ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ರಾಘವೇಂದ್ರ ಕುಲಾಲ್‌, ರತ್ನಾಕರ ಪೂಜಾರಿ, ಜನಾರ್ದನ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು. 

ಪ್ಯಾಸೇಜ್‌ ನಿರ್ಮಾಣ ಭರವಸೆ
ಪೇಟೆಯಾಗಿದ್ದರೆ ಮಾತ್ರ ಸರ್ವಿಸ್‌ ರಸ್ತೆ ಮಾಡಬಹುದು. ಆದರೆ ಇದು ಪೇಟೆಯಲ್ಲವಾದ್ದರಿಂದ ಸರ್ವಿಸ್‌ ರಸ್ತೆ ಕಷ್ಟ. ಆದರೆ ಸಂತೋಷ ನಗರ ಕ್ರಾಸ್‌ ಹಾಗೂ ಜಾಲಾಡಿ ಕ್ರಾಸ್‌ ಬಳಿ ಹೆದ್ದಾರಿ ಪ್ಯಾಸೇಜ್‌ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಡಿಸಿ ಇದೇ ವೇಳೆ ಭರವಸೆ ನೀಡಿದ್ದಾರೆ. ಈ ಸಂಬಂಧ ಐಆರ್‌ಬಿಯ ಎಂಜಿನಿಯರ್‌ ಕೂಡ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್‌ಗೆ ಪ್ರಸ್ತಾವನೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next