Advertisement
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಪ್ರಕಟಗೊಂಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ದೇಶ ವನ್ನು ಉದ್ದೇಶಿಸಿ ಮಾತನಾಡಿದ ಅವರು, ನೀತಿಯಲ್ಲಿ ಭಾರತೀಯ ಸಂಜ್ಞಾ ಭಾಷೆ (ಐಎಸ್‌ಎಲ್)ಯ ಅಧ್ಯಯನ, ಕೃತಕ ಬುದ್ಧಿಮತ್ತೆ (ಎ.ಐ.) ಅಧ್ಯಯನ ಮತ್ತು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ (ಎಬಿಸಿ) ಎಂಬ ವಿಷಯಗಳನ್ನು ಸೇರಿಸ ಲಾಗಿದೆ. ಜತೆಗೆ “ನಿಷ್ಠಾ-2.0′ ಎಂಬ ಶಿಕ್ಷಕರ ತರ ಬೇತಿ ಕಾರ್ಯಕ್ರಮವನ್ನೂ ಸೇರಿಸಲಾಗಿದೆ ಎಂದರು.
Related Articles
Advertisement
ಸಂಜ್ಞಾ ಭಾಷಾಧ್ಯಯನ:
ಮಾತು ಬಾರದವರು ಮತ್ತು ಕಿವಿ ಕೇಳದವರು ಸಂವಹನ ನಡೆಸುವ ಸಂಜ್ಞಾ ಭಾಷೆಯನ್ನು ಅಧ್ಯಯನ ಭಾಷೆಯಾಗಿ ಘೋಷಿಸಿರುವುದು ಇದೇ ಮೊದಲು. ಕನ್ನಡ, ಇಂಗ್ಲಿಷ್, ಹಿಂದಿಯಂತೆ ಇದನ್ನೂ ಒಂದು ಭಾಷೆಯಾಗಿ ಶಾಲಾ ಮಟ್ಟದಲ್ಲೇ ಕಲಿಸಲು ನಿರ್ಧರಿಸಲಾಗಿದೆ. ಮುಂದೆ ಇದು ಕಿವುಡ ಮತ್ತು ಮೂಗರಿಗಾಗಿ ಪ್ರತ್ಯೇಕ ಶಾಲೆ, ಕಾಲೇಜುಗಳ ಸ್ಥಾಪನೆಗೂ ಕಾರಣವಾಗಬಹುದು. ಭಾರತೀಯ ಸಂಜ್ಞಾ ಭಾಷೆ ಬೆಳವಣಿಗೆಗೂ ಸಹಕಾರಿ ಯಾದೀತೆಂದು ಮೋದಿ ಹೇಳಿದ್ದಾರೆ.
ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ (ಎಬಿಸಿ) :
ವಿದ್ಯಾರ್ಥಿಗಳ ಮೇಲೆ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ತಂತ್ರಜ್ಞಾನ ಆಧಾರಿತ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ (ಎಬಿಸಿ) ಎಂಬ ಹೊಸ ಯೋಜನೆ ಜಾರಿಗೊಳ್ಳಲಿದೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ಕೋರ್ಸ್‌ಗೆ ಯಾವಾಗ ಬೇಕಾದರೂ ಸೇರಬಹುದು. ಅರ್ಧದಲ್ಲಿ ಬಿಟ್ಟು ಹೋದರೂ ಮತ್ತೆ ಆ ಕೋರ್ಸ್‌ಗೆ ಸೇರಿ ಮುಂದುವರಿಸಲು ಈ ಯೋಜನೆ ಅನುವು ಮಾಡಿಕೊಡುತ್ತದೆ. ಇದರೊಂದಿಗೆ 3, 4, 5ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಜಾರಿಗೊಳ್ಳ ಲಿರುವ “ಸ್ಟ್ರಕ್ಚರ್ಡ್ ಅಸೆಸ್ಮೆಂಟ್ ಫಾರ್ ಅನಲೈಸಿಂಗ್ ಲರ್ನಿಂಗ್ ಲೆವೆಲ್ಸ್’ (ಸಫಲ್) ಎಂಬ ಆಂತರಿಕ ಮೌಲ್ಯ ಮಾಪನ ಪದ್ಧತಿಯಿಂದ ವಿದ್ಯಾರ್ಥಿಗಳ ಪರೀಕ್ಷಾ ಭಯ ಮಾಯವಾಗಿ ಅವರಲ್ಲಿ ಕಲಿಕೆಯ ಉತ್ಸಾಹ ಮೂಡುತ್ತದೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.
ಘೋಷಣೆಯಾದ ಇತರ ಯೋಜನೆಗಳು :
ವಿದ್ಯಾ ಪ್ರಕಾಶ್: ಇದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) ರೂಪಿಸಿರುವ ಪ್ರಾಥಮಿಕ ಶಿಕ್ಷಣ ಪದ್ಧತಿ. ಎಳೆಯ ಮಕ್ಕಳಿಗಾಗಿ ಇದನ್ನು ವಿಶೇಷವಾಗಿ ರೂಪಿಸಲಾಗಿದೆ. ಶಾಲೆಗೆ ಸೇರುವ ಮುನ್ನ ಮೂರು ತಿಂಗಳು ಈ ಯೋಜನೆಯಲ್ಲಿ ಮಕ್ಕಳು ಪಾಲ್ಗೊಳ್ಳಬೇಕು. ಅಲ್ಲಿ ಅಕ್ಷರ ಮತ್ತು ಅಂಕಿಗಳ ಜ್ಞಾನ ಪಡೆದು ಅನಂತರ ಪ್ರಾಥಮಿಕ ಶಾಲೆಗಳಿಗೆ ಸೇರಿಸಲು ಇದು ಅನುವು ಮಾಡಿಕೊಡುತ್ತದೆ.
ಪ್ರಾಂತೀಯ ಭಾಷೆಗಳಲ್ಲಿ ಉನ್ನತ ಶಿಕ್ಷಣ: ಉನ್ನತ ಶಿಕ್ಷಣ, ಅದರಲ್ಲೂ ತಾಂತ್ರಿಕ ಶಿಕ್ಷಣವೂ ಮಾತೃಭಾಷೆಯಲ್ಲಿ ಸಿಗುವಂತಾಗ ಬೇಕೆಂಬ ಮಹದಾಶಯದೊಂದಿಗೆ ಇದೇ ಮೊದಲ ಬಾರಿಗೆ ದೇಶದ 8 ರಾಜ್ಯಗಳ 14 ತಾಂತ್ರಿಕ ಕಾಲೇಜುಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಎಂಜಿನಿಯರಿಂಗ್ ಪದವಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಕನ್ನಡ ಸಹಿತ ಒಟ್ಟು 11 ಭಾಷೆಗಳನ್ನು ಇದರ ವ್ಯಾಪ್ತಿಗೆ ತರಲಾಗುವುದು ಎಂದು ಹೇಳಲಾಗಿದೆ. ಆರಂಭಿಕ ಹಂತದಲ್ಲಿ ಹಿಂದಿ, ತಮಿಳು, ತೆಲುಗು, ಮರಾಠಿ ಹಾಗೂ ಬಂಗಾಲಿ ಭಾಷೆಗಳಲ್ಲಿ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. 2020-21ನೇ ಶೈಕ್ಷಣಿಕ ವರ್ಷದಲ್ಲೇ ಇದು ಜಾರಿಯಾಗಲಿದೆ.
ಎನ್‌ಇಟಿಎಫ್: ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶ
ದಿಂದ “ನ್ಯಾಷನಲ್ ಎಜುಕೇಶನ್ ಟೆಕ್ನಾಲಜಿ ಫೋರಂ’ (ಎನ್‌ಇಟಿಎಫ್) ಎಂಬ ಸ್ವಾಯತ್ತ ಯೋಜನೆಯೊಂದನ್ನು ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ. ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವುದು, ಶೈಕ್ಷಣಿಕ ಯೋಜನೆಗಳು, ಶೈಕ್ಷಣಿಕ ಆಡಳಿತ ಮತ್ತು ಇನ್ನಿತರ ಸುಧಾರಣ ಕ್ರಮಗಳನ್ನು ಜಾರಿಗೊಳಿಸುವುದು ಈ ಯೋಜನೆಯ ಉದ್ದೇಶ.
ಸದೃಢ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಮಹಾಯಜ್ಞದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯೂ ಒಂದು ಪ್ರಮುಖ ವಿಚಾರವಾಗಿದೆ. ಇಂದು ನಾವು ಮಕ್ಕಳಿಗೆ, ಯುವ ಸಮೂಹಕ್ಕೆ ಯಾವ ವಿದ್ಯಾಭ್ಯಾಸ ಕೊಡುತ್ತೇವೋ ಅದರ ಮೇಲೆ ನಮ್ಮ ರಾಷ್ಟ್ರದ ಭವಿಷ್ಯ ನಿಂತಿರುತ್ತದೆ. – ನರೇಂದ್ರ ಮೋದಿ, ಪ್ರಧಾನಿ