ಮೋದಿ ಸದ್ಯದಲ್ಲಿ ಪ್ಯಾಲೆಸ್ತೀನ್‌ಗೆ ಭೇಟಿ ನೀಡುವ ಯಾವ ಯೋಜನೆಯನ್ನೂ ಹೊಂದಿಲ್ಲ. ಹೀಗಾಗಿ ಅವರ ಭೇಟಿ ಇಸ್ರೇಲಿಗರಿಗೆ ಬಹಳ ಆಪ್ತವಾಗಿ ಕಂಡಿದೆ.
ಪ್ರಧಾನಿ ಮೋದಿ ಕೈಗೊಂಡಿರುವ ಇಸ್ರೇಲ್ ಪ್ರವಾಸ ಹಲವು ಕಾರಣಗಳಿಗಾಗಿ ಐತಿಹಾಸಿಕ ಎಂದು ಬಣ್ಣಿಸಲ್ಪಟ್ಟಿದೆ. ಮೊದಲನೆಯದಾಗಿ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಪ್ರವಾಸ ಕೈಗೊಂಡಿರುವುದು ಇದೇ ಮೊದಲು. ಎರಡನೆಯದಾಗಿ ಇಸ್ರೇಲ್-ಭಾರತದ ನಡುವೆ ರಾಜತಾಂತ್ರಿಕ ಸಂಬಂಧ ಪ್ರಾರಂಭವಾದ 25ನೇ ವರ್ಷದಲ್ಲಿ ಪ್ರಧಾನಿಯೊಬ್ಬರು ಆ ದೇಶವನ್ನು ಸಂದರ್ಶಿಸುತ್ತಿದ್ದಾರೆ. ಇಸ್ರೇಲ್, ಭಾರತ ಮಾತ್ರವಲ್ಲದೆ ಜಗತ್ತಿನ ಹಲವು ದೇಶಗಳು ಕುತೂಹಲದಿಂದ ಈ ಪ್ರವಾಸದ ಫಲಶ್ರುತಿಯನ್ನು ನಿರೀಕ್ಷಿಸುತ್ತಿವೆ. ಇಸ್ರೇಲ್‌ನಲ್ಲಂತೂ ಮೋದಿ ಭೇಟಿ ಸಂಭ್ರಮದ ವಾತಾವರಣವನ್ನೇ ಸೃಷ್ಟಿಸಿದೆ. ಅಲ್ಲಿನ ಪ್ರಮುಖ ಆಂಗ್ಲ ಪತ್ರಿಕೆ ಕೆಲವು ದಿನಗಳ ಹಿಂದೆಯೇ ಎದ್ದೇಳಿ, ಭಾರತದ ಪ್ರಧಾನಿ ಇತಿಹಾಸ ಸೃಷ್ಟಿಸಲು ಬರುತ್ತಿದ್ದಾರೆ ಎಂಬ ಶೀರ್ಷಿಕೆ ನೀಡಿ ಸುದ್ದಿ ಪ್ರಕಟಿಸಿರುವುದು ಇದಕ್ಕೆ ಸಾಕ್ಷಿ. ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೇ ಮೋದಿಯನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಇದೊಂದು ಅತ್ಯಂತ ಅಪೂರ್ವವಾದ ಗೌರವ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಧರ್ಮಗುರು ಪೋಪ್ ಅವರಿಗೆ ಮಾತ್ರ ಸಿಕ್ಕಿರುವ ಈ ಗೌರವಕ್ಕೆ ಈಗ ಮೋದಿ ಪಾತ್ರರಾಗುತ್ತಿರುವುದು ಭಾರತದ ಬಗ್ಗೆ ಇಸ್ರೇಲ್ ಹೊಂದಿರುವ ಭಾವನೆಯ ದ್ಯೋತಕ.
“ನನ್ನ ಸ್ನೇಹಿತ ನರೇಂದ್ರ ಮೋದಿ ಇಸ್ರೇಲ್‌ಗೆ ಬರುತ್ತಿದ್ದಾರೆ. ಇಸ್ರೇಲ್ ಪಾಲಿಗೆ ಇದೊಂದು ಐತಿಹಾಸಿಕ ಭೇಟಿ. 70 ವರ್ಷಗಳಲ್ಲಿ ಭಾರತದ ಯಾವ ಪ್ರಧಾನಿಯೂ ಇಸ್ರೇಲ್‌ಗೆ ಬಂದಿರಲಿಲ್ಲ. ಇದರಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮತ್ತು ಇತರ ಕ್ಷೇತ್ರಗಳ ಸಂಬಂಧವೂ ವೃದ್ಧಿಯಾಗಲಿದೆ’ ಎಂದು ನೆತನ್ಯಾಹು ಈ ಭೇಟಿಯ ಮಹತ್ವವನ್ನು ಸಾರಿದ್ದಾರೆ. 2003ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಇಸ್ರೇಲ್ ಪ್ರಧಾನಿ ಏರಿಯಲ್ ಶರೋನ್ ಭಾರತ ಪ್ರವಾಸ ಕೈಗೊಂಡಿದ್ದರು. ಇದಕ್ಕೂ ಮೊದಲು ಇಸ್ರೇಲ್ ಅಧ್ಯಕ್ಷ ಎಜೆರ್ ವಿಜ್‌ಮ್ಯಾನ್ 1997ರಲ್ಲಿ ಬಂದಿದ್ದರು. ಕಳೆದ ವರ್ಷ ನವಂಬರ್‌ನಲ್ಲಿ ಅಧ್ಯಕ್ಷ ರೆವೆನ್ ರಿವಿನ್ ಬಂದು ಹೋಗಿದ್ದಾರೆ. ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 25 ವರ್ಷಗಳಾಗಿದ್ದರೂ ಉಳಿದ ದೇಶಗಳಿಗೆ ಹೋಲಿಸಿದರೆ ಉಭಯ ದೇಶಗಳ ನಾಯಕರು ಬಂದು ಹೋಗುವ ಪರಿಪಾಠ ಬಹಳ ಕಡಿಮೆ ಇದೆ. ಇದಕ್ಕೆ ಕಾರಣ ಇಸ್ರೇಲ್‌ನ ಆಂತರಿಕ ರಾಜಕೀಯ ಸ್ಥಿತಿಗತಿ, ವಿದೇಶ ನೀತಿ ಮತ್ತು ಅದರ ಪ್ರಕ್ಷುಬ್ಧ ಅಂತರಾಷ್ಟ್ರೀಯ ಸಂಬಂಧಗಳು. ಸುತ್ತ ವೈರಿ ದೇಶಗಳನ್ನು ಇಟ್ಟುಕೊಂಡು ಸದಾ ಯುದ್ಧದ ಕಾರ್ಮೋಡದಲ್ಲೇ ಕಾಲ ಕಳೆಯುತ್ತಿರುವ ಇಸ್ರೇಲ್ ಜತೆಗೆ ಸಂಬಂಧ ಇಟ್ಟುಕೊಳ್ಳುವಾಗ ಪ್ರತಿ ದೇಶ ಎರಡೆರಡು ಸಲ ಯೋಚಿಸುತ್ತದೆ. ಉಳಿದ ದೇಶಗಳ ಪಾಲಿಗೆ ಇಸ್ರೇಲ್ ಜತೆಗಿನ ಸಂಬಂಧ ಎರಡಲಗಿನ ಕತ್ತಿಯ ಮೇಲಿನ ನಡಿಗೆಯಂತೆ. ತುಸು ಹೆಚ್ಚು ಕಮ್ಮಿಯಾದರೂ ಅಪಾಯ ತಪ್ಪಿದ್ದಲ್ಲ.ಇಷ್ಟರ ತನಕ ಭಾರತವೂ ಇದಕ್ಕೆ ಹೊರತಾಗಿರಲಿಲ್ಲ. ಹೀಗಾಗಿಯೇ ಇಸ್ರೇಲಿಗರ ಭಾರತದ ಜತೆಗಿನ ಸಂಬಂಧವನ್ನು ಉಪಪತ್ನಿಗೆ ಹೋಲಿಸಿ ತಮಾಷೆ ಮಾಡುತ್ತಾರೆ. ಇಸ್ರೇಲ್ ಜತೆಗೆ ಗಾಢ ಸಂಬಂಧ ಹೊಂದಿರಬೇಕೆಂದು ಭಾರತದ ನಾಯಕರು ಬಯಸುತ್ತಾರೆ ಹಾಗೂ ಇದೇ ವೇಳೆ ಇದು ಉಳಿದವರಿಗೆ ಗೊತ್ತಾಗದಂತೆ ಎಚ್ಚರ ವಹಿಸುತ್ತಾರೆ. ಸಂಬಂಧ ಇಟ್ಟುಕೊಂಡಿದ್ದರೂ ಅದು ರಹಸ್ಯವಾಗಿರಬೇಕೆನ್ನುವುದು ಭಾರತದ ಧೋರಣೆ ಎನ್ನುವುದು ಇಸ್ರೇಲಿಗರು ತಮಾಷೆಯಾಗಿ ಕೊಡುವ ವಿವರಣೆಯಾಗಿದ್ದರೂ ಇದರಲ್ಲಿ ಸತ್ಯ ಇದೆ. ಇಸ್ರೇಲ್‌ಗೆ ಭೇಟಿ ನೀಡಿದ ಕೂಡಲೇ ಪ್ಯಾಲೆಸ್ತೀನ್‌ಗೆ ಇಲ್ಲವೇ ಅರಬ್ ದೇಶಗಳಿಗೊಮ್ಮೆ ಹೋಗಿ ಬರುವುದು ಜಾಗತಿಕ ಸಂಬಂಧದಲ್ಲಿ ಸಮತೋಲನ ಕಾಯ್ದುಕೊಳ್ಳಲು ಜಾಗತಿಕ ನಾಯಕರು ಅನುಸರಿಸುತ್ತಿರುವ ಕಾರ್ಯತಂತ್ರ. ಆದರೆ ಮೋದಿ ಸದ್ಯದಲ್ಲಿ ಪ್ಯಾಲೆಸ್ತೀನ್‌ಗೆ ಭೇಟಿ ನೀಡುವ ಯಾವ ಯೋಜನೆಯನ್ನೂ ಹೊಂದಿಲ್ಲ. ಹೀಗಾಗಿ ಅವರ ಭೇಟಿ ಇಸ್ರೇಲಿಗರಿಗೆ ಬಹಳ ಆಪ್ತವಾಗಿ ಕಂಡಿದೆ. ಅಲ್ಲದೆ ಮೋದಿ ಮೂರೂ ದಿನವೂ ಜೆರುಸಲೇಂನಲ್ಲಿ ತಂಗಲಿದ್ದಾರೆ. ರಾಜಧಾನಿ ಟೆಲ್ ಅವೀವ್‌ಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾತ್ರ ಹೋಗುತ್ತಿದ್ದಾರೆ. ಟ್ರಂಪ್ ಕೂಡ ಯಾವ ಟೀಕೆಗಳಿಗೂ ಕಿವಿಗೊಡದೆ ಜೆರುಸಲೇಂನಲ್ಲೇ ತಂಗಿದ್ದರು ಎನ್ನುವುದು ಗಮನಾರ್ಹ ಅಂಶ.
ಉಭಯ ದೇಶಗಳ ನಡುವಿನ ವಾಣಿಜ್ಯ ಮತ್ತು ರಕ್ಷಣಾ ಸಂಬಂಧ ಸಂವರ್ಧನೆ ಪ್ರವಾಸದ ಮುಖ್ಯ ಉದ್ದೇಶ. ಜತೆಗೆ ಗಂಗಾ ನದಿಗೆ ಸ್ವತ್ಛತೆಗೆ ಇಸ್ರೇಲ್ ಹೊಂದಿರುವ ಅತ್ಯಧುನಿಕ ತಂತ್ರಜ್ಞಾನವನ್ನು ಪಡೆದುಕೊಳ್ಳುವ ಗುರಿಯೂ ಇದೆ. ರಕ್ಷಣೆ, ವಾಣಿಜ್ಯ, ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಒಪ್ಪಂದಗಳಿಗೆ ಅಂಕಿತ ಬೀಳುವ ನಿರೀಕ್ಷೆಯಿದೆ. ಇಸ್ರೇಲ್ ಭೇಟಿ ರಾಜಕೀಯ ಲಾಭಕ್ಕಿಂತಲೂ ಆರ್ಥಿಕ ಲಾಭದ ದೃಷ್ಟಿ ಹೊಂದಿದೆ. ಇಸ್ರೇಲ್ ಪ್ರವಾಸ ಭಾರತದ ಅತ್ಯಂತ ಪ್ರಬುದ್ಧ ರಾಜಕೀಯ ನಡೆ ಎಂಬ ವಿಶೇಷ ಪ್ರಶಂಸೆಗೂ ಪಾತ್ರವಾಗಿದೆ.