ಧಾರವಾಡ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಸೇವೆಯನ್ನು ಸದಾ ಕಾಲವೂ ನಾವು ಸ್ಮರಿಸಬೇಕು ಎಂದು ನಿವೃತ್ತ ಚೀಫ್ ಎಂಜಿನಿಯರ್ ಎಂ.ಬಿ. ಪರಪ್ಪಗೌಡರ ಹೇಳಿದರು.
ಡಿಸಿ ಕಚೇರಿ ಆವರಣದ ಕಾರ್ಗಿಲ್ ಸ್ತೂಪದಲ್ಲಿ ಪುರಸ್ಕಾರ ಸಂಸ್ಥೆ, ಜಾಗೃತಿ ವೇದಿಕೆ ಹಾಗೂ ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಂಜಿನಿಯರ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರಂಭದ ಹಂತದಲ್ಲಿ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಕೇವಲ ಮೂರು, ನಾಲ್ಕು ವಿಭಾಗಗಳು ಇದ್ದವು. ಆದರೆ ಈಗ ಎಲ್ಲ ಕ್ಷೇತ್ರಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡಲಾಗುತ್ತಿದ್ದು, ಎಂಜಿನಿಯರರ ಸೇವೆಯು ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಅತ್ಯವಶ್ಯವಾಗಿದೆ ಎಂದರು.
ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮೀನಗಡ ಮಾತನಾಡಿ, ಭಾರತದ ಸೇನೆಯಲ್ಲಿ ಮಹಾ ದಂಡನಾಯಕರಾಗಿ ಸೇವೆ ಸಲ್ಲಿಸಿದ ಮೂವರು ಕನ್ನಡಿಗ ಮಹಾದಂಡ ನಾಯಕರ ಕಂಚಿನ ಪುತ್ಥಳಿಯನ್ನು ಸದ್ಯದಲ್ಲಿಯೇ ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.
ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್ ಎಸ್.ಜಿ. ಭಾಗವತ ಅಧ್ಯಕ್ಷತೆ ವಹಿಸಿದ್ದರು. ಕವಿ ನರಸಿಂಹ ಪರಾಂಜಪೆ ಹಾಗೂ ರಾಜೀವ ಪಾಟೀಲ ಕುಲಕರ್ಣಿ ಮಾತನಾಡಿದರು. ಎಂಜಿನಿಯರ್‌ರಾದ ಎಂ.ಬಿ. ಪರಪ್ಪಗೌಡರ, ಎಸ್.ಜಿ. ಭಾಗವತ, ಬಿ. ಎಚ್. ಬೆಳಲದವರ, ಅರವಿಂದ ಕಪಲಿ, ನರಸಿಂಹ ಪರಾಂಜಪೆ ಹಾಗೂ ರಾಜು ಪಾಟೀಲ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಪುರಸ್ಕಾರ ಸಂಸ್ಥೆಯ ಅಧ್ಯಕ್ಷ ಕೃಷ್ಣ ಜೋಶಿ, ಎಂ.ಬಿ. ಬೇನಪ್ಪನವರ, ಮಹೇಶ ಕಲ್ಲಿಕರೆಣ್ಣವರ, ಪ್ರೊ| ಬೆಂಜಾಮಿನ ಸಕ್ರಿ, ಕಾರ್ಗಿಲ್ ಹೀರೊ ಭೀಮಪ್ಪ ಜಾಧವ, ಬಾಬುರಾವ್ ರಾಠೊಡ, ಸಿ. ಅಭಿನಂದನ, ಅಶೋಕ ಮೊಕಾಶಿ, ಮನೋಜ ಪಾಟೀಲ ಇದ್ದರು. ಪ್ರಾಣೇಶ ಪಾಶ್ಚಾಪುರ ಸ್ವಾಗತಿಸಿದರು. ಡಾ| ರಾಜೇಶ ಹೊಂಗಲ ನಿರೂಪಿಸಿದರು. ಎಸ್.ವೈ. ಕುಲಕರ್ಣಿ ವಂದಿಸಿದರು.