ಕಲಬುರಗಿ: ನನ್ನ ಮತ ಯಾವುದೇ ಕಾರಣಕ್ಕೂ ಮಾರಾಟಕ್ಕಿಲ್ಲ ಎಂಬ ಆತ್ಮಸಾಕ್ಷಿ ಅಭಿಯಾನ ಜಾಗೃತಿಗೊಳಿಸುಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.
ನಗರದ ಡಾ. ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಬುಧವಾರ ನಡೆದ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣೆಯಲ್ಲಿಂದು ಹಣ, ತೋಳ್ಬಲ ಹಾಗೂ ಜಾತಿ ಬಲ ಪ್ರಮುಖ ಪಾತ್ರ ವಹಿಸುತ್ತಿವೆ. ಹೀಗಾಗಿ ಮತ ಮಾರಾಟ ಮಾಡದೇ ನಿಂತವರಲ್ಲೇ ಉತ್ತಮರನ್ನು ಆಯ್ಕೆ ಮಾಡಿ. ಒಂದು ವೇಳೆ ನಿಂತವರಲ್ಲಿ ಯಾರೂ ಒಳ್ಳೆಯವರು ಕಾಣದಿದ್ದರೆ ನೋಟಾಗೆ ಒತ್ತಿ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಮುಖವಾಗಿ ಯುವಕರು ಚುನಾವಣೆ ಸುಧಾರಣೆ ಹಾಗೂ ಪ್ರಜಾಪ್ರಭುತ್ವ ಮೌಲ್ಯ ಗಳನ್ನು ಎತ್ತಿ ಹಿಡಿಯುವಲ್ಲಿ ಯುವಕರು ಕಾವಲುಗಾರರಾಗಬೇಕು ಎಂದು ಪುನರುಚ್ಚರಿಸಿದ ಸಭಾಧ್ಯಕ್ಷ ಕಾಗೇರಿ, ನಾವು ಯಾವುದೇ ಕಾರಣಕ್ಕೂ ಮತ ಮಾರಿಕೊಳ್ಳುವುದಿಲ್ಲ ಎಂಬ ಪ್ರತಿಜ್ಞೆ ಮಾಡಿಸಿದರು.
ರಾಜಕೀಯ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿತವಾಗುತ್ತಿವೆ. ಭ್ರಷ್ಟಾಚಾರ ವ್ಯಾಪಿಸಿದೆ. ಜನಪ್ರತಿನಿಧಿಗಳು ಜನ ಹಿತ ಮರೆತು ಸ್ವಹಿತಾಸಕ್ತಿ (ಆಸ್ತಿ ಸಂಪತ್ತು ಹೆಚ್ಚಳ) ತೊಡಗಿದ್ದರೆ, ಅಧಿಕಾರಿಗಳು ಹಣ ನೀಡಿದಲ್ಲಿ ಕೆಲಸ ಎಂಬ ಧೋರಣೆ ತಳೆಯುತ್ತಿದ್ದರೆ, ಇನ್ನೂ ನ್ಯಾಯಮೂರ್ತಿಗಳು ಕೋಟಿಗಟ್ಟಲೇ ಹಣ ಪಡೆದು ಜೈಲಿಗೆ ಹೋಗಿ ಬಂದಿರುವುದನ್ನು ನೋಡಿದ್ದೇವೆ, ವಿನಾಕಾರಣ ವರ್ಷಗಟ್ಟಲೆ ಪ್ರಕರಣ ಮುಂದಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಅದರಲ್ಲೂ ಮಾಧ್ಯಮ ಕ್ಷೇತ್ರವೂ ಸಾಮಾಜಿಕ ಹೊಣೆಗಾರಿಕೆ ಮರೆತ್ತಿದ್ದು, ಭ್ರಷ್ಟಾಚಾರ ಕಾಲಿಟ್ಟಿದೆ. ಯಾವುದು ಸುದ್ದಿ ಆಗಬೇಕೋ, ಅದಾಗುತ್ತಿಲ್ಲ. ಬ್ರೇಕಿಂಗ್ ನ್ಯೂಸ್ ಎಂದು ಹೇಳಿ ತದನಂತರ ಆ ಸುದ್ದಿ ನಾಪತ್ತೆಯಾಗುವುದನ್ನು ನೋಡುತ್ತಿದ್ದೇವೆ. ಇದಕ್ಕೆಲ್ಲ ನಾವೆಲ್ಲ ಮತ ಮಾರಿಕೊಳ್ಳದಿರುವುದೇ ಪರಿಹಾರವಾಗಿದೆ ಎಂದು ಹೇಳಿದರು.
ಕಳೆದ ಮಾರ್ಚ್ ತಿಂಗಳಲ್ಲಿ ವಿಧಾನಸಭೆಯಲ್ಲಿ ಚರ್ಚಿಸಲಾಗಿದೆ. ಜನರ ನಡುವೆ ಬರಬೇಕು ಎಂಬ ನಿಟ್ಟಿನಲ್ಲಿ ಈ ಸಂವಾದ ಆಯೋಜಿಸಲಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷವಾಯಿತು. ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲಾಗಿದೆ. ಬಹಳ ಹೆಮ್ಮೆ ಅನಿಸುತ್ತಿದೆ. 35 ಕೋ. 140 ಆಹಾರ ಸ್ವಾವಲಂಬನೆ ಸಾಧಿಸಿದ್ದೇವೆ. ಇದಕ್ಕೆಲ್ಲ ರೈತರ ಪರಿ ಶ್ರಮದಿಂದ ಸಾಧ್ಯವಾಯಿತು. ದೇಶ ಸೈನಿಕರು ನಾವು ಪುರಸ್ಕರಿಸಿದರೂ ಕಡಿಮೆ. ಕೃತಜ್ಞತೆ ಸಲ್ಲಿಸಬೇಕು. ಉಗ್ರಗಾಮಿಗಳು ಈ ಕಡೆ ತಲೆ ಎತ್ತದಂತೆ ಮಾಡಲಾಗಿದೆ. ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರದಲ್ಲಿ ಉಪಗ್ರಹ ಕಕ್ಷೆಗೆ ಸೇರಿಸಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಕೊರೊನಾ ಸಮಯದಲ್ಲಿ ಜನರ ರಕ್ಷಣೆ ಸೇರಿದಂತೆ ಹತ್ತಾರು ಕ್ಷೇತ್ರದಲ್ಲಿ ಸಾಧನೆ ಮಾಡಲಾಗಿದೆ ಎಂದು ವಿವರಣೆ ನೀಡಿದರು.
ಕೆಕೆಆರ್ ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ್ ಸೇಡಂ, ಶಾಸಕರಾದ ಎಂ. ವೈ. ಪಾಟೀಲ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಅಧಿಕಾರಿಗಳು ಹಾಜರಿದ್ದರು. ಜಿಲ್ಲಾಧಿಕಾರಿ ಯಶವಂತ ಗುರುಕರ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಸಿಇಒ ಗಿರೀಶ ಬಡೋಲೆ ವಂದಿಸಿದರು.