ಉಡುಪಿ: ಆತ್ಮರಕ್ಷಣೆಗಾಗಿ ಹೆಣ್ಮಕ್ಕಳು ಕಳರಿಪಯಟ್ಟು ಕಲಿಯ ಬೇಕು ಮತ್ತು ಸರಕಾರಗಳು ಶಾಲಾ ಕಾಲೇಜುಗಳಲ್ಲಿ ಇದನ್ನು ಕಲಿಸಬೇಕು ಎಂದು ಹಿರಿಯ ಕಳರಿಯಟ್ಟು ಗುರು ಪದ್ಮಶ್ರೀ ಮೀನಾಕ್ಷಿ ಅಮ್ಮ ಹೇಳಿದರು.
ಶ್ರೀ ಅದಮಾರು ಮಠ, ಶ್ರೀ ಕೃಷ್ಣ ಸೇವಾ ಬಳಗದಿಂದ ಶನಿವಾರ ಶ್ರೀ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಹಮ್ಮಿಕೊಂಡ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಕಳರಿ ಕಲಿಯಲು ಹಿಂದೆ ವರ್ಷಗಳೇ ಬೇಕಿತ್ತು. ಈಗ ಮಕ್ಕಳು ಸುಲಭವಾಗಿ ಅಲ್ಪಾವಧಿಯಲ್ಲಿ ಕಲಿಯುತ್ತಿದ್ದು, ಇದು ಉತ್ತಮ ಆರೋಗ್ಯಕ್ಕೆ ಪೂರಕಎಂದರು.
ಶ್ರೀ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹಿಸಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಆತ್ಮರಕ್ಷಣೆಗಾಗಿ ಇಂತಹ ಸಾಹಸ ಚಟುವಟಿಕೆಗಳನ್ನು ಕಲಿಸಬೇಕು. ಭಾರತೀಯ ಭವ್ಯ ಪರಂಪರೆಯ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದು ಆಶಿಸಿದರು.
ಶ್ರೀ ವಜ್ರದೇಹಿ ಮಠಾಧೀಶರಾದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಯಶಪಾಲ್ ಸುವರ್ಣ, ಉದ್ಯಮಿ ಪಿ. ರಾಮದಾಸ ಮಡ್ಮಣ್ಣಾಯ ಉಪಸ್ಥಿತ ರಿದ್ದರು. ವಾಗ್ಮಿ ಶ್ರೀಕಾಂತ್ ಶೆಟ್ಟಿ ಅವರು ತೌಳವರ ಸಮರ ಪರಂಪರೆ, ಕಳರಿಪಯಟ್ಟು, ತುಳುನಾಡು, ಕೇರಳ ಹಾಗೂ ಗರೋಡಿ ನಡುವಿನ ಸಂಬಂ ಧವನ್ನು ವಿವರಿಸಿದರು.
ಪ್ರಾತ್ಯಕ್ಷಿಕೆ: ದಿನೇಶನ್ ಕಣ್ಣೂರು ನೇತೃತ್ವದಲ್ಲಿ ಕಳರಿಪಯಟ್ಟು ಪ್ರದರ್ಶನಗೊಂಡಿತು. ಮೀನಾಕ್ಷಿ ಅಮ್ಮನವರು 80ನೇ ವಯಸ್ಸಿನಲ್ಲೂ ಕತ್ತಿ, ಗುರಾಣಿ ಹಿಡಿದು ಗಮನ ಸೆಳೆದರು. ಶ್ರೀ ಕೃಷ್ಣ ಸೇವಾ ಬಳಗದ ಸಂಚಾಲಕ ರಾದ ಗೋವಿಂದರಾಜ್ ಸ್ವಾಗತಿಸಿ, ಗಣೇಶ್ ಹೆಬ್ಟಾರ್ ವಂದಿಸಿದರು. ಪ್ರಾಧ್ಯಾಪಕ ರಾಘವೇಂದ್ರ ರಾವ್ ನಿರೂಪಿಸಿದರು.