ಮಡಿಕೇರಿ: ಭ್ರಷ್ಟಾಚಾರವನ್ನು ಬುಡಸಹಿತ ಕಿತ್ತೂಗೆಯುವ ಭರವಸೆಯೊಂದಿಗೆ ಬಳ್ಳಾರಿಗೆ ಪಾದಯಾತ್ರೆ ಮಾಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಆಡಳಿತಕ್ಕೆ ತಂದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು, ಈಗ ಭ್ರಷ್ಟಾಚಾರವನ್ನು ನಿಯಂತ್ರಿ ಸುವುದಿರಲಿ ಅದನ್ನೇ ಹೊದ್ದು ಮಲಗಿದ್ದಾರೆ ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್‌ಸೇರ್ಪಡೆಗೊಂಡ ಮಾಜಿ ಸಂಸದ ಅಡಗೂರು ಎಚ್. ವಿಶ್ವನಾಥ್ ಆರೋಪಿಸಿದ್ದಾರೆ.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಾತ್ಯ ತೀತ ಜನತಾದಳದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ ದರು. ತಮ್ಮ ಇಲ್ಲಿಯ ವರೆಗಿನ ಆಡಳಿತಾವಧಿ ಯಲ್ಲಿ ನುಡಿದಂತೆ ನಡೆದು 185 ಭರವಸೆ ಗಳನ್ನು ಈಡೇರಿಸಿರುವುದಾಗಿ ಹೇಳುವ ಸಿದ್ದರಾ ಮಯ್ಯ ಅವರಿಗೆ ತಾವು ಈಡೇರಿಸಿರುವ ವಚನಗಳಾದರು ಏನೆಂಬುದೆ ತಿಳಿದಿಲ್ಲವೆಂದು ವ್ಯಂಗ್ಯವಾಡಿದರು.
ಇವರನ್ನು ಜನತೆ ಆಯ್ಕೆ ಮಾಡಿರುವುದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಾರೆ ಮತ್ತು ರಾಜ್ಯದ ಅರಣ್ಯ ಮತ್ತು ಖನಿಜ ಸಂಪತ್ತಿನ ಲೂಟಿಯನ್ನು ತಡೆಗಟ್ಟಿ ಕೋಟ್ಯಂತರ ಹಣವನ್ನು ಖಜಾನೆಗೆ ತುಂಬುವ ಭರವಸೆಗಳಿಗಾಗಿ. ಆದರೆ ಇಂತಹ ಭರವಸೆಗಳನ್ನೆ ಸಿದ್ದರಾಮಯ್ಯ ಮರೆತು ವಚನ ಭ್ರಷ್ಟರಾಗಿರುವುದಾಗಿ ಕಟು ಟೀಕೆಗಳನ್ನು ಮಾಡಿದರು.
ರಾಜ್ಯದಲ್ಲಿ ಹರಿಯುವ ಕೃಷ್ಣ, ಕಾವೇರಿ, ಮಹದಾಯಿ ನದಿಗಳ ನೀರನ್ನು ಮತ್ತು ನದಿಯ ಮರಳನ್ನು ನಿಯಂತ್ರಿಸಲು ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲವೆಂದು ಲೇವಡಿಯಾಡಿ, ಗಣಿಧಣಿಗಳೆದುರು ತೊಡೆ ತಟ್ಟಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ ಅವರು ತಮ್ಮನ್ನು ರಾಜ್ಯದ ಜನತೆ ಆಯ್ಕೆ ಮಾಡಿದ್ದಾರೆನ್ನುವುದನ್ನೇ ಮರೆತಿರುವುದಾಗಿ ಟೀಕಿಸಿದರು.
ಕೆರೆಗಳನ್ನು ಮಾರಲು ಹೊರಟಿದ್ದಾರೆ ರಾಜ್ಯದ ಗಣಿಗಳ ತೆರಿಗೆಯಿಂದ ಸಂಗ್ರಹ ವಾದ 12 ಸಾವಿರ ಕೋಟಿ ರೂ.ಗಳಿಗೆ ಕನಿಷ್ಟ ಕ್ರಿಯಾಯೋಜನೆ ಮಾಡಲಾಗದ ರಾಜ್ಯದ ಕಾಂಗ್ರೆಸ್ ಸರಕಾರ ಪ್ರಸ್ತುತ ಬೆಂಗಳೂರಿನ 193 ಹಾಗೂ ರಾಜ್ಯ ವ್ಯಾಪ್ತಿಯಲ್ಲಿರುವ 1,300 ಕೆರೆಗಳನ್ನು ಡಿನೋಟಿಫೈ ಮಾಡಲು ಹೊರಟಿದೆ ಎಂದರು. ಇಂತಹ ಡಿನೋಟಿಫೈ ಮಾಡುವ ಮೂಲಕ ಕೆರೆಗಳನ್ನು ರಿಯಲ್ ಎಸ್ಟೇಟ್‌ಮಾಡಲು ಹೊರಟಿದೆ. ಹೀಗೆ ಕೆರೆಗಳನ್ನು ಮುಚ್ಚಿ ನೀರಿನ ಸೆಲೆಯನ್ನೆ ಬತ್ತಿಸಲು ಮುಂದಾಗಿರುವ ಕಾಂಗ್ರೆಸ್ ಸರಕಾರ ಜನರಿಗೆ ಕುಡಿಯುವ ನೀರನ್ನಾದರು ಎಲ್ಲಿಂದ ನೀಡುತ್ತದೆಂದು ತೀಕ್ಷ್ಣವಾಗಿ ಪ್ರಶ್ನಿಸಿದರು.ರಾಜ್ಯ ಸರಕಾರದ ಧೋರಣೆ, ನೀತಿಗಳು ಈ ರೀತಿಯದ್ದಾಗಿದ್ದರೆ, ಕೇಂದ್ರದ ಬಿಜೆಪಿ ಸರಕಾರ ವಿದೇಶಗಳಲ್ಲಿರುವ ಕಪ್ಪುಹಣವನ್ನು ವಾಪಸು ತಂದು ಪ್ರತಿ ಭಾರತೀಯ ಪ್ರಜೆಯ ಖಾತೆಗೆ 15 ಲಕ್ಷ ನೀಡುವುದಾಗಿ ತಿಳಿಸಿತ್ತಾದರೂ ಈಗೇನಾಗಿದೆಯೆಂದು ಪ್ರಶ್ನಿಸಿದರು.
ನೋಟು ಅಮಾನ್ಯಿàಕರಣದಿಂದ ಮೆಟ್ರೋ ಸಿಟಿಗಳಲ್ಲಿ 4 ಲಕ್ಷ ಯುವ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗೆ ಕೇಂದ್ರದ ಎಲ್ಲ ಧೋರಣೆಗಳು ಗೊಂದಲಮಯವಾಗಿವೆ ಎಂದು ಲೇವಡಿ ಮಾಡಿದರು.
ಜೆಡಿಎಸ್ ಗೆಲುವಿಗೆ ಶ್ರಮಿಸಿ
ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸೇರಿದಂತೆ ಎರಡೂ ರಾಷ್ಟ್ರೀಯ ಪಕ್ಷಗಳು ಜನರ ದುಃಖ ದುಮ್ಮಾನ, ಸಂಕಷ್ಟಗಳಿಗೆ ಸ್ಪಂದಿಸುವ ಬದಲು ತಮ್ಮ ಧೋರಣೆ ನೀತಿಗಳಿಂದ ಭ್ರಷ್ಟತೆಗೆ ನಾಂದಿ ಹಾಡುವ ಪಕ್ಷಗಳಾಗಿರು ವುದರಿಂದ ಪ್ರಸ್ತುತ ಕರ್ನಾಟಕಕ್ಕೆ ಕನ್ನಡಿಗರ ದುಃಖ ದುಮ್ಮಾನಗಳನ್ನು ಅರಿತು ನಡೆಯುವ ಪ್ರಾಂತೀಯ ಪಕ್ಷದ ಅಗತ್ಯತೆ ಇದ್ದು, ಮುಂಬರುವ ಚುನಾವಣೆಯಲ್ಲಿ ಜೆಎಇಎಸ್ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಕುಮಾರ ಪಥ
ಕಳೆದ ನಲ್ವತ್ತು ವರ್ಷಗಳಿಂದ ಕಾಂಗ್ರೆಸ್ ಪಥದಲ್ಲಿ ನಡೆಯುತ್ತಿದ್ದ ತಾನು, ಆ ಪಕ್ಷದ ನಾಯಕರ ನಡವಳಿಕೆಗಳಿಂದ ಬೇಸತ್ತಿದ್ದೇನೆ. ಈ ಸುದೀರ್ಘ ರಾಜಕೀಯ ಬದುಕಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹತ್ತಿರದಿಂದ ಬಲ್ಲವನಾಗಿದ್ದು, ರಾಷ್ಟ್ರೀಯ ಪಕ್ಷಗಳು ದೆಹಲಿಯ ಹಿಂದಿ ಜನರ ದರ್ಪಕ್ಕೆ ಒಳಪಟ್ಟು ನಡೆಯುವ ಪಕ್ಷಗಳಾಗಿದ್ದು, ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವುದಕ್ಕೂ ದೆಹಲಿಯತ್ತ ಮುಖಮಾಡುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ಸಂಕಷ್ಟಗಳಿಗೆ ಇಲ್ಲಿಯೆ ಸ್ಪಂದಿಸಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಜೆಡಿಎಸ್‌ಗೆ ತಾನು ಸೇರ್ಪಡೆಗೊಂಡಿದ್ದು, ಇನ್ನು ನನ್ನ ನಡೆ ಕುಮಾರ ಪಥದಲ್ಲಿ ಎಂದು ಹೇಳಿದರು.