Advertisement

ವಿಶ್ವನಾಥನ್‌ ಆನಂದ್‌ ಉತ್ತರಾಧಿಕಾರಿತ್ವದತ್ತ ಕೊನೆರು ಹಂಪಿ

07:55 PM Jan 03, 2020 | Team Udayavani |

ಕೊನೆರು ಹಂಪಿ… ಈ ಪದವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ, ಎಲ್ಲೋ ಕೇಳಿದ್ದೇನಲ್ಲ ಎಂದು ಅನಿಸಿದರೆ ತಪ್ಪೇನಿಲ್ಲ. ಕಾರಣ, ದಿಢೀರ್‌ ಸಾಧನೆಯ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ ಅವರು, ನಂತರ ದೀರ್ಘ‌ಕಾಲ ಅಂತಹ ಅದ್ಭುತವನ್ನು ಸಾಧಿಸದೇ ಇದ್ದದ್ದು. 2001ರಲ್ಲಿ ಬರೀ 14 ವರ್ಷದವರಿದ್ದಾಗ ಕೊನೆರು, ಬಾಲಕಿಯರ ವಿಶ್ವಕಪ್‌ ಗೆದ್ದುಕೊಂಡಿದ್ದರು. ಆಗವರು ಭಾರತದಲ್ಲಿ ಮನೆಮಾತಾಗಿದ್ದರು. ಮುಂದಿನ ವರ್ಷವೇ ಅಂದರೆ ಅವರ 15ನೇ ವರ್ಷದಲ್ಲಿ ವಿಶ್ವದ ಅತ್ಯಂತ ಕಿರಿಯ ಗ್ರ್ಯಾನ್‌ಮಾಸ್ಟರ್‌ ಎನಿಸಿಕೊಂಡರು (ಮುಂದೆ ಈ ದಾಖಲೆ ಚೀನಾದ ಆಟಗಾರ್ತಿ ಪಾಲಾಯಿತು).

Advertisement

ಹೀಗೆ ಸತತವಾಗಿ ಬಂದ ಯಶಸ್ಸು ಅವರನ್ನು ಏಕಾಏಕಿ ಭಾರತದ ಜನಪ್ರಿಯ ವ್ಯಕ್ತಿಗಳ ಸಾಲಿನಲ್ಲಿ ಸ್ಥಾನ ಪಡೆಯುವಂತೆ ಮಾಡಿತು. ಅದಾದ ನಂತರ ಕೊನೆರು ಹಂಪಿ ಹೆಸರು ತೆರೆಮರೆಗೆ ಸರಿಯಿತು. ಕಡೆಕಡೆಗೆ ಹೀಗೊಬ್ಬರು ಇದ್ದರಲ್ಲ ಅವರು ಏನಾದರು? ಎಂಬ ಪ್ರಶ್ನೆಯನ್ನೂ ಆಸಕ್ತ ಕ್ರೀಡಾಭಿಮಾನಿಗಳಲ್ಲಿ ಹುಟ್ಟಿಸಿತ್ತು. ಈ ನಡುವಿನ ಅವಧಿಯಲ್ಲಿ ಅಲ್ಲಿ ಇಲ್ಲಿ ಸಣ್ಣಪುಟ್ಟ ಪ್ರಶಸ್ತಿಗಳನ್ನು ಗೆದ್ದರೂ, ಹೇಳಿಕೊಳ್ಳುವಂತಹ ಸಾಧನೆಯನ್ನೇನೂ ಮಾಡಲಿಲ್ಲ.

ಈಗ ಮತ್ತೆ ಹಂಪಿ ಹೆಸರು ಮೇಲೆದ್ದಿದೆ. ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಗುಡಿವಾಡದ ಹಂಪಿಗೆ ಈಗ 32 ವರ್ಷ. ಮಗು ಹುಟ್ಟಿದ ಸಂಭ್ರಮದಲ್ಲಿ ಎರಡು ವರ್ಷ ಚೆಸ್‌ನಿಂದ ದೂರವಿದ್ದರು. ಈಗ ವಿಶ್ವದಂಗಳಕ್ಕೆ ಮರಳಿದ್ದಾರೆ. ಡಿ.28ರಂದು ರಷ್ಯಾದ ಮಾಸ್ಕೊದಲ್ಲಿ ನಡೆದ ವಿಶ್ವ ರ್ಯಾಪಿಡ್‌ ಚೆಸ್‌ನಲ್ಲಿ ಚೀನಾದ ಟಿಂಗ್‌ಜಿಯನ್ನು ಸೋಲಿಸಿ ವಿಶ್ವಚಾಂಪಿಯನ್‌ ಆಗಿದ್ದಾರೆ. 2017ರಲ್ಲಿ ವಿಶ್ವನಾಥನ್‌ ಆನಂದ್‌ ಈ ಪ್ರಶಸ್ತಿ ಗೆದ್ದ ನಂತರ, ಈ ಸಾಧನೆ ಮಾಡಿದ ಕೇವಲ 2ನೇ ಭಾರತೀಯ ಕ್ರೀಡಾಪಟು ಹಂಪಿ! ಆನಂದ್‌ ನಂತರ ಭಾರತದ ಚೆಸ್‌ ವಲಯದಲ್ಲಿ ಹೇಳಿಕೊಳ್ಳುವಂತಹ ಮತ್ತೂಂದು ಹೆಸರು ಕೇಳಿಬಂದಿಲ್ಲ. ಬಹುಶಃ ಕೊನೆರು ಈ ಸ್ಥಾನವನ್ನು ತುಂಬುವ ಎಲ್ಲ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next