Advertisement

ವಿಶ್ವನಾಥ್‌ ಜತೆಗೆ ಆರೇಳು ಕಾಂಗ್ರೆಸ್‌ ಶಾಸಕರು ಜೆಡಿಎಸ್‌ಗೆ

12:28 PM May 16, 2017 | Team Udayavani |

ಮೈಸೂರು: ಮಾಜಿ ಸಂಸದ ಎಚ್‌.ವಿಶ್ವನಾಥ್‌ ಪಕ್ಷ ಸೇರ್ಪಡೆಗೆ ಜೆಡಿಎಸ್‌ನಲ್ಲಿ ಯಾರಿಂದಲೂ ವಿರೋಧ ಇಲ್ಲ. ಆದರೆ, ತಮ್ಮೊಂದಿಗೆ ಆರೇಳು ಕಾಂಗ್ರೆಸ್‌ ಶಾಸಕರನ್ನು ಕರೆತರುವುದಾಗಿ ಹೇಳಿರುವುದರಿಂದ ತಡವಾಗುತ್ತಿದೆ ಎಂದು ಶಾಸಕ ಎಸ್‌.ಚಿಕ್ಕಮಾದು ಹೇಳಿದರು.

Advertisement

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವನಾಥ್‌ ಜೆಡಿಎಸ್‌ ಸೇರ್ಪಡೆ ಆಗುವುದರಿಂದ ಪಕ್ಷದ ಬಲವರ್ಧನೆಗೆ ಕಾರಣವಾಗಲಿದೆ ಎಂದರು.
ಇತ್ತೀಚೆಗೆ ನಡೆದ ಜೆಡಿಎಸ್‌ ಬೂತ್‌ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ಜಿ.ಟಿ. ದೇವೇಗೌಡರ ಮಗನಿಗೆ ಟಿಕೆಟ್‌ ನೀಡಬೇಕೆಂದು ಒತ್ತಾಯಿಸಿ ಕೆಲಕಾಲ ಗೊಂದಲ ಉಂಟು ಮಾಡಿದ್ದು ನಿಜ. ಅದು ಜಿ.ಟಿ. ದೇವೇಗೌಡರ ನಿಲುವಲ್ಲ, ಬದಲಾಗಿ ಅವರ ಬೆಂಬಲಿಗರದ್ದಾಗಿದೆ.

ಯಾರಿಗೆ ಟಿಕೆಟ್‌ ನೀಡಬೇಕೆಂಬುದನ್ನು ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡರು ನಿರ್ಧರಿಸುತ್ತಾರೆ ಎಂಬುದನ್ನು ಎಚ್‌.ಡಿ. ಕುಮಾರಸ್ವಾಮಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು. ಜೆಡಿಎಸ್‌ ಸೇರ್ಪಡೆ ಕುರಿತಂತೆ ಎಚ್‌. ವಿಶ್ವನಾಥ್‌ ಈಗಾಗಲೇ ಎಚ್‌.ಡಿ. ಕುಮಾರಸ್ವಾಮಿ ಅವರೊಡನೆ ಮಾತನಾಡಿದ್ದಾರೆ.

ಜತೆಗೆ ತಾನು ಜೆಡಿಎಸ್‌ಗೆ ಬರುವುದರಿಂದ ನಿಮ್ಮ ಪಕ್ಷ ಹಾಗೂ ಕುಟುಂಬದಲ್ಲಿ ವಿರಸಕ್ಕೆ ಕಾರಣವಾಗುವುದಾದರೆ ಬರುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಈ ವೇಳೆ ಕುಮಾರಸ್ವಾಮಿ ಅವರ ಅತಂಕ ನಿವಾರಣೆ ಮಾಡಿ ಪಕ್ಷಕ್ಕೆ ಸದಾ ಸ್ವಾಗತವಿದೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ತಮ್ಮೊಡನೆ ರಾಜ್ಯದ ಇತರೆ ಭಾಗದ ಆರೇಳು ಕಾಂಗ್ರೆಸ್‌ ಶಾಸಕರೂ ಜೆಡಿಎಸ್‌ಗೆ ಸೇರಲಿದ್ದಾರೆ. ಅವರೊಡನೆ ಮಾತನಾಡಲು ಸಮಯ ಬೇಕೆಂದು ವಿಶ್ವನಾಥ್‌ ಸುಮಾರು 15 ದಿನಗಳ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ವಿಶ್ವನಾಥ್‌ ಜೆಡಿಎಸ್‌ ಸೇರ್ಪಡೆಯಾಗುವುದು ತಡವಾಗುತ್ತಿದೆ ಎಂದು ತಿಳಿಸಿದರು.

Advertisement

ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನೊಡನೆ ಜೆಡಿಎಸ್‌ ಒಳಒಪ್ಪಂದ ಮಾಡಿಕೊಂಡಿತ್ತೆಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದ ಮಾತು. ಚುನಾವಣೆಗೂ ಮುನ್ನವೇ ಪ್ರಸಾದ್‌ ಅವರನ್ನು ಭೇಟಿ ಮಾಡಿದ್ದ ಜೆಡಿಎಸ್‌ ಮುಖಂಡರು ನೀವು ಪಕ್ಷೇತರರಾಗಿ ಸ್ಪರ್ಧಿಸಿದರೆ ನಾವು ನಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಪ್ರಸಾದ್‌ ಅವರೇ ಮನಸ್ಸು ಮಾಡಲಿಲ್ಲ ಎಂದರು.

ಕಳಲೆ ಕೇಶವಮೂರ್ತಿ ಅವರನ್ನು ಜೆಡಿಎಸ್‌ ಅಭ್ಯರ್ಥಿಯೆಂದು ಮೊದಲು ಘೋಷಿಸಿದ್ದವರೇ ನಾವು. ಆದರೆ ಅವರು ಪಕ್ಷ ಬಿಟ್ಟುಹೋದ ಕಾರಣ ಎರಡು ರಾಷ್ಟ್ರೀಯ ಪಕ್ಷಗಳೆದುರು ಸ್ಪರ್ಧಿಸುವ ಚೈತನ್ಯ ಇಲ್ಲವೆಂದು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿಲ್ಲವೆಂದು ಚಿಕ್ಕಮಾದು ಸ್ಪಷ್ಟಪಡಿಸಿದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಈರೇಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next