Advertisement

ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ವಿಶ್ವನಾಥ ಶೆಟ್ಟಿ

09:31 PM Aug 15, 2019 | mahesh |

ಯಕ್ಷಗಾನ ಕಲೆಯನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ಬೆಳೆಸಿಕೊಂಡವರು ಹಲವರಿದ್ದಾರೆ. ಆದರೆ ಅವೆರಡನ್ನೂ ಬಿಟ್ಟು ಅಧ್ಯಾತ್ಮದ ಹಾದಿ ತುಳಿದವರು ವಿರಳ. ಅಂತಹ ವಿರಳಾತಿವಿರಳದಲ್ಲಿ ಸೊರ್ನಾಡು ವಿಶ್ವನಾಥ ಶೆಟ್ಟಿಯವರು ಪ್ರಮುಖರು. ಅವರಿಗೀಗ 79ರ ಹರೆಯ. ಬಂಟ್ವಾಳ ತಾಲೂಕಿನ ಸುವರ್ಣನಾಡು ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನದ ಸ್ಥಾಪಕರಾಗಿ ವೈರಾಗ್ಯದ ಹಾದಿ ತುಳಿದ ಅವರೀಗ ವಿಶ್ವನಾಥ ಸ್ವಾಮಿಯಾಗಿ ಪ್ರಸಿದ್ಧರು.

Advertisement

ಎಳವೆಯಲ್ಲೇ ಅಧ್ಯಾತ್ಮದತ್ತ ಹೆಚ್ಚು ಒಲವಿದ್ದ ವಿಶ್ವನಾಥ ಶೆಟ್ಟರು ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದ್ದರು. ಆರಂಭದಲ್ಲಿ ಎಂಕು ಭಾಗವತರಿಂದ ಚೆಂಡೆ-ಮದ್ದಳೆ ಅಭ್ಯಸಿಸಿದ ಅವರು ಮೂಡಬಿದ್ರೆ ವಾಸು ಅವರಿಂದ ಯಕ್ಷಗಾನದ ಕುಣಿತ ಹಾಗೂ ಕೂರ್ಯಾಳ ತಮ್ಮಯ್ಯ ಆಚಾರ್ಯ ಮತ್ತು ನಾಂಞ ಕಿಲ್ಲೆಯವರಿಂದ ಅರ್ಥಗಾರಿಕೆಯಲ್ಲಿ ತರಬೇತಿ ಹೊಂದಿದರು. ಅಲ್ಲದೆ ರಾಜನ್‌ ಅಯ್ಯರ್‌ರಿಂದ ತಾಂಡವ ನೃತ್ಯವನ್ನು ಕಲಿತರು. ಎರ್ಮಾಳಿನಲ್ಲಿ ಚಿಕ್ಕ ಜೀನಸು ಅಂಗಡಿ ತೆರೆದು ವ್ಯವಹಾರಕ್ಕೆ ಕಾಲಿಟ್ಟ ಅವರು ಮುಂದೆ ಬಿ.ಸಿ.ರೋಡ್‌, ಸೊರ್ನಾಡುಗಳಲ್ಲಿ ಚಿಕ್ಕಪುಟ್ಟ ವ್ಯಾಪಾರಗಳಲ್ಲಿ ತೊಡಗಿ ಅದರೊಂದಿಗೆ ಯಕ್ಷಗಾನ ಬಯಲಾಟಗಳನ್ನು ನಡೆಸಿಕೊಂಡು ಬಂದರು.

ಸೊರ್ನಾಡು ಶ್ರೀ ದುರ್ಗಾಂಬಿಕಾ ಮೇಳವನ್ನು ಕಟ್ಟಿ ಹಲವು ಕಲಾವಿದರಿಗೆ ಆಶ್ರಯವಿತ್ತ ವಿಶ್ವನಾಥ ಶೆಟ್ಟರು ಸ್ವತಃ ಉತ್ತಮ ಪುಂಡು ವೇಷಧಾರಿಯಾಗಿದ್ದರು. ದಿ| ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು ಆರಂಭದಲ್ಲಿ ಈ ಮೇಳದಲ್ಲಿದ್ದು ಅವರ ಗರಡಿಯಲ್ಲಿ ಪಳಗಿದವರು. ಬಂಟ್ವಾಳ ಜಯರಾಮ ಆಚಾರ್ಯರೂ ಅವರೊಂದಿಗಿದ್ದರು. ಹರಿಶ್ಚಂದ್ರ, ಹನೂಮಂತ, ಭಸ್ಮಾಸುರ, ಹಿರಣ್ಯಕಶ್ಯಪ ಇತ್ಯಾದಿ ಪಾತ್ರಗಳಲ್ಲಿ ವಿಶ್ವನಾಥ ಶೆಟ್ಟರು ಹೆಸರು ಮಾಡಿದ್ದರು. ತುಳು ಕೋಟಿ-ಚೆನ್ನಯ್ಯದ ಕೋಟಿಯ ಪಾತ್ರಕ್ಕೆ ದಿ| ಬೋಳಾರ ನಾರಾಯಣ ಶೆಟ್ಟರು ಅವರಿಗೆ ಪ್ರೇರಣೆ.

ತನ್ನ ಆಶ್ರಮದಲ್ಲಿ ಬಡ ಮಕ್ಕಳಿಗೆ ಆಶ್ರಯವಿತ್ತು ಭಜನೆ ಕಾರ್ಯಕ್ರಮದೊಂದಿಗೆ ಅವರ ಶಿಕ್ಷಣ ಹಾಗೂ ಉದ್ಯೋಗಕ್ಕೆ ಮಾರ್ಗದರ್ಶನವಿತ್ತಿರುವ ವಿಶ್ವನಾಥ ಸ್ವಾಮಿ ತನ್ನ ಯಕ್ಷಗಾನ ಸೇವೆಯನ್ನು ಈಗಲೂ ಕೈ ಬಿಡದೆ ಮುಂದುವರಿಸುತ್ತಿದ್ದಾರೆ. ಅವರ ಶ್ರೀ ದುರ್ಗಾಂಬಿಕಾ ಮೇಳ ಐದು ವರ್ಷ ಟೆಂಟ್‌ ಮೇಳವಾಗಿ ತಿರುಗಾಟ ಮಾಡಿ ಪ್ರಸ್ತುತ ಬಯಲಾಟ ಮೇಳವಾಗಿ ಪರಿವರ್ತನೆಗೊಂಡಿದೆ. ಇದೀಗ ಅವರ ಯಕ್ಷಗಾನ ಸೇವೆಯನ್ನು ಪರಿಗಣಿಸಿ ಮಂಗಳೂರಿನ ಜಾಗತಿಕ ಬಂಟ ಪ್ರತಿಷ್ಠಾನವು ದಿ. ಡಿ.ಕೆ. ಚೌಟ ದತ್ತಿನಿಧಿಯಿಂದ ಪ್ರತಿವರ್ಷ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ 2018-19ನೇ ಸಾಲಿಗೆ ಯಕ್ಷತಪಸ್ವಿ ಸೊರ್ನಾಡು ವಿಶ್ವನಾಥ ಶೆಟ್ಟರನ್ನು ಆಯ್ಕೆ ಮಾಡಿದೆ. ಆಗಸ್ಟ್‌ 25ರಂದು ಮಂಗಳೂರಿನಲ್ಲಿ ನಡೆಯುವ ಪ್ರತಿಷ್ಠಾನದ ವಾರ್ಷಿಕ ಮಹಾಸಭೆಯ ಸಂದರ್ಭ ಈ ಪ್ರಶಸ್ತಿ ಪ್ರದಾನ ಜರಗಲಿದೆ.

ಭಾಸ್ಕರ ರೈ ಕುಕ್ಕುವಳ್ಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next