Advertisement

ಪರಂ ನೋಟಿಸ್‌ಗೆ ವಿಶ್ವನಾಥ್‌ ಧಿಕ್ಕಾರ

03:45 AM Mar 09, 2017 | |

ಮೈಸೂರು: ಕೆಪಿಸಿಸಿ ಅಧ್ಯಕ್ಷರ ನೋಟಿಸ್‌ಗೆ 3 ಪುಟಗಳ ಬಹಿರಂಗ ಉತ್ತರ ನೀಡಿರುವ ಮಾಜಿ ಸಂಸದ ಎಚ್‌.ವಿಶ್ವನಾಥ್‌, ತಾವು ಕಾಂಗ್ರೆಸ್‌ ನಿಷ್ಠರಾಗಿದ್ದು, ಒಳಗೊಂದು, ಹೊರಗೊಂದು ನಡೆದುಕೊಂಡವರಲ್ಲ. ಈ ಬಗ್ಗೆ ಎಚ್ಚರವಿರಲಿ, ನಿಮ್ಮ ನೋಟಿಸ್‌ಗೆ ಧಿಕ್ಕಾರವಿರಲಿ ಎಂದು ತಿರುಗೇಟು ನೀಡಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕೆಪಿಸಿಸಿ ನೋಟಿಸ್‌ ನೀಡಿರುವುದಕ್ಕೆ ನನಗೆ ಪಾಪ ಪ್ರಜ್ಞೆ ಕಾಡುತ್ತಿಲ್ಲ. 15 ದಿನ ತಡವಾಗಿ ನೋಟಿಸ್‌ ತಲುಪಲು ಕಾರಣವೇನೆಂದು ಗೊತ್ತಿಲ್ಲ. ಆದರೆ, ಅವರ ನೋಟಿಸ್‌ಗೆ ನಾನು ನೀಡಿದ ಉತ್ತರದ ಪತ್ರ ಬೇಗ ತಲುಪುವಂತೆ ಸ್ಪೀಡ್‌ ಪೋಸ್ಟ್‌ ಮಾಡಿದ್ದೇನೆ ಎಂದರು.

ಕಾಂಗ್ರೆಸ್‌ ಹೈಕಮಾಂಡ್‌ನ‌ ಯಾವುದೇ ನಾಯಕರನ್ನು ತಾವು ಟೀಕಿಸಿಲ್ಲ. ಹೀಗಿದ್ದರೂ ಕೆಪಿಸಿಸಿ ಅಧ್ಯಕ್ಷರು ನೋಟಿಸ್‌ ನೀಡುವ ಮೂಲಕ ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುವವರನ್ನು ಮುಜುಗರಕ್ಕೀಡು ಮಾಡಿದ್ದು, ಈ ಆಪಾದನೆ ಕಪೋಲಕಲ್ಪಿತ ಮತ್ತು ಇದರ ಹಿಂದೆ ಉದ್ದೇಶಿತ ಹುನ್ನಾರವಿದೆ ಎಂದು ಕಿಡಿಕಾರಿದರು.

ತಾವೂ ಸೇರಿದಂತೆ ಹಿರಿಯ ಮುಖಂಡರಾದ ಜನಾರ್ದನ ಪೂಜಾರಿ, ಜಾಫ‌ರ್‌ ಷರೀಫ್ ಮಾಜಿಗಳಾಗಿದ್ದು, ಶಾಸಕಾಂಗ ಪಕ್ಷದ ಸದಸ್ಯರಲ್ಲ, ನಾವೆಲ್ಲ ಎಐಸಿಸಿ ಸದಸ್ಯರಷ್ಟೇ. ಹೀಗಾಗಿ ತಮಗೆ ನೋಟಿಸ್‌ ನೀಡುವ ಅಧಿಕಾರ ನಿಮಗಿಲ್ಲ. ಹೀಗಿದ್ದರೂ ಇಲ್ಲದ ಅಧಿಕಾರವನ್ನು ಚಲಾಯಿಸಲು ನಿಮಗೆ ಅಧಿಕಾರ ನೀಡಿದವರ್ಯಾರು? ಮತ್ತು ಇದರ ಹಿಂದಿನ ಉದ್ದೇಶ ಹಾಗೂ ಕೈವಾಡವೇನು ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ವರಿಷ್ಠರನ್ನು ಎಂದಿಗೂ ಟೀಕಿಸಿಲ್ಲ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಉಸ್ತುವಾರಿಗಳಷ್ಟೇ ಎಂದು ಹೇಳಿದ್ದೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡು  ನೋಟಿಸ್‌ ನೀಡಲಾಗಿದೆ. ಅಲ್ಲದೆ ಈ ನೋಟಿಸ್‌ಗೆ ಉತ್ತರ ನೀಡಿರುವ ತಮಗೆ ಮತ್ತೂಂದು ನೋಟಿಸ್‌ ನೀಡಿದರೂ ತಾವು ಹೆದರುವುದಿಲ್ಲ ಎಂದರು.

Advertisement

ಮೂರು ಹುದ್ದೆ ನಿರ್ವಹಣೆ ಕಷ್ಟ:
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ಗೆ ಗೃಹ ಸಚಿವ, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ 3 ಹುದ್ದೆಗಳನ್ನು ನಿಭಾಯಿಸಲು ಆಗುತ್ತಿಲ್ಲ. ಹೀಗಾಗಿ 3 ಕಡೆಗಳಲ್ಲಿ ಕೆಲಸ ಮಾಡುವ ಅವರಿಗೆ ಎಲ್ಲದಕ್ಕೂ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಈ ಪರಿಸ್ಥಿತಿ ಮುಂದುವರಿದರೆ ಕೃಷ್ಣ ಅವರಂತೆ ನೀವೂ ಯಾವುದೋ ಭಾಷಣ ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಾಂಗ್ರೆಸ್‌ನಲ್ಲಿ  ಒಬ್ಬ ವ್ಯಕ್ತಿ-ಒಂದು ಹುದ್ದೆಗೆ ಆದ್ಯತೆ ನೀಡಲಾಗಿದೆ. ಅಲ್ಲದೆ ಮುಂಬರುವ ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಸ್ವತಂತ್ರ ಅಧ್ಯಕ್ಷರು ಬೇಕಾಗಿದ್ದಾರೆ ಎಂಬುದಾಗಿ ಪತ್ರದಲ್ಲಿ ಹೇಳಿರುವುದಾಗಿ ವಿಶ್ವನಾಥ್‌ ತಿಳಿಸಿದರು.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅನಗತ್ಯ ವಿಷಯಗಳ ಕುರಿತಂತೆ ಚರ್ಚಿಸುವ ಮೂಲಕ ಸಭೆಯ ಸಮಯವನ್ನು ಹಾಳು ಮಾಡಿಕೊಂಡು ತಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸಲು ತೀರ್ಮಾನಿಸಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.

ಪಕ್ಷದ ಹಿರಿಯರನ್ನು ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದವರನ್ನು ಕರೆದು ಮಾತನಾಡುವ ಸೌಜನ್ಯ ತೋರಿಲ್ಲ. ಹೀಗಾಗಿ ತಮ್ಮ ವೇದನೆಯನ್ನು ನಡುಬೀದಿಯಲ್ಲಿ ಹೇಳಿಕೊಳ್ಳುವುದು ತಮಗೆ ಅನಿವಾರ್ಯವಾಗಿದ್ದು, ತೆರೆದುಕೊಳ್ಳಬೇಕಾದ ನಿಮ್ಮ ಬಾಗಿಲುಗಳು ಮುಚ್ಚಿವೆ. ಆದರೆ, ಈಗಲೂ ಕಾಲ ಮಿಂಚಿಲ್ಲ, ಇದನ್ನೆಲ್ಲಾ ಸರಿಪಡಿಸಿಕೊಳ್ಳಲು ಸಮಯವಿದೆ. ಹೀಗಾಗಿ ನೀವು ಪ್ರಾಮಾಣಿಕರಾಗಿದ್ದರೆ ಸರಿಮಾಡಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next