ಮೈಸೂರು : ಸಿದ್ದರಾಮಯ್ಯ ಮತ್ತು ತಂಡದವರು ಬ್ರಿಟಿಷರಿದ್ದಂತೆ. ವಲಸಿಗರಾಗಿ ಬಂದು ಮೂಲ ಕಾಂಗ್ರೆಸ್ಸಿಗರನ್ನು ಓಡಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಟೀಕಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷರು ಹೇಗೆ ಭಾರತಕ್ಕೆ ಬಂದು ಭಾರತಿಯರನ್ನೇ ಓಡಾಡಿಸಿದರು. ಅದೇ ರೀತಿ ಸಿದ್ದರಾಮಯ್ಯ ಮತ್ತು ಅವರ ಗ್ಯಾಂಗ್ ಮೂಲ ಕಾಂಗ್ರೆಸಿಗರನ್ನು ಓಡಾಡಿಸುತ್ತಿದೆ. ರೋಷನ್ ಬೇಗ್ ಆದಿಯಾಗಿ ಅಲ್ಪಸಂಖ್ಯಾತರನ್ನು ತುಳಿದರು. ಸಿದ್ದರಾಮಯ್ಯರನ್ನು ಯಾರು ಪ್ರಶ್ನೆ ಮಾಡುವಂತಿಲ್ಲ. ಮೈಸೂರು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ಕಾಂಗ್ರೆಸನ್ನೇ ಮುಗಿಸುವಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.
ಭ್ರಷ್ಟಾಚಾರಕ್ಕೆ ಲಸಿಕೆ ಯಾವಾಗ ಎಂಬ ಸಿದ್ದರಾಮಯ್ಯ ಟ್ವಿಟ್ ವಿಚಾರವಾಗಿ ಮಾತನಾಡಿ, ಇದ್ದ ಲೋಕಯುಕ್ತ ಎಂಬ ಲಸಿಕೆಯನ್ನು ನಾಶ ಮಾಡಿದವರು ಯಾರು ಸಿದ್ದರಾಮಯ್ಯ? ನಿಮ್ಮ ಅರ್ಕಾವತಿ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಲೋಕಯುಕ್ತವನ್ನು ಬಾಗಿಲು ಹಾಕಿದಿರಿ. ಜನರೇನು ದಡ್ಡರು ಎಂದುಕೊಂಡಿದ್ದೀರಾ ಎಂದು ವಾಗ್ದಾಳಿ ನಡೆಸಿದರು.
ಹೊಂದಾಣಿಕೆ ರಾಜಕೀಯ:
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರದ ಬ್ರಹ್ಮಾಂಡ ಭ್ರಷ್ಟತೆ ನೋಡಿದ್ರೆ, ನಾವೆಲ್ಲಾ ದಂಗೆ ಎದ್ದು ಯಾವ ಪುರುಷಾರ್ಥಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಬೀಳಿಸಿದ್ದೇವೊ ಅನ್ನಿಸುತ್ತಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಎಲ್ಲೆ ಮೀರಿದೆ. ಭ್ರಷ್ಟಾಚಾರ ಮಾತ್ರವಲ್ಲದೆ ಸಿಡಿ ಕೇಸ್ ನಲ್ಲಿ ಕೂಡ ಅಡ್ಜೆಸ್ಟ್ ಮೆಂಟ್ ನಡೆಯುತ್ತಿದೆ. ಇದು ಒಬ್ಬರಿಗೊಬ್ಬರು ಅಡ್ಜೆಸ್ಟ್ ಮಾಡಿಕೊಳ್ಳುತ್ತಿರುವ ಯಡಿಯೂರಪ್ಪ ಅವರ ನ್ಯಾಷನಲ್ ಗೌರ್ನಮೆಂಟ್. ಸಿದ್ದರಾಮಯ್ಯ ಅವರು ತಮ್ಮ ಅರ್ಕಾವತಿ ಡಿ ನೋಟಿಫಿಕೇಷನ್ ಹಗರಣ ಮುಚ್ಚಿ ಹಾಕಲು ಸಿಎಂ ಜೊತೆ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದರು.
ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ ಅಲ್ಲ. ಅದು ನ್ಯಾಷನಲ್ ಸರ್ಕಾರ. ಸಿದ್ದರಾಮಯ್ಯ-ಕುಮಾರಸ್ವಾಮಿ ಪರಸ್ಪರರನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಇಬ್ಬರೂ ಸೇರಿಕೊಂಡು ಯಡಿಯೂರಪ್ಪ ಅವರನ್ನು ರಕ್ಷಿಸುತ್ತಿದ್ದಾರೆ. ಇದು ಒಬ್ಬೊರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.