Advertisement

ವಿಶ್ವನಾಥ್‌ ಮನವೊಲಿಕೆ ಭರವಸೆ ನೀಡಿದ ಸಿಎಂ

12:36 PM Apr 28, 2017 | Team Udayavani |

ಮೈಸೂರು: ಪಕ್ಷದಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಅಸಮಾಧಾನಗೊಂಡು ಕಾಂಗ್ರೆಸ್‌ ತೊರೆಯಲು ಮುಂದಾಗಿರುವ ಮಾಜಿ ಸಂಸದ ಎಚ್‌.ವಿಶ್ವನಾಥ್‌ ಅವರ ಮನವೊಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ.

Advertisement

ಗುರುವಾರ ಬೆಳಗ್ಗೆ ಗೃಹಕಚೇರಿ ಕಾವೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಪ್ರದೇಶ ಕುರುಬರ ಸಂಘದ ಮುಖಂಡರ ನಿಯೋಗಕ್ಕೆ ದುಬೈ ಪ್ರವಾಸದಿಂದ ವಾಪಸ್ಸಾದ ಬಳಿಕ ದೂರವಾಣಿಯಲ್ಲಿ ವಿಶ್ವನಾಥ್‌ ಜತೆಗೆ ಮಾತನಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ವಿಶ್ವನಾಥ್‌ಗೆ ಅನ್ಯಾಯ ಮಾಡಬೇಕು ಎಂಬುದು ನನ್ನ ಉದ್ದೇಶವಲ್ಲ. ಅವರ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ. ಅದರೆ, ವಿಶ್ವನಾಥ್‌ ನನ್ನ ಬಗ್ಗೆ ಮಾಧ್ಯಮಗಳಿಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುತ್ತಲೇ ಬಂದಿದ್ದಾರೆ.

ನನ್ನ ವಿರುದ್ಧ ಇಷ್ಟೆಲ್ಲಾ ಮಾತನಾಡಿದರೂ ನಾನು ಯಾವತ್ತಾದರೂ ವಿಶ್ವನಾಥ್‌ ಬಗ್ಗೆ ಮಾತನಾಡಿದ್ದೇನಾ ಎಂದು ನಿಯೋಗದಲ್ಲಿದ್ದ ಮುಖಂಡರಿಗೆ ಪ್ರಶ್ನೆ ಮಾಡಿದ ಅವರು, ಮೇ 1ರಂದು ದುಬೈನಿಂದ ಬಂದ ಮೇಲೆ ಫೋನ್‌ ಮಾಡಿ ವಿಶ್ವನಾಥ್‌ ಜತೆಗೆ ಮಾತನಾಡುತ್ತೇನೆ ಹೋಗಿ ಎಂದು ಭರವಸೆ ನೀಡಿದ್ದಾರೆ.

ವಿಧಾನಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಹಾಗೂ ಶಾಸಕ ವರ್ತೂರ್‌ ಪ್ರಕಾಶ್‌ ಅವರುಗಳೂ ಸಹ ಎಚ್‌. ವಿಶ್ವನಾಥ್‌ ಅವರಿಗೆ ದೂರವಾಣಿ ಕರೆ ಮಾಡಿ, ಕುಳಿತು ಮಾತನಾಡುವ ಮೂಲಕ ಎಲ್ಲವನ್ನೂ ಸರಿಪಡಿಸೋಣ,

Advertisement

ಯಾವುದಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದು ಸಮಾಧಾನದ ಮಾತುಗಳನ್ನು ಹೇಳಿದಾಗ ಕಳೆದ ಮೂರು ವರ್ಷಗಳಿಂದ ಪಕ್ಷದೊಳಗೆ ತಾವು ಅನುಭವಿಸುತ್ತಿರುವ ನೋವು, ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ವೇಳೆ ಪಕ್ಷ ತಮ್ಮನ್ನು ನಡೆಸಿಕೊಂಡ ರೀತಿ ಬಗ್ಗೆ ವಿಶ್ವನಾಥ್‌ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಮಾಜಿ ಶಾಸಕ ಚಂದ್ರಶೇಖರ್‌, ಮೈಸೂರು ಮಹಾ ನಗರ ಪಾಲಿಕೆ ಸದಸ್ಯ ರಮೇಶ್‌, ಕುರುಬರ ಸಂಘದ ನಿರ್ದೇಶಕ ಸುಬ್ರಹ್ಮಣ್ಯ, ಮುಖಂಡರಾದ ಕೆಇಬಿ ಸೋಮು, ನಾಗಣ್ಣ, ರಮೇಶ್‌ ಇತರರು ನಿಯೋಗದಲ್ಲಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಹೀಗಾಗಿ ತಾವು ಕಾಂಗ್ರೆಸ್‌ ಪಕ್ಷದಿಂದ ಹೊರಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಮಾಜಿ ಸಂಸದ ವಿಶ್ವನಾಥ್‌ ಕಳೆದ ಮೂರ್‍ನಾಲ್ಕು ದಿನಗಳಿಂದ ತಮ್ಮ ಬೆಂಬಲಿಗರು,

ಹಿತೈಷಿಗಳ ಜತೆಗೆ ಸರಣಿ ಸಭೆಗಳನ್ನು ನಡೆಸಿ ಅವರ ಅಭಿಪ್ರಾಯ ಕೇಳಿದ್ದರು. ಈ ಹಿನ್ನೆಲೆ ಜಿಲ್ಲೆಯ ಕುರುಬ ಸಮುದಾಯದ ಮುಖಂಡರು ವಿಶ್ವನಾಥ್‌ ಅವರನ್ನು ಕಾಂಗ್ರೆಸ್‌ ಪಕ್ಷದಲ್ಲೇ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ನಿಯೋಗ ತೆರಳಿ ಒತ್ತಡ ಹೇರಲು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next