ಬೆಳ್ತಂಗಡಿ: ಶಿಕ್ಷಣ ವ್ಯವಸ್ಥೆ ಇಂದು ಇಂಗ್ಲಿಷ್ ವ್ಯಾಮೋಹದಿಂದ ನಮ್ಮೊಳಗಿನ ಭಾಷಾ ಆತ್ಮವನ್ನು ದೂರ ಮಾಡುತ್ತಿರುವ ಪರಿಣಾಮ ಸಂಸ್ಕೃತಿಯ ತಳಪಾಯವನ್ನು ಪ್ರಶ್ನಿಸುವ ಮಟ್ಟಿಗೆ ನಾವು ಬಂದು ನಿಂತಿದ್ದೇವೆ. ಆದರೆ ಡಾ| ವೀರೇಂದ್ರ ಹೆಗ್ಗಡೆಯವರ ಈ ಕಲ್ಪನೆ ಮಕ್ಕಳಲ್ಲಿ ಬದುಕಿನ ಮೌಲ್ಯ ರೂಪಿಸುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆಸಿದ 27ನೇ ವರ್ಷದ ರಾಜ್ಯ ಮಟ್ಟದ ಜ್ಞಾನ ಮಂಜೂಷ, ಜ್ಞಾನ ಪಿಯೂಷ ಪುಸ್ತಕಗಳನ್ನಾಧರಿಸಿದ ಸ್ಪರ್ಧೆ ವಿಜೇತರಿಗೆ ಶನಿವಾರ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಹಮ್ಮಿಕೊಂಡ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಭವಿಷ್ಯದಲ್ಲಿ ಮಕ್ಕಳ ಆದರ್ಶ ಬೆಳೆಸುವ ಸದುದ್ದೇಶದಿಂದ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಗೊಳಿಸುವ ಮೌಲ್ಯವನ್ನು ನಾವು ನೀಡಬೇಕಿದೆ. ಪ್ರತಿಯೊಬ್ಬ ವ್ಯಕ್ತಿ ತನ್ನನ್ನು ತಾನು ಉದ್ಧರಿಸುವ ಸಂಕಲ್ಪ ತೊಟ್ಟಲ್ಲಿ ಆತ ಇತರರನ್ನು ಪರಿವರ್ತನೆ ಮಾಡಲು ಸಾಧ್ಯ ಎಂದರು.
ರಾಜ್ಯ ಶಿಕ್ಷಣ ಸಂಶೋಧನೆ ತರಬೇತಿ ಇಲಾಖೆ ನಿರ್ದೇಶಕ ಎಂ.ಆರ್. ಮಾರುತಿ ಮಾತನಾಡಿ, ರಾಜ್ಯಾದ್ಯಂತ ಸ್ಪರ್ಧೆಯನ್ನು ವಿಸ್ತರಿಸಲು ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣದ ಸಹಕಾರ ಬಯಸಲಾಗುವುದು ಎಂದರು.
ಧರ್ಮಸ್ಥಳದ ಸುರೇಂದ್ರ ಕುಮಾರ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ ಉಪಸ್ಥಿತರಿದ್ದರು.ಯೋಗ ಮತ್ತು ನೈತಿಕ ಶಿಕ್ಷಣ ನಿರ್ದೇಶಕ ಡಾ| ಶಶಿಕಾಂತ್ ಜೈನ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಜಿಲ್ಲಾ ಸಂಘಟಕ ಅಶೋಕ ಸಿ. ಪೂಜಾರಿ ವಂದಿಸಿದರು. ಶಿಕ್ಷಕ ಸದಾಶಿವ ನಾಯಕ್ ಕಾರ್ಯ ಕ್ರಮ ನಿರೂಪಿಸಿದರು.