Advertisement

ವಿಶ್ವೇಶತೀರ್ಥರು ಓಡಾಡುವ ದೇವರು: ಸಚಿವ ಜಿಟಿಡಿ ಬಣ್ಣನೆ

08:59 PM Jun 01, 2019 | Team Udayavani |

ಮೈಸೂರು: ಸಿದ್ದಗಂಗಾ ಶ್ರೀಗಳಾದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ನಡೆದಾಡುವ ದೇವರು ಎಂದಿದ್ದೆವು. ಪೇಜಾವರ ಶ್ರೀಗಳು ಓಡಾಡುವ ದೇವರು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಬಣ್ಣಿಸಿದರು. ಮೈಸೂರಿನ ಸರಸ್ವತಿಪುರಂನ ಶ್ರೀಕೃಷ್ಣಧಾಮದ ರಜತಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

Advertisement

ನರೇಂದ್ರಮೋದಿ ಅವರು ಪ್ರಧಾನಮಂತ್ರಿಗಳಾಗಿ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿದ್ದ ವೇಳೆ ವಿಶ್ವೇಶತೀರ್ಥರು ವಿಜೃಂಭಿಸುತ್ತಿದ್ದರು. ಆದಿಚುಂಚನಗಿರಿ ಮಹಾ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜೊತೆಗೆ ದೆಹಲಿಗೆ ಹೋಗಿ ನರೇಂದ್ರಮೋದಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕೇಂದ್ರದ ನೂತನ ಸರ್ಕಾರಕ್ಕೆ ಆಶೀರ್ವಾದ ಮಾಡಿ ಬಂದಿದ್ದಾರೆಂದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೆಹಲಿಗೆ ಹೋಗಿದ್ದ ಶ್ರೀಗಳು ರಾತ್ರಿಯೇ ಬೆಂಗಳೂರಿಗೆ ಬಂದು, ಉಡುಪಿಗೆ ತೆರಳಿ ಅಲ್ಲಿಂದ ನೇರವಾಗಿ ಮೈಸೂರಿಗೆ ಬಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಅವರನ್ನು ಓಡಾಡುವ ದೇವರು ಎನ್ನಬಹುದು. ಅವರ ಆಶೀರ್ವಾದ ಎಲ್ಲರ ಮೇಲಿರಲಿ, ಮಳೆ-ಬೆಳೆ ಚೆನ್ನಾಗಿ ಆಗಿ ದೇಶಕ್ಕೆ ಸುಖ-ಸಮೃದ್ಧಿ ದೊರಕಲಿ ಎಂದು ಆಶಿಸಿದರು.

ಅಧಿಕಾರ ಶಾಶ್ವತವಲ್ಲ: ಮೈಸೂರು ಕಾವೇರಿ ನದಿ ಪಕ್ಕದಲ್ಲಿರುವುದರಿಂದ ಇಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ, ಮೈಸೂರಿಗೆ ಇರುವಷ್ಟು ಕುಡಿಯುವ ನೀರಿನ ತೊಂದರೆ ಬೇರೆಲ್ಲೂ ಕಂಡುಬರುವುದಿಲ್ಲ. ಹೀಗಾಗಿ ಮೈಸೂರಿಗೆ ಮಳೆ ಬಹಳ ಮುಖ್ಯ ಎಂದರು.

ಕಳೆದ ಐದಾರು ವರ್ಷಗಳಿಂದ ಸತತ ಬರಗಾಲದಿಂದ ಮೈಸೂರಿಗೆ ಕುಡಿಯುವ ನೀರಿಗೆ ಕಷ್ಟ ಪಟ್ಟಿದ್ದೇವೆ. ಮುಂದಿನ 5 ರಿಂದ 10 ವರ್ಷಗಳಲ್ಲಿ ಮೈಸೂರು ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸಬೇಕೆಂಬುದು ನಮ್ಮ ಕನಸು, ಅದಕ್ಕಾಗಿ ಉಂಡವಾಡಿ ಯೋಜನೆಯನ್ನು ಮಂಜೂರು ಮಾಡಿಸಿರುವುದಾಗಿ ಹೇಳಿದರು.

Advertisement

ಮೈಸೂರು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ರಾಜಧಾನಿ. ಇಂತಹ ನಗರದಲ್ಲಿ 25 ವರ್ಷಗಳ ಹಿಂದೆ ಶ್ರೀಕೃಷ್ಣಧಾಮ ಕಟ್ಟಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿರುವುದು ಜೀವನದಲ್ಲಿ ಎಲ್ಲರಿಗೂ ಸುಖ-ಶಾಂತಿ-ನೆಮ್ಮದಿ ದೊರಕಲಿ ಎಂಬ ಸುದುದ್ದೇಶದಿಂದ ಎಂದರು.

ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮುಖ್ಯ. ಈ ನಿಟ್ಟಿನಲ್ಲಿ ನಾವು ಅಧಿಕಾರದಲ್ಲಿದ್ದಾಗ ಶಾಶ್ವತವಾದ ಯಾವ ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ, ಹೀಗಾಗಿ ಶ್ರೀಕೃಷ್ಣಧಾಮದ ಪಿಯು ಕಾಲೇಜಿಗೆ ಸರ್ಕಾರದಿಂದ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದರು.

ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಶ್ರೀಪಾದಂಗಳು ಆಶೀರ್ವಚನ ನೀಡಿ, ಭಗವಂತನನ್ನು ಭಕ್ತಿಯಿಂದ ನೆನೆದರೆ ನಮ್ಮ ಯೋಗಕ್ಷೇಮ ನೋಡಿಕೊಳ್ಳುತ್ತಾನೆ. ನಾವು ದೇವರಿಗಾಗಿ ವ್ರತ ಮಾಡಿದರೆ, ದೇವರು ಭಕ್ತರಿಗಾಗಿ ವ್ರತ ಮಾಡುತ್ತಾನೆಂದರು.

ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳು, ರವಿಶಾಸ್ತ್ರೀ, ಜಯರಾಂ ಭಟ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next