Advertisement
ವಿಷು ಅಥವಾ ಬಿಸು ಹಬ್ಬದ ಅಂಗ ವಾಗಿ ನಾಡಿನ ಪ್ರಧಾನ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ಭಾರೀ ಸಂಖ್ಯೆಯಲ್ಲಿ ಭಕ್ತರು ನೆರೆದು ವಿಶೇಷ ಪೂಜೆ, ಪುನಸ್ಕಾರ ಸಲ್ಲಿಸಿದರು. ಮುಂಜಾನೆ ಎದ್ದು ಮನೆಗಳಲ್ಲಿ ಸಿದ್ಧಪಡಿಸಿದ ಕಣಿ ಕಂಡು ಆ ಬಳಿಕ ಹತ್ತಿರದ ದೇವಸ್ಥಾನ, ದೈವಸ್ಥಾನ, ಮಠ, ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ದೇವಸ್ಥಾನಗಳಲ್ಲೂ ಕಣಿ ಸಿದ್ಧಪಡಿಸಲಾಗಿತ್ತು.ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ದೇವರ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು. ವಿವಿಧ ದೇವಸ್ಥಾನಗಳಲ್ಲಿ ಕಣಿ ಸಿದ್ಧಪಡಿಸಿದ್ದು ನೋಡುಗರಿಗೆ ವಿಶೇಷವಾದ ಅನುಭವವನ್ನುಂಟು ಮಾಡಿತು. ನಾಡಿನಾದ್ಯಂತ ದೇವಸ್ಥಾನ, ದೈವಸ್ಥಾನ, ಮಂದಿರಗಳಲ್ಲೂ ಭಾರೀ ಸಂಖ್ಯೆಯಲ್ಲಿ ಭಕ್ತರು ನೆರೆದು ವಿಶೇಷ ಪೂಜೆ ಪುನಸ್ಕಾರ ನಡೆಸಿದರು.
ವರುಷದ ಆರಂಭದಲ್ಲಿ ಮೊದಲ ನೋಟಕ್ಕೆ ಆರಾಧ್ಯ ದೇವರನ್ನು ನೋಡುವ ಕ್ರಮವನ್ನು ಕಣಿ ಕಾಣುವುದು ಎನ್ನಲಾಗುತ್ತದೆ. ಕಣಿ ಎಂದರೆ ಶ್ರೇಯಸ್ಸು, ಶಕುನ, ಭವಿಷ್ಯ ಎಂಬ ಅರ್ಥಗಳೂ ಇವೆ. ಮನೆಯನ್ನು ಸಿಂಗರಿಸಿ ಹಿಂದಿನ ದಿನ ರಾತ್ರಿಯೇ ದೇವರ ವಿಗ್ರಹದ ಜತೆಗೆ ಕಣಿಯ ಸಾಮಗ್ರಿಗಳನ್ನು ಇರಿಸಿ ನವ ಧಾನ್ಯಗಳು, ಬಟ್ಟೆಬರೆ, ಬಂಗಾರದ ಆಭರಣ, ಫಲವಸ್ತುಗಳು ಇತ್ಯಾದಿ ಗಳೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಮತ್ತು ಕನ್ನಡಿ ಇರಿಸಿ ಕಣಿಯನ್ನು ಸಿದ್ಧಪಡಿಸಲಾಗುತ್ತದೆ. ಎಲ್ಲರೂ ಬೆಳಗಿನ ಜಾವವೇ ಎದ್ದು, ಮಿಂದು ಹೊಸಬಟ್ಟೆ ಧರಿಸಿ ಗುರುಹಿರಿಯರಿಗೆ ವಂದಿಸಿ ಅನಂತರ ಕಣಿ ದರ್ಶನ ಪಡೆದು ಕೃತಾರ್ಥರಾದರು.
Related Articles
ಕುಂಬಳೆ ಸೀಮೆಯ ಅತಿ ಪುರಾತನವೂ, ಪ್ರಸಿದ್ಧವೂ ಆದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಎ. 15ರಂದು ಮುಂಜಾನೆ ದೀಪೋತ್ಸವದ ಬಳಿಕ ವಿಷು ಕಣಿಯ ವಿಶೇಷ ಬಲಿ ನಡೆಯಿತು. ವಿಶೇಷ ಬಲಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸಿದರು. ಬಲಿ ಉತ್ಸವದ ಬಳಿಕ ರಾಜಾಂಗಣ ಪ್ರಸಾದ ನಡೆಯಿತು.
Advertisement
ಸಂವೃದ್ಧಿ ಸಂಕಲ್ಪ ದಿನವಿಷು ಹೊಸ ವರುಷದ ಆರಂಭ ಸಂವೃದ್ಧಿ ಸಂಕಲ್ಪದ ದಿನ. ಯಾವುದೇ ಕಾರ್ಯದ ಆರಂಭಕ್ಕೆ,ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಈ ದಿನ ಶುಭ ದಿನ.ವರ್ಷವಿಡೀ ಸುಖ,ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಐಶ್ವರ್ಯದ ಸಂಕೇತವಾಗಿ ತುಳುನಾಡ ಜನರು ಮತ್ತು ಕೇರಳಿಯರು ವಿಷು ಹಬ್ಬವನ್ನು ಆಚರಿಸಿದರು. ಇದೇ ಹಬ್ಬ ತುಳು ನಾಡಿನಲ್ಲಿ “ಬಿಸು ಪರ್ಬ’ ಎಂದೇ ಖ್ಯಾತಿ ಪಡೆದಿದೆ. ಚಿತ್ರ : ಶ್ರೀಕಾಂತ್ ಕಾಸರಗೋಡು