ದಾವಣಗೆರೆ: ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಸೆ. 16 ರಿಂದ 19ರ ವರೆಗೆ ಡಾ| ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ-2018 ನಡೆಯಲಿದೆ ಎಂದು ಉತ್ತರ ಕರ್ನಾಟಕ ಡಾ| ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಕೊಟ್ರೇಶ್ ಬಾರ್ಕಿ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದ ಖ್ಯಾತ ನಟರಾಗಿದ್ದ ಡಾ| ವಿಷ್ಣುವರ್ಧನ್ ನಟನೆಯ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿದ್ದವರು. ಅನೇಕ ಪಾತ್ರಗಳ ಮೂಲಕ ನಾಡಿನ ಜನರಿಗೆ ಜೀವನ ಸಂದೇಶ ನೀಡಿದವರು. ಅಂತಹ ಮಹಾನ್ ನಾಯಕ ನಟನ ಹೆಸರಿನಲ್ಲಿ ರಾಷ್ಟ್ರೀಯ ಉತ್ಸವ ನಡೆಸಲಾಗುತ್ತಿದೆ. ಕಳೆದ ವರ್ಷ ದೇಶದ ರಾಜಧಾನಿ ದೆಹಲಿಯಲ್ಲಿ ನಡೆಸಲಾಗಿತ್ತು. ಈ ವರ್ಷ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸೆ. 16 ರಂದು ಉತ್ಸವದ ಮೊದಲ ದಿನ ಡಾ| ವಿಷ್ಣುವರ್ಧನ್ ಭಾವಚಿತ್ರದ ಭವ್ಯ ಮೆರವಣಿಗೆ ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿ ಇಲ್ಲವೇ ನಾಡಿನ ಖ್ಯಾತ ಸ್ವಾಮೀಜಿ ಮೆರವಣಿಗೆ ಉದ್ಘಾಟಿಸುವರು. ಅಂದು ಸಂಜೆ 4.30ಕ್ಕೆ ಕುವೆಂಪು ಕಲಾಕ್ಷೇತ್ರದಲ್ಲಿ ಚುನಾಯಿತ ಪ್ರತಿನಿಧಿಗಳ ಕಾರ್ಯಕ್ರಮ, ನಂತರ ಡಾ| ವಿಷ್ಣುವರ್ಧನ್ ಯುಗಳಗೀತೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
17 ರಂದು ಕನ್ನಡ ಚಿತ್ರಕೂಟವನ್ನು ಮಾಜಿ ಸಚಿವ ಬಿ.ಎಲ್. ಶಂಕರ್ ಇತರರು ಉದ್ಘಾಟಿಸುವರು. ಆ ನಂತರ ಡಾ| ವಿಷ್ಣುವರ್ಧನ್ ಅವರೊಂದಿಗೆ ನಟಿಸಿರುವ ಲಕ್ಷ್ಮಿ, ಸುಹಾಸಿನಿ, ಅಂಬಿಕಾ. ಭವ್ಯ ಇತರರೊಡಗೂಡಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಕನ್ನಡ ಕಿರು ಚಿತ್ರೋತ್ಸವ, ಸಂಜೆ 6ಕ್ಕೆ ಆಪ್ತಮಿತ್ರನ ಆಪ್ತಕೂಟ ನಡೆಯಲಿದೆ. ಡಾ| ವಿಷ್ಣುವರ್ಧನ್ ಅವರ ಆಪ್ತರು ತಮ್ಮ ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳುವರು ಎಂದು ತಿಳಿಸಿದರು.
ರಾಷ್ಟ್ರೀಯ ಉತ್ಸವದ ಕೊನೆಯ ದಿನ ಬೆಳಗ್ಗೆ ಕರ್ನಾಟಕ ವಾಣಿಜ್ಯ ಮಂಡಳಿಯಿಂದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಕನ್ನಡ ಚಿತ್ರರಂಗದ ಯುವ ನಟ-ನಟಿಯರ ಕಾರ್ಯಕ್ರಮ, ಸಂಜೆ 6ಕ್ಕೆ ಸಂಗೀತ ನಿರ್ದೇಶಕರ ಸಾರಥ್ಯದಲ್ಲಿ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು. ಡಾ| ವಿಷ್ಣುವರ್ಧನ್‌ರವರ ಜನ್ಮದಿನ ಸೆ. 18 ನ್ನು ವಿಶ್ವ ಆದರ್ಶ ದಿನವನ್ನಾಗಿ ಆಚರಿಸಬೇಕು ಎಂದು ಕೋರಿ ಡಾ| ವಿಷ್ಣು ಸೇನಾ ಸಮಿತಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತದೆ. ಸಾಂಸ್ಕೃತಿಕ ರಾಯಭಾರಿ ಆಗಿರುವ ಡಾ| ವಿಷ್ಣುವರ್ಧನ್‌ರವರು ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ನುಡಿದಂತೆ ನಡೆದ ಆದರ್ಶ ನಟ. ಹಾಗಾಗಿ ಅವರ ಜನ್ಮದಿನವನ್ನು ಆದರ್ಶ ದಿನವನ್ನಾಗಿ ಆಚರಣೆ ಮಾಡಬೇಕು ಎಂಬುದು ನಮ್ಮ ಒತ್ತಾಯ ಎಂದು ತಿಳಿಸಿದರು. ಡಾ| ವಿಷ್ಣುವರ್ಧನ್ ಸೇನಾ ಸಮಿತಿ ಜಿಲ್ಲಾ ಅಧ್ಯಕ್ಷ ಪ್ರವೀಣ್‌ಕುಮಾರ್, ಅಜಯ್, ಹಾಲೇಕಲ್ ಸುರೇಶ್, ರಮೇಶ್, ಪರಮೇಶ್, ರವಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.