ಯಶ್ ಕೆರಿಯರ್‌ನಲ್ಲಿ ಮೊದಲು ಸಿಕ್ಕ ದೊಡ್ಡ ಯಶಸ್ಸು “ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಚಿತ್ರದ್ದು ಎಂದರೆ ತಪ್ಪಲ್ಲ. ವಿಷ್ಣುವರ್ಧನ್ ಅವರನ್ನು ಎದೆಮೇಲೆ ಹಚ್ಚೆಹಾಕಿಸಿಕೊಂಡು ಸಖತ್ ರಗಡ್ ಆಗಿ ಕಾಣಿಸಿಕೊಂಡ ಯಶ್‌ಗೆ ಆ ಚಿತ್ರ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತು. ಆ ಚಿತ್ರದ ನಂತರ ಯಶ್ ಹೋದಲ್ಲೆಲ್ಲಾ ಅಭಿಮಾನಿಗಳು ಅವರನ್ನು “ರಾಮಾಚಾರಿ …’ ಎಂದು ಕೂಗಲಾರಂಭಿಸಿದರು. ಈಗ ಯಶ್ “ನಾನು ರಾಮಾಚಾರಿಯಲ್ಲ.
ರಾಮಾಚಾರಿ ಯಾವತ್ತಿದ್ದರೂ ಸಾಹಸ ಸಿಂಹ ವಿಷ್ಣುವರ್ಧನ್. ನಾನು ಆ ರಾಮಾಚಾರಿಯ ಅಭಿಮಾನಿಯಷ್ಟೇ. ಕನ್ನಡ ಚಿತ್ರರಂಗಕ್ಕೆ ಒಬ್ಬರೇ ರಾಮಾಚಾರಿ. ಅದು ನಮ್ಮ ಸಾಹಸ ಸಿಂಹ’ ಎಂದಿದ್ದಾರೆ. ಅಷ್ಟಕ್ಕೂ ಈ ಮಾತನ್ನು ಯಶ್ ಈಗ ಹೇಳಲು ಕಾರಣವೇನೆಂದು ನೀವು ಕೇಳಿದರೆ ಅದಕ್ಕೆ ಉತ್ತರ “ರಾಜಾಸಿಂಹ’. ಅನಿರುದ್ಧ್ ಅವರು “ರಾಜಾಸಿಂಹ’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಪಾತ್ರವನ್ನು ರೀಕ್ರಿಯೇಟ್ ಮಾಡಲಾಗಿದೆ.
ಭಾನುವಾರ ನಡೆದ ಈ ಚಿತ್ರದ ಆಡಿಯೋ ಬಿಡುಗಡೆಗೆ ಯಶ್ ಅತಿಥಿಯಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಅವರು “ನಾನು ಯಾವ ಕಾರಣಕ್ಕೂ ರಾಮಾಚಾರಿ ಅಲ್ಲ. ನಾನು ಕೂಡಾ ವಿಷ್ಣುವರ್ಧನ್ ಅವರ ಅಭಿಮಾನಿ. ಹಾಗಾಗಿ, “ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ಯಲ್ಲಿ ರಾಮಾಚಾರಿಯ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದರು. ಇನ್ನು, ಯಶ್ ಅವರಿಗೆ “ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಚಿತ್ರ ಬಯಸದೇ ಬಂದ ಭಾಗ್ಯವಂತೆ.
“ಆ ತರಹದ ಒಂದು ಸಿನಿಮಾ ಮಾಡುತ್ತೇನೆಂದು ನಾನಂದುಕೊಂಡಿರಲಿಲ್ಲ. ಆದರೆ, ಸಂತೋಷ್ ಆನಂದರಾಮ್ ಬಂದು ಕಥೆ ಕೇಳಿದಾಗ ರೋಮಾಂಚನವಾಯಿತು. ಹಾಗಾಗಿ, ವಿಷ್ಣುವರ್ಧನ್ ಅವರನ್ನು ಎದೆಮೇಲೆ ಹಚ್ಚೆ ಹಾಕಿಸಿಕೊಂಡೆ. ಏಕೆಂದರೆ ಅವರಿರಬೇಕಾದ ಜಾಗ ಅದು. ಆ ಚಿತ್ರವನ್ನು ಜನ ಇಷ್ಟಪಡುವ ಮೂಲಕ ನನಗೂ ದೊಡ್ಡ ಯಶಸ್ಸು ಕೊಟ್ಟಿತು’ ಎಂದು ರಾಮಾಚಾರಿಯ ದಿನಗಳನ್ನು ಮೆಲುಕು ಹಾಕಿದರು ಯಶ್.
ಸ್ಮಾರಕ ಬಿಕ್ಕಟ್ಟು ಬಗೆಹರಿಸಿ: ಸರ್ಕಾರಕ್ಕೆ ಯಶ್ ಮನವಿ: ವಿಷ್ಣುವರ್ಧನ್ ಅವರ ಸ್ಮಾರಕದ ವಿಷಯದಲ್ಲಿ ಸಾಕಷ್ಟು ಗೊಂದಲಗಳು ನಡೆಯುತ್ತಿರುವುದನ್ನು ಗಮನಿಸಿರುವ ಯಶ್, ವಿಷ್ಣುವರ್ಧನ್ ಸ್ಮಾರಕ ಬಿಕ್ಕಟ್ಟನ್ನು ಕೂಡಲೇ ಬಗೆಹರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
“ವಿಷ್ಣುವರ್ಧನ್ ಅವರಿಗೆ ಅವರದ್ದೇ ಆದ ಗೌರವವಿದೆ, ದೊಡ್ಡ ಅಭಿಮಾನಿ ವರ್ಗವಿದೆ. ಕೂಡಲೇ ಸರ್ಕಾರ ಗಮನಹರಿಸಿ, ಸ್ಮಾರಕ ವಿಚಾರದಲ್ಲಿನ ಬಿಕ್ಕಟ್ಟನ್ನು ಬಗೆಹರಿಸಿಬೇಕು. ಒಂದು ವೇಳೆ ಆಗಲ್ಲ ಎಂದಾದರೆ ನಾವು ಅಭಿಮಾನಿಗಳು ಸೇರಿ ಮಾಡುತ್ತೇವೆ’ ಎಂದರು.