ಮೈಸೂರು: ರಾಜವಂಶಸ್ಥೆ ವಿಶಾಲಾಕ್ಷೀ ದೇವಿ(56) ಅವರ ಅಂತ್ಯಸಂಸ್ಕಾರ ನಗರದ ಮೈಸೂರು-ಊಟಿ ರಸ್ತೆಯಲ್ಲಿರುವ
ಮಧುವನ (ಮನುವನ)ದಲ್ಲಿ ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಯದುವಂಶದ ಕುಡಿ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷೀ ದೇವಿ ಅವರು ಅನ್ಯಾರೋಗ್ಯದ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಹೀಗಾಗಿ, ರಾಜವಂಶಸ್ಥರ ಅಂತ್ಯಕ್ರಿಯೆ ನಡೆಸುವ ಮಧುವನದಲ್ಲೇ ಮೃತರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿತ್ತು.
ಮೃತರ ಪಾರ್ಥಿವ ಶರೀರವನ್ನು ಶನಿವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿನಿಂದ ಮೈಸೂರಿಗೆ ತರಲಾಯಿತು. ಈ ಸಂದರ್ಭದಲ್ಲಿ ಸಚಿವ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ರಾಜವಂಶದ ಅನೇಕರೊಂದಿಗೆ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಬಳಿಕ, ಸಕಲ ಸರ್ಕಾರಿ ಗೌರವಗಳೊಂದಿಗೆ,ರಾಜಮನೆ ತನದ ಸಂಪ್ರದಾಯದಂತೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಮಧ್ಯೆ, ವಿಶಾಲಾಕ್ಷಿದೇವಿ,ಪುಟ್ಟರತ್ನಮ್ಮಣ್ಣಿ ಅವರ ನಿಧನಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂತಾಪ ವ್ಯಕ್ತಪಡಿಸಿದ್ದಾರೆ.