Advertisement

ವಿಶಾಲಾ ಗಾಣಿಗ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಬಾಡಿಗೆ ಹಂತಕನ ಬಂಧನ

01:02 AM Jul 10, 2022 | Team Udayavani |

ಕೋಟ: ಬ್ರಹ್ಮಾವರದ ಖಾಸಗಿ ವಸತಿಗೃಹವೊಂದರಲ್ಲಿ ನಡೆದ ಗೃಹಿಣಿ ವಿಶಾಲಾ ಗಾಣಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ, ಬಾಡಿಗೆ ಹಂತಕ ರೋಹಿತ್‌ ರಾಣಾ ಪ್ರತಾಪ್‌ ನಿಶಾದ್‌ ಯಾನೆ ಸೋನು (21) ಎಂಬಾತನನ್ನು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ತಂಡ ಬಂಧಿಸಿದೆ.

Advertisement

2021 ಜು. 12ರಂದು ಬ್ರಹ್ಮಾವರ ತಾಲೂಕು ಕುಮ್ರಗೋಡು ಗ್ರಾಮದ ಖಾಸಗಿ ರೆಸಿಡೆನ್ಸಿಯಲ್ಲಿ ಒಬ್ಬಂಟಿಯಾಗಿದ್ದ ವಿಶಾಲಾ ಗಾಣಿಗರನ್ನು ಕೊಲೆ ಮಾಡಲಾಗಿತ್ತು ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಹಾಗೂ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಸುಲಿಗೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಾಮಕೃಷ್ಣ ಹಾಗೂ ಉತ್ತರ ಪ್ರದೇಶದ ಗೋರಖ್‌ಪುರದ ಸುಪಾರಿ ಹಂತಕ ಸ್ವಾಮಿನಾಥ ನಿಶಾದನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಚಿನ್ನಾಭರಣವನ್ನು ಸ್ವಾಧೀನಪಡಿಸಿಕೊಂಡಿದ್ದರು. ಈ ಇಬ್ಬರು ಆರೋಪಿಗಳು ಕಳೆದ ಒಂದು ವರ್ಷದಿಂದ ಹಿರಿಯಡಕ ಜೈಲಿನಲ್ಲಿದ್ದಾರೆ. ಆದರೆ ಪ್ರಕರಣದ ಇನ್ನೋರ್ವ ಆರೋಪಿ ಹಂತಕ ರೋಹಿತ್‌ ರಾಣಾ ಪ್ರತಾಪ್‌ ನಿಶಾದ್‌ ಯಾನೆ ಸೋನು ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಹಾಗೂ ಈತನ ಬೆನ್ನತ್ತಿ ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶಗಳಿಗೆ ಪೊಲೀಸ್‌ ತಂಡ ತೆರಳಿತ್ತು. ಆದರೆ ಈತ ಪತ್ತೆಯಾಗದೆ ಪೊಲೀಸರಿಗೆ ತಲೆನೋವು ತರಿಸಿದ್ದ. ಈ ನಡುವೆ ಆತ ಕಾಣೆಯಾಗಿದ್ದಾನೆ ಎಂದು ಹೆತ್ತವರು ಮುಂಬಯಿಯ ಬೈಯ ಗಾಮ್‌ದೇವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಬೆನ್ನುಬಿಡದೆ ತನಿಖೆ; ಬಂಧಿಸುವಲ್ಲಿ ಯಶಸ್ವಿ
ಪೊಲೀಸರ ವಿಶೇಷ ತಂಡವು 1 ವರ್ಷದಿಂದ ಹಂತಕನ ಸುಳಿವನ್ನು ಅರಸಿ ಬೆನ್ನು ಹಿಡಿದಿತ್ತು. ಈತ ವಿಶಾಲಾ ಕೊಲೆಯ ಅನಂತರ ಮಹಾರಾಷ್ಟ್ರ ದಲ್ಲಿದ್ದ ಸ್ವಂತ ಮನೆಯನ್ನು ಬಿಟ್ಟು ನೇಪಾಲ ಗಡಿಯಲ್ಲಿನ ಮಹಾರಾಜ ಗಂಜ್‌ ಪರಿಸರದಲ್ಲಿ ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿತ್ತು.

ಸೋಮವಾರ ನ್ಯಾಯಾಲಯಕ್ಕೆ ಹಾಜರು?
ಆರೋಪಿಯನ್ನು ಜಿಲ್ಲೆಗೆ ಕರೆತರುತ್ತಿದ್ದು ಸೋಮವಾರ ಉಡುಪಿಯ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ ಅನಂತರ ವಿಚಾರಣೆಗಾಗಿ ಪೊಲೀಸ್‌ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ.

Advertisement

ವಿಶೇಷ ತಂಡ
ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಎನ್‌. ವಿಷ್ಣುವರ್ಧನ ಐ.ಪಿ.ಎಸ್‌., ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಸ್‌.ಟಿ. ಸಿದ್ದಲಿಂಗಪ್ಪ ಅವರ ಮಾರ್ಗ ದರ್ಶನದಂತೆ, ಉಪಾಧೀಕ್ಷಕ ಸುಧಾಕರ ಎಸ್‌. ನಾಯ್ಕ ಅವರ ನಿರ್ದೇಶನದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಬ್ರಹ್ಮಾವರ ಠಾಣಾ ಪಿ.ಎಸ್‌. ಐ.ಗುರುನಾಥ ಹಾದಿಮನಿ, ಕೋಟ ಠಾಣೆಯ ಪಿ.ಎಸ್‌.ಐ. ಮಧು ಬಿ.ಇ., ಬ್ರಹ್ಮಾವರ ಠಾಣೆಯ ಸಿಬಂದಿ ವೆಂಕಟರಮಣ ದೇವಾಡಿಗ, ರಾಘವೇಂದ್ರ, ಪ್ರವೀಣ್‌ ಶೆಟ್ಟಿಗಾರ್‌, ಕೋಟ ಠಾಣೆಯ ಸಿಬಂದಿ ರಾಘವೇಂದ್ರ, ವಿಜಯೇಂದ್ರ ಹಾಗೂ ಬ್ರಹ್ಮಾವರ ವೃತ್ತ ಕಚೇರಿಯ ಸಿಬಂದಿ ಕೃಷ್ಣಪ್ಪ, ವಾಸುದೇವ ಪೂಜಾರಿ, ಪ್ರದೀಪ್‌ ನಾಯಕ್‌, ಕೃಷ್ಣ ಶೇರುಗಾರ್‌, ಶೇಖರ ಶೇರುಗಾರ್‌, ಜ್ಯೋತಿ ಎಂ., ನಾಗಶ್ರೀ ಎಚ್‌.ಪಿ.ಅವರು ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣ
ನಿಗೂಢ ರೀತಿಯಲ್ಲಿ ನಡೆದ ಒಂಟಿ ಮಹಿಳೆಯ ಈ ಕೊಲೆ ಪ್ರಕರಣ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು ಹಾಗೂ ಕೊಲೆ ಯಾಕಾಗಿ ನಡೆದಿದೆ, ಆರೋಪಿಗಳು ಯಾರು ಎನ್ನುವ ವಿಚಾರ ಹಲವು ದಿನಗಳ ತನಕ ಕುತೂಹಲಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ಪ್ರಕರಣದ ಪ್ರಮುಖ ಸೂತ್ರಧಾರ ವಿಶಾಲಾ ಗಾಣಿಗರ ಪತಿ ರಾಮಕೃಷ್ಣ ಗಾಣಿಗ ಅಮಾಯಕನಂತೆ ನಟಿಸಿದ್ದರಿಂದ ಸತ್ಯಾಸತ್ಯವನ್ನು ಬಯಲಿಗೆಳೆಯುವುದು ಪೊಲೀಸ್‌ ಇಲಾಖೆಗೂ ತಲೆನೋವಾಗಿತ್ತು. ಅನಂತರ ಹೆಚ್ಚಿನ ತನಿಖೆಗಿಳಿದಾಗ ಪತಿ ರಾಮಕೃಷ್ಣ ಗಾಣಿಗ ಈ ಕೊಲೆಯ ಸೂತ್ರಧಾರ, ಆತ ವಿದೇಶ ದಲ್ಲಿದ್ದುಕೊಂಡು ತನ್ನ ಪತ್ನಿಯ ಕೊಲೆಗೆ ಸುಪಾರಿ ನೀಡಿದ್ದಾನೆ ಎನ್ನುವ ಸತ್ಯ ಬಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next